ಶಿರಹಟ್ಟಿ: ಇಲ್ಲಿನ ಮಾಗಡಿ ಗ್ರಾಮದಲ್ಲಿ ರಸ್ತೆ, ಚರಂಡಿ, ಸಾರ್ವಜನಿಕ ಶೌಚಾಲಯ ಸಮಸ್ಯೆ ಸೇರಿದಂತೆ ಮೂಲಸೌಕರ್ಯಗಳ ಸಮಸ್ಯೆಯಿದ್ದು, ಇವುಗಳ ನಡುವೆಯೇ ಜನರು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ವಿದೇಶಿ ಹಕ್ಕಿಗಳ ತಾಣ ಎಂದು ಕರೆಯಲ್ಪಡುವ ಮಾಗಡಿ ಕೆರೆಯೂ ಅಭಿವೃದ್ಧಿಯಿಂದ ವಚಿಂತವಾಗಿದೆ.
ತಾಲ್ಲೂಕಿನಲ್ಲಿ ಬಹುದೊಡ್ಡ ಗ್ರಾಮವಾದ ಮಾಗಡಿಯಲ್ಲಿಯೇ ಗ್ರಾಮ ಪಂಚಾಯ್ತಿ ಇದ್ದು, 16 ಜನ ಗ್ರಾಮ ಪಂಚಾಯಿತಿ ಸದಸ್ಯರನ್ನು ಹೊಂದಿದೆ. ಅದರಲ್ಲಿ 12 ಜನ ಮಾಗಡಿಯಿಂದ ಆಯ್ಕೆಯಾದ ಸದಸ್ಯರಿದ್ದು, ಸುಮಾರು 6000 ಜನಸಂಖ್ಯೆ ಇದೆ. ಇಲ್ಲಿನ ಮಾಗಡಿ ಕೆರೆ ಹಾಗೂ ಗ್ರಾಮದ ಅಭಿವೃದ್ಧಿಗೆ ಸ್ಥಳೀಯ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಯಾವುದೇ ಅನುದಾನ ನೀಡುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪವಿದೆ.
ಹದಗೆಟ್ಟ ರಸ್ತೆಗಳು: ತಾಲ್ಲೂಕಿನ ದೊಡ್ಡ ಹಾಗೂ ಇತರೆ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಮಾಗಡಿ ಗ್ರಾಮದಲ್ಲಿ ನಿತ್ಯ ವಾಹನಗಳ ಸಂಚಾರ ತುಸು ಹೆಚ್ಚಿರುತ್ತದೆ. ಮಾಗಡಿ ಕೆರೆಗೆ ಹೊಂದಿಕೊಂಡ ರಸ್ತೆ ಹಾಳಾಗಿದ್ದರೂ ದುರಸ್ತಿಗೆ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ. ಇಲ್ಲಿನ ಬಡಾವಣೆಗಳಲ್ಲಿಯೂ ಸಹ ಉತ್ತಮ ರಸ್ತೆಗಳಿಲ್ಲ. ಮಳೆಗಾಲದಲ್ಲಂತೂ ಬಡಾವಣೆಯ ರಸ್ತೆಗಳು ಕೆಸರು ಗದ್ದೆಯಂತಾಗುತ್ತವೆ. ಇದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ಬಂದರೂ ದುರಸ್ತಿಗೆ ಕ್ರಮವಹಿಸುತ್ತಿಲ್ಲ ಎಂದು ಸ್ಥಳೀಯರು ದೂರುತ್ತಾರೆ.
ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಉತ್ತಮವಾಗಿಲ್ಲ. ಕೊಳಚೆ ನೀರು ರಸ್ತೆಯಲ್ಲಿಯೇ ಹರಿಯುತ್ತದೆ. ಗ್ರಾಮದ ವಸತಿ ಪ್ರದೇಶ, ಎಪಿಎಂಸಿ ಹತ್ತಿರ ಸೇರಿದಂತೆ ಬಹುತೇಕ ಓಣಿಯಲ್ಲಿ ವೈಜ್ಞಾನಿಕ ಚರಂಡಿ ನಿರ್ಮಾಣ ಮಾಡಿಲ್ಲ. ಇಲ್ಲಿನ ಚಿಕ್ಕ ಚಿಕ್ಕ ಚರಂಡಿಗಳಲ್ಲಿ ಕೊಳಚೆ ನೀರು ಸರಾಗವಾಗಿ ಹರಿಯದೇ ಅಲ್ಲಲ್ಲಿ ನಿಲುತ್ತದೆ. ಇದರಿಂದಾಗಿ ಸಂಜೆಯ ವೇಳೆ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಜನರ ಆರೋಗ್ಯ ಸಮಸ್ಯೆಯನ್ನೂ ಎದುರಿಸುತ್ತಿದ್ದಾರೆ.
ಶೌಚಾಲಯ ಸಮಸ್ಯೆ: ಗ್ರಾಮದಲ್ಲಿ ಬಯಲು ಶೌಚಾಲಯ ನಿಲ್ಲಿಸಲು ಪಂಚಾಯ್ತಿ ವತಿಯಿಂದ ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಲು ಸಹಾಯಧನ ನೀಡಲಾಗಿದೆ. ಪಂಚಾಯ್ತಿಯ ಜಾಗೃತಿ ಕೊರತೆಯಿಂದಾಗಿ ಗ್ರಾಮಸ್ಥರ ಬಯಲು ಶೌಚವನ್ನು ಆಶ್ರಯಿಸಿದ್ದಾರೆ. ಮಾಗಡಿ ಕೆರೆಯ ಸುತ್ತಮುತ್ತಲಿನ ಪ್ರದೇಶವು ಶೌಚ ತಾಣವಾಗಿ ಮಾರ್ಪಟ್ಟಿದೆ. ಗ್ರಾಮದಲ್ಲಿ ಇತ್ತೀಚಿಗೆ ಯಾವುದೇ ಸಮುದಾಯ ಶೌಚಾಲಯ ನಿರ್ಮಾಣ ಮಾಡದೆ ಹಳೆಯ ಶೌಚಾಲಯಗಳನ್ನೇ ದುರಸ್ತಿ ಮಾಡಲಾಗುತ್ತಿದೆ.
ಕೆರೆ ನೀರು ಮಲೀನ: ಮಳೆಗಾಲದಲ್ಲಿ ನೀರು ತುಂಬುವ ಮಾಗಡಿ ಕೆರೆ ಚಳಿಗಾಲದಲ್ಲಿ ವಿದೇಶಿ ಪಕ್ಷಿಗಳನ್ನು ಆಹ್ವಾನಿಸುತ್ತದೆ. ಇತ್ತಿಚೆಗೆ ಕೆರೆಯನ್ನು ರಾಮ್ಸರ್ ಜೌಗು ಪ್ರದೇಶ ಪಟ್ಟಿಗೆ ಸೇರಿಸಿದರೂ ಅಭಿವೃದ್ಧಿ ಆಗುತ್ತಿಲ್ಲ. ಕೆರೆಯ ಸುತ್ತ ಗಿಡಗಂಟಿ ಬೆಳೆದಿದೆ. ಗ್ರಾಮಸ್ಥರು ಇಲ್ಲಿಯೇ ಶೌಚ ಮಾಡುತ್ತಾರೆ. ಜಾನುವಾರು ಮೈ ತೊಳೆಯಲು, ಬಟ್ಟೆಗಳನ್ನು ತೊಳೆಯಲು ಕೆರೆಯ ನೀರನ್ನೇ ಬಳಸಲಾಗುತ್ತಿದೆ. ಇದರಿಂದಾಗಿ ಕೆರೆಯ ನೀರು ಮಲೀನವಾಗಿದೆ.
ಆಸ್ಪತ್ರೆಗಳ ಸಮಸ್ಯೆ: ಗ್ರಾಮದಲ್ಲಿ ಪ್ರಾಥಮಿಕ ಉಪ ಆರೋಗ್ಯ ಕೇಂದ್ರವಿಲ್ಲ. ಗ್ರಾಮಸ್ಥರಲ್ಲಿ ಅನಾರೋಗ್ಯ ಉಂಟಾದರೆ ಪಕ್ಕದ ಯಳವತ್ತಿ, ಇಲವೇ ದೂರದ ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿಗೆ ಬರಬೇಕು. ಸ್ಥಳೀಯವಾಗಿ ಒಂದು ಪ್ರಾಥಮಿಕ ಉಪ ಆರೋಗ್ಯ ಕೇಂದ್ರ ತೆರೆಯಬೇಕು. ಅಲ್ಲದೇ ಸಾಕಷ್ಟು ಜಾನುವಾರುಗಳನ್ನು ಹೊಂದಿದ ಗ್ರಾಮದಲ್ಲಿ ಪಶು ಆಸ್ಪತ್ರೆ ಕೇವಲ ಹೆಸರಿಗಷ್ಟೆ ಇದೆ. ಸಿಬ್ಬಂದಿ ಕೊರತೆ ಹಾಗೂ ನಿಷ್ಕಾಳಜಿಯಿಂದ ರೈತರಿಗೆ ತೊಂದರೆಯಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಇಲ್ಲಿನ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಆಗ್ರಹಿಸಿದರು.
ಮಾಗಡಿ ಗ್ರಾಮದಲ್ಲಿ ಮೂಲಸೌಕರ್ಯಗಳ ಸಮಸ್ಯೆಯಿದೆ. ಕೆರೆ ಪ್ರದೇಶವೂ ಸ್ವಚ್ಛತೆಯಿಲ್ಲದೆ ಹಾಳಾಗಿದೆ. ಅಧಿಕಾರಿಗಳು ಗ್ರಾಮದ ಹಾಗೂ ಕೆರೆಯ ಅಭಿವೃದ್ಧಿಗೆ ಕ್ರಮವಹಿಸಬೇಕು.ಪವನ್ ಈಳಗೇರ ಗ್ರಾಮಸ್ಥರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.