ADVERTISEMENT

ಗದಗ: ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲೇ ಮ್ಯಾನ್‌ಹೋಲ್‌ಗಿಳಿದ ಕಾರ್ಮಿಕ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2022, 16:26 IST
Last Updated 30 ಮಾರ್ಚ್ 2022, 16:26 IST
   

ಗದಗ: ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ, ಮ್ಯಾನ್‌ಹೋಲ್‌ಗೆ ಕಾರ್ಮಿಕರೊಬ್ಬರನ್ನು ಇಳಿಸಿದ್ದ ವಿಡಿಯೊ ವೈರಲ್‌ ಆಗಿವೆ. ಆಧುನಿಕ ಯಂತ್ರಗಳಿದ್ದರೂ ಮ್ಯಾನ್‌ಹೋಲ್‌ಗೆ ಕಾರ್ಮಿಕರನ್ನು ಇಳಿಸಿರುವುದಕ್ಕೆ ಸಾರ್ವಜನಿಕವಾಗಿ ಟೀಕೆ ವ್ಯಕ್ತವಾಗಿದೆ.

ಆದರೆ, ಜಿಲ್ಲಾಧಿಕಾರಿ ಕಚೇರಿ ನಿರ್ವಹಣಾ ಕೋಶದ ಅಧಿಕಾರಿಗಳು ಇಲ್ಲಿ ಮ್ಯಾನುವಲ್‌ ಸ್ಕ್ಯಾವೆಂಜಿಂಗ್‌ ನಡೆದಿಲ್ಲ. ಮ್ಯಾನ್‌ಹೋಲ್‌ಗೆ ಬಿದ್ದಿದ್ದ ಸ್ಪ್ಯಾನರ್‌ ತೆಗೆಯಲು ಐದು ಸೆಕೆಂಡ್‌ ಇಳಿದಿದ್ದ ಸಂದರ್ಭವನ್ನೇ ವಿಡಿಯೊ ಮಾಡಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

‘ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಎರಡು ಮ್ಯಾನ್‌ಹೋಲ್‌ಗಳಲ್ಲಿ ಒಂದು ಬ್ಲಾಕ್‌ ಆಗಿತ್ತು. ಅದರಲ್ಲಿ ಸಿಕ್ಕಿಹಾಕಿಕೊಂಡಿದ್ದ ಕಲ್ಲನ್ನು ಸರಳು ಬಳಸಿ ತೆಗೆಯುವಾಗ ಸ್ಪ್ಯಾನರ್‌ ಕೆಳಗೆ ಬಿತ್ತು. ಮ್ಯಾನ್‌ಹೋಲ್‌ನಲ್ಲಿ ಗಲೀಜು ಇರಲಿಲ್ಲ. ಒಣಗಿದ ಜಾಗವಾಗಿತ್ತು. ಆಗ, ಜಿಲ್ಲಾಧಿಕಾರಿ ಕಚೇರಿ ಹೊರಗುತ್ತಿಗೆ ನೌಕರ ವೆಂಕಪ್ಪ ಅವರು ಸ್ಪ್ಯಾನರ್‌ ಅನ್ನು ಕಾಲಿನಿಂದಲೇ ತೆಗೆಯಲು ಪ್ರಯತ್ನಿಸಿದರು. ಅದು ಸಿಗದ ಕಾರಣ, ಕೆಳಕ್ಕಿಳಿದು ಐದು ಸೆಕೆಂಡ್‌ ಒಳಗೆ ಸ್ಲ್ಯಾನರ್‌ ಎತ್ತಿಕೊಂಡು ಮೇಲೆ ಬಂದರು’ ಎಂದು ಘಟನೆಯನ್ನು ವಿವರಿಸಿದರು.

ADVERTISEMENT

‘ಮ್ಯಾನುವಲ್‌ ಸ್ಕ್ಯಾವೆಂಜಿಂಗ್‌ಗೆ ಬುಟ್ಟಿ, ಸಲಿಕೆ, ಬಕೆಟ್‌ ಮೊದಲಾದ ಸಲಕರಣೆಗಳು ಬೇಕು. ಆದರೆ, ವಿಡಿಯೊ ಗಮನಿಸಿದರೆ ಈ ಉಪಕರಣಗಳು ಇಲ್ಲದಿರುವುದು ಗೋಚರಿಸುತ್ತದೆ. ಸ್ಪ್ಯಾನರ್‌ ತೆಗೆಯಲು ಇಳಿದ ಕ್ಷಣವನ್ನೇ ಯಾರೋ ವಿಡಿಯೊ ಮಾಡಿದ್ದಾರೆ’ ಎಂದು ಜಿಲ್ಲಾಧಿಕಾರಿ ಕಚೇರಿಯ ನಿರ್ವಹಣಾ ಕೋಶದ ಮೇಲ್ವಿಚಾರಕ ಸಿದ್ದಲಿಂಗಪ್ಪ ಮುರಿಗೆಪ್ಪ ತಿಳಿಸಿದ್ದಾರೆ.

ಈ ಸಂಬಂಧ ಜಿಲ್ಲಾಧಿಕಾರಿ ಎಂ.ಸುಂದರೇಶ್‌ಬಾಬು ಅವರ ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಲಾಯಿತು. ಅವರು ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.