
ಗದಗ: ತಾಲ್ಲೂಕಿನ ಬಳಗಾನೂರ ಗ್ರಾಮದಲ್ಲಿ ಘನಮೌನಿ, ತ್ರಿಕಾಲ ಜ್ಞಾನಿ, ಮೌನತಪಸ್ವಿ ಚಿಕೇನಕೊಪ್ಪದ ಚನ್ನವೀರ ಶರಣರ 31ನೇ ಪುಣ್ಯಸ್ಮರಣೋತ್ಸವ, ಜಾತ್ರಾ ಮಹೋತ್ಸವ, ಸಾಮೂಹಿಕ ವಿವಾಹ, ಧಾರ್ಮಿಕ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜನವರಿ 16ರಿಂದ 26ರ ವರೆಗೆ ನಡೆಸಲು ನಿರ್ಧರಿಸಲಾಯಿತು.
ಬಳಗಾನೂರಿನ ಶಿವಶಾಂತವೀರ ಶರಣರ ಸಾನ್ನಿಧ್ಯದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಭಕ್ತರು, ಶರಣರ ಬಳಗದ ಹಿರಿಯರು ಈ ನಿರ್ಣಯ ಕೈಗೊಂಡರು.
ಸಾನ್ನಿಧ್ಯ ವಹಿಸಿದ್ದ ಶಿವಶಾಂತವೀರ ಶರಣರು ಮಾತನಾಡಿ, ‘ನದಿಯ ನೀರು ನದಿಗಲ್ಲ, ವೃಕ್ಷದ ಫಲ ವೃಕ್ಷಕ್ಕಲ್ಲ, ಶರಣರ ಬದುಕು ಶರಣರಿಗಲ್ಲ ಅದು ಲೋಕದ ಹಿತಕ್ಕೆ ಮಾತ್ರ. ಅದೇರೀತಿ, ಚಿಕೇನಕೊಪ್ಪದ ಚನ್ನವೀರ ಶರಣರು, ಸಜ್ಜಲಗುಡ್ಡದ ಶರಣಮ್ಮ, ನಾಲತ್ವಾಡದ ವೀರೇಶ್ವರ ಶರಣರು ಸೇರಿದಂತೆ ನಾಡಿನ ಶರಣರು ಲೋಕದ ಹಿತಕ್ಕಾಗಿ ತಮ್ಮ ಜೀವನ ಸಮರ್ಪಿಸಿದ್ದಾರೆ’ ಎಂದರು.
‘ಶರಣರ ಪರೋಪಕಾರ ಜೀವನ ನಾಡಿಗೆ ಆದರ್ಶವಾಗಿದೆ. ಈವರೆಗೆ ಬಳಗಾನೂರಿನಲ್ಲಿ ಅದ್ದೂರಿಯಾಗಿ ನಡೆದಿರುವ ಗುರುಗಳ ಪುಣ್ಯಸ್ಮರಣೋತ್ಸವ ಹಾಗೂ ಜಾತ್ರಾ ಮಹೋತ್ಸವಕ್ಕೆ ಮಠದ ಭಕ್ತರ ಕಾಯಕ ಶಕ್ತಿ ಕಾರಣವಾಗಿದೆ’ ಎಂದು ಹೇಳಿದರು.
‘ಜಾತ್ರಾಮಹೋತ್ಸವದ ಅಂಗವಾಗಿ ಜನವರಿ 16ರಿಂದ 26ರ ವರೆಗೆ ಪ್ರವಚನ ನಡೆಯಲಿದೆ. ಜನವರಿ 25ರಂದು ಬೆಳಿಗ್ಗೆ ಸಾಮೂಹಿಕ ವಿವಾಹ ಮಹೋತ್ಸವ ಹಾಗೂ ಸಂಜೆ ಮಹಾರಥೋತ್ಸವ ಅದ್ಧೂರಿಯಾಗಿ ನಡೆಯಲಿದೆ’ ಎಂದರು.
‘ಜ.16ರಿಂದ 26ರ ವರೆಗೆ ನಡೆಯುವ ಎಲ್ಲ ಕಾರ್ಯಕ್ರಮಗಳಲ್ಲಿ ಗ್ರಾಮ ಹಾಗೂ ಸುತ್ತಮುತ್ತಲಿನ ಊರಿನ ಭಕ್ತರು ದಾಸೋಹ ಹಾಗೂ ಸ್ವಚ್ಛತಾ ಕಾರ್ಯಕ್ಕೆ ಕೈ ಜೋಡಿಸಬೇಕು’ ಎಂದು ಮನವಿ ಮಾಡಿದರು.
ಪೂರ್ವಭಾವಿ ಸಭೆಯಲ್ಲಿ ಬಳಗಾನೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಿಂದ ಬಂದಿದ್ದ ಶರಣ ಬಳಗದವರು ಭಾಗವಹಿಸಿ, ಸಲಹೆ, ಅಭಿಪ್ರಾಯ ವ್ಯಕ್ತಪಡಿಸಿದರು.