ADVERTISEMENT

ಕ್ರಿಸ್‌ಮಸ್‌: ಎಲ್ಲೆಡೆ ಮೇಳೈಸಿದ ಸಂಭ್ರಮ

ಚರ್ಚ್‌ಗಳಲ್ಲಿ ಪ್ರಾರ್ಥನೆ, ವಿಶೇಷ ಪೂಜೆ: ರೆಜಿನಾಲ್ಡ್‌ ಪಾಲ್‌ ಅವರಿಂದ ಕ್ರಿಸ್‌ಮಸ್‌ ಸಂದೇಶ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 4:34 IST
Last Updated 26 ಡಿಸೆಂಬರ್ 2025, 4:34 IST
ಕ್ರಿಸ್‌ಮಸ್‌ ಸಂದೇಶ ನೀಡಿದ ವುರ್ಥ್‌ ಸ್ಮಾಕರ ಚರ್ಚ್‌ನ ಫಾದರ್‌ ರೆಜಿನಾಲ್ಡ್‌ ಪಾಲ್‌
ಕ್ರಿಸ್‌ಮಸ್‌ ಸಂದೇಶ ನೀಡಿದ ವುರ್ಥ್‌ ಸ್ಮಾಕರ ಚರ್ಚ್‌ನ ಫಾದರ್‌ ರೆಜಿನಾಲ್ಡ್‌ ಪಾಲ್‌   

ಗದಗ: ಅವಳಿ ನಗರದಲ್ಲಿ ಗುರುವಾರ ಕ್ರಿಸ್‌ಮಸ್‌ ಸಂಭ್ರಮ ಮೇಳೈಸಿತ್ತು. ಚರ್ಚ್‌ಗಳು ಹಾಗೂ ಕ್ರೈಸ್ತರ ಮನೆಗಳಲ್ಲಿ ಯೇಸುಕ್ರಿಸ್ತನ ಹಬ್ಬದ ಸಡಗರ ಜೋರಾಗಿತ್ತು.

ಅವಳಿ ನಗರದಲ್ಲಿನ ವುರ್ಥ್‌ ಸ್ಮಾರಕ ಚರ್ಚ್, ಕ್ಯಾಥೋಲಿಕ್ ಚರ್ಚ್, ಸಂತ ಇಗ್ನೇಷಿಯಸ್ ಚರ್ಚ್, ಚರ್ಚ್ ಆಫ್ ಬ್ಲೆಸ್ಸಿಂಗ್, ಇಆರ್‌ಐ ಚರ್ಚ್, ಎಸ್‍ಪಿಜಿ ಚರ್ಚ್ ಸೇರಿದಂತೆ 12 ಚರ್ಚ್‌ಗಳಲ್ಲೂ ಬುಧವಾರ ರಾತ್ರಿ ಕ್ರಿಸ್‌ಮಸ್ ಕ್ಯಾರಲ್ಸ್‌, ವಿಶೇಷ ಪೂಜೆಗಳು ನಡೆದವು.

ಬುಧವಾರ ರಾತ್ರಿ ಹಾಗೂ ಗುರುವಾರ ಬೆಳಿಗ್ಗೆ ನಡೆದ ವಿಶೇಷ ಪ್ರಾರ್ಥನೆ, ಪೂಜೆಗಳಲ್ಲಿ ಕ್ರೈಸ್ತರು ಶ್ರದ್ಧೆಯಿಂದ ಭಾಗವಹಿಸಿದ್ದರು. ಚರ್ಚ್‌ಗಳಲ್ಲಿ ನಡೆದ ಪ್ರಾರ್ಥನೆಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.

ADVERTISEMENT

ಬೆಟಗೇರಿಯ ವುರ್ಥ್‌ ಸ್ಮಾರಕ ಚರ್ಚ್‌ನ ಫಾದರ್‌ ರೆಜಿನಾಲ್ಡ್‌ ಪಾಲ್‌ ಕ್ರಿಸ್‌ಮಸ್‌ ಸಂದೇಶ ನೀಡಿದರು.

‘ಜೀವನದಲ್ಲಿ ಪ್ರತಿಯೊಬ್ಬರೂ, ಪ್ರತಿಕ್ಷಣವೂ ದೇವರನ್ನು ಆತುಕೊಂಡು ನಡೆಯುತ್ತಿರುತ್ತೇವೆ. ಆದರೂ, ಕೆಲವೊಮ್ಮೆ ದಾರಿ ತಪ್ಪುತ್ತೇವೆ. ವೈಯಕ್ತಿಕ ಜ್ಞಾನಕ್ಕೆ ಸಿಕ್ಕು ಸೈತಾನನ ಮಾತಿಗೆ ಮರುಳಾಗುತ್ತೇವೆ. ಪಾಪದ ಅರಿಕೆಗಳು ಎಲ್ಲರಿಗೂ ಬಾಯಿಪಾಠವಾಗಿವೆ. ಆದರೂ ದೇವರು ಮತ್ತು ಭಕ್ತರ ನಡುವಿನ ಅನುಸಂಧಾನದಲ್ಲಿ ಹೃದಯದ ಲಯ ತಪ್ಪಿದೆ. ಹಾಗಾಗಿ, ಇಂದು ಅರ್ಥಗರ್ಭಿತ ಆರಾಧನೆಗೆ ಗಮನ ನೀಡಬೇಕು. ಸಾಷ್ಟಾಂಗ ನಮಸ್ಕಾರ ಮಾಡಿ ದೇವರನ್ನು ಆರಾಧಿಸಬೇಕು. ಹೀಗೆ ಎರಡು ನಿಮಿಷ ಪ್ರಾರ್ಥನೆ ಮಾಡಿ ನೋಡಿದರೆ ಅದರ ಮಹಿಮೆ ತಿಳಿಯುತ್ತದೆ. ಜೀವಿತದಲ್ಲಿ ಎಲ್ಲರೂ ಅಂತಹ ಮಹಿಮೆ ಕಂಡುಕೊಳ್ಳಬೇಕು’ ಎಂದು ಹೇಳಿದರು.

ಸೇಂಟ್‌ ಜಾನ್ಸ್‌ ಶಾಲೆ ಆವರಣದಲ್ಲಿರುವ ಚರ್ಚ್‌ನಲ್ಲಿ ಭಕ್ತರು ಪ್ರಾರ್ಥನೆ ಸಲ್ಲಿಸಿದರು. ಅಲ್ಲಿ ನಿರ್ಮಿಸಿದ್ದ ಗೋದಲಿ ಪ್ರಮುಖ ಆಕರ್ಷಣೆಯಾಗಿತ್ತು. ಚರ್ಚ್‌ಗೆ ಭೇಟಿ ನೀಡಿದವರು ಮೊಂಬತ್ತಿ ಬೆಳಗಿ ಮೇರಿ ಮಾತೆ, ಯೇಸು ಕ್ರಿಸ್ತನನ್ನು ಬೇಡಿಕೊಂಡರು.

ಪ್ರಾರ್ಥನೆಗೆ ಬಂದವರಿಗೆ ಕೇಕ್‌ ಹಾಗೂ ಕ್ರಿಸ್‌ಮಸ್‌ನ ವಿಶೇಷ ತಿನಿಸು ಕುಸ್ವಾರ್‌ ವಿತರಿಸಲಾಯಿತು. ಬಡವರಿಗೆ ಧನ ಸಹಾಯ ಮಾಡಲಾಯಿತು. ಪ್ರಾರ್ಥನೆ ಬಳಿಕ ಎಲ್ಲರೂ ಕುಟುಂಬದವರು ಹಾಗೂ ಸ್ನೇಹಿತರ ಜತೆಗೂಡಿ ಹಬ್ಬದೂಟ ಸವಿದರು.

ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ ಸೇಂಟ್‌ ಜಾನ್ಸ್‌ ಶಾಲೆ ಆವರಣದಲ್ಲಿ ಚರ್ಚ್‌ಗೆ ಭೇಟಿ ನೀಡಿ ಕ್ರಿಸ್‌ಮಸ್‌ ಹಬ್ಬದ ಶುಭಾಶಯ ಕೋರಿದರು
ಕ್ರಿಸ್‌ಮಸ್‌ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದ ಜನರು