ಗದಗ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆ.20ರಂದು ಗದಗ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದು, ಶಿಷ್ಟಾಚಾರದ ಅನ್ವಯ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಅಧಿಕಾರಿಗಳು ತಮಗೆ ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು’ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಪೂರ್ವಸಿದ್ಧತಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಹೆಲಿಪ್ಯಾಡ್ ಹಾಗೂ ಕಾರ್ಯಕ್ರಮ ನಡೆಯುವ ಸ್ಥಳದ ಹತ್ತಿರ ವೈದ್ಯಕೀಯ ಸಿಬ್ಬಂದಿ ನಿಯೋಜಿಸಬೇಕು. ಅಂಬುಲೆನ್ಸ್ ವ್ಯವಸ್ಥೆ ಮಾಡಬೇಕು. ರಸ್ತೆಗಳ ದುರಸ್ತಿಗೆ ಕ್ರಮ ವಹಿಸಬೇಕು. ವೇದಿಕೆ ಕಾರ್ಯಕ್ರಮದ ಸ್ಥಳವಾದ ಕನಕ ಭವನದ ಸುತ್ತಮುತ್ತಲಿನ ಆವರಣದ ಸ್ವಚ್ಛತೆಗೆ ಕ್ರಮ ವಹಿಸಬೇಕು. ಮುಖ್ಯಮಂತ್ರಿಗೆ ವಸತಿ ವ್ಯವಸ್ಥೆ ಕಲ್ಪಿಸಬೇಕು. ಮುಖ್ಯಮಂತ್ರಿಗಳ ಪ್ರವಾಸ ಕಾಲದಲ್ಲಿ ಸಾರಿಗೆ ಸಂಚಾರದಲ್ಲಿ ತೊಂದರೆಯಾಗದಂತೆ ಕ್ರಮ ವಹಿಸಬೇಕು. ಸಿಎಂ ಪ್ರವಾಸ ಮುಗಿಯುವವರಗೆ ಎಲ್ಲ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿದ್ದು, ತಮ್ಮ ಕರ್ತವ್ಯ ನಿರ್ವಹಿಸಬೇಕು. ಶಿಷ್ಟಾಚಾರದಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳಬೇಕು’ ಎಂದು ಸೂಚಿಸಿದರು.
‘ಸೆ.20ರಂದು ಬೆಳಿಗ್ಗೆ 11.25ಕ್ಕೆ ಜಿಲ್ಲಾಧಿಕಾರಿ ಚೇರಿ ಆವರಣದ ಹೆಲಿಪ್ಯಾಡ್‌ಗೆ ಸಿಎಂ ಬರುವರು. ನಂತರ ಅಲ್ಲಿಂದ ಗದಗ ತಾಲ್ಲೂಕು ಕುರುಬರ ಸಂಘದ ವತಿಯಿಂದ ಆಯೋಜಿಸಿರುವ ತಾಲ್ಲೂಕು ಸಂಘದ ರಜತ ಮಹೋತ್ಸವ ಸವಿನೆನಪಿಗಾಗಿ ಸ್ಮರಣ ಸಂಚಿಕೆ ಬಿಡುಗಡೆ, ರಾಜ್ಯ ಮಟ್ಟದ ಕನಕೋತ್ಸವ ಹಾಗೂ ಅಭಿನಂದನಾ ಗ್ರಂಥಾ ಸಮರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ನಂತರ ರಾಕೇಶ್ ಸಿದ್ಧರಾಮಯ್ಯ ಐಟಿಐ ಕಾಲೇಜು, ಅಲ್ಲಿಂದ ಜವಳಗಲ್ಲಿಯ ಇಂದಿರಾವನಕ್ಕೆ ಭೇಟಿ ನೀಡುವ ಕಾರ್ಯಕ್ರಮವಿದೆ. ನಂತರ ಮುಖ್ಯಮಂತ್ರಿಗಳು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವರು’ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಮಾತನಾಡಿ, ಮುಖ್ಯಮಂತ್ರಿಗಳ ಪ್ರವಾಸ ಕಾರ್ಯಕ್ರಮದಲ್ಲಿ ಇಲಾಖೆಯಿಂದ ಸೂಕ್ತ ಬಂದೋಬಸ್ತ್‌ಗೆ ಕ್ರಮವಹಿಸಲಾಗುವುದು ಎಂದರು.
ಸಭೆಯಲ್ಲಿ ಅಗ್ನಿಶಾಮಕ ವಾಹನ, ವಿದ್ಯುತ್ ಪೂರೈಕೆ, ಊಟದ ವ್ಯವಸ್ಥೆ, ವಾಹನಗಳ ಪೂರೈಕೆ, ವೇದಿಕೆ ಸುರಕ್ಷತೆ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಉಪವಿಭಾಗಾಧಿಕಾರಿ ಗಂಗಪ್ಪ ಎಂ., ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹಾಂತೇಶ್ ಸಜ್ಜನರ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೊಟೂರ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಿ.ಆರ್.ಮುಂಡರಗಿ, ಗದಗ ಬೆಟಗೇರಿ ನಗರಸಭೆ ಪೌರಾಯುಕ್ತ ರಾಜಾರಾಮ ಪವಾರ, ಸಂಖ್ಯಾ ಸಂಗ್ರಹಣಾಧಿಕಾರಿ ಕಂಬಾಳಿಮಠ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.