ADVERTISEMENT

ಗದಗ | ಸಿಎಂ ಭೇಟಿ: ಶಿಷ್ಟಾಚಾರ ಪಾಲನೆಗೆ ಕ್ರಮ-ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್

ಸಿ.ಎಂ ಸಿದ್ದರಾಮಯ್ಯ ಜಿಲ್ಲಾ ಪ್ರವಾಸ: ಪೂರ್ವಸಿದ್ಧತಾ ಸಭೆಯಲ್ಲಿ ಡಿಸಿ ಸೂಚನೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 5:42 IST
Last Updated 12 ಡಿಸೆಂಬರ್ 2025, 5:42 IST
ಗದಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಜಿಲ್ಲಾಧಿಕಾರಿ ಸಿ.ಎನ್‌. ಶ್ರೀಧರ್‌ ಮಾತನಾಡಿದರು
ಗದಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಜಿಲ್ಲಾಧಿಕಾರಿ ಸಿ.ಎನ್‌. ಶ್ರೀಧರ್‌ ಮಾತನಾಡಿದರು   

ಗದಗ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ.13ರಂದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣಕ್ಕೆ ಭೇಟಿ ನೀಡುತ್ತಿದ್ದು, ಶಿಷ್ಟಾಚಾರ ಪಾಲನೆಗೆ ಕ್ರಮವಹಿಸಬೇಕು’ ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಡಿ.13ರಂದು ಬೆಳಿಗ್ಗೆ 10.20ಕ್ಕೆ ಬೆಳಗಾವಿಯ ಸುವರ್ಣ ವಿಧಾನಸೌಧದ ಹೆಲಿಪ್ಯಾಡ್‌ನಿಂದ ಹೊರಟು ಬೆಳಿಗ್ಗೆ 11.15ಕ್ಕೆ ಜಿಲ್ಲೆಯ ಲಕ್ಷ್ಮೇಶ್ವರದ ಉಮಾ ಪಿಯು ಕಾಲೇಜು ಮೈದಾನದ ಹೆಲಿಪ್ಯಾಡ್‌ನಲ್ಲಿ ಇಳಿಯುವರು. ಲಕ್ಷ್ಮೇಶ್ವರದ ಚಂದನ ಎಜುಕೇಶನ್ ಸೊಸೈಟಿ ವತಿಯಿಂದ ಆಯೋಜಿಸಿರುವ ಭಾರತರತ್ನ ಪ್ರೊ.ಸಿ.ಎನ್.ಆರ್.ರಾವ್ 10ನೇ ವರ್ಷದ ವಿಜ್ಞಾನ ವಿಸ್ತೃತ ಕಾರ್ಯಕ್ರಮ-2025 ಹಾಗೂ ಬಿ.ಎಸ್.ಪಾಟೀಲ ಅವರಿಗೆ 2025ನೇ ಸಾಲಿನ ‘ಚಂದನ ಶ್ರೀ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳುವರು. ನಂತರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸುವರು’ ಎಂದು ತಿಳಿಸಿದರು.

ADVERTISEMENT

‘ಮಧ್ಯಾಹ್ನ 3ಕ್ಕೆ ಲಕ್ಷ್ಮೇಶ್ವರ ಉಮಾ ಪಿಯು ಕಾಲೇಜು ಮೈದಾನದ ಹೆಲಿಪ್ಯಾಡ್‌ನಿಂದ ಹೆಲಿಕಾಪ್ಟರ್ ಮೂಲಕ ಹುಬ್ಬಳ್ಳಿಗೆ ತೆರಳುವರು. ಸಿಎಂ ಜಿಲ್ಲೆಯಿಂದ ನಿರ್ಗಮಿಸುವವರೆಗೆ ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳು ತಮಗೆ ವಹಿಸಿದ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಬೇಕು’ ಎಂದು ಸೂಚಿಸಿದರು.

‘ಎಲ್ಲ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮ ಪ್ರಾರಂಭವಾಗುವುದಕ್ಕಿಂತ ಮುಂಚೆಯೇ ಕಡ್ಡಾಯವಾಗಿ ಹಾಜರಾಗಬೇಕು. ಮುಖ್ಯಮಂತ್ರಿಗಳ ಕಾರ್ಯಕ್ರಮದ ಸ್ಥಳದ ಸ್ವಚ್ಛತೆ ಹಾಗೂ ಸೂಕ್ತ ಬಂದೋಬಸ್ತ್‌ಗಾಗಿ ಕ್ರಮ ವಹಿಸಬೇಕು. ಕಾರ್ಯಕ್ರಮದ ಸ್ಥಳದಲ್ಲಿ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಅಧಿಕಾರಿಗಳು ನಿಗಾ ವಹಿಸಬೇಕು. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಆಸನದ ವ್ಯವಸ್ಥೆ ಅಚ್ಚುಕಟ್ಟಾಗಿರುವಂತೆ ನೋಡಿಕೊಳ್ಳಬೇಕು. ಒಟ್ಟಾರೆಯಾಗಿ ಮುಖ್ಯಮಂತ್ರಿಗಳ ಜಿಲ್ಲಾ ಪ್ರವಾಸ ಕಾರ್ಯಕ್ರಮದಲ್ಲಿ ಯಾವುದೇ ಲೋಪದೋಷಗಳಾಗದಂತೆ ಇಲಾಖಾಧಿಕಾರಿಗಳು ಎಚ್ಚರ ವಹಿಸಬೇಕು’ ಎಂದರು.

ಸಭೆಯಲ್ಲಿ ವೇದಿಕೆ, ಊಟ ಮತ್ತು ವಸತಿ ವ್ಯವಸ್ಥೆ, ಅಗ್ನಿಶಾಮಕ ವ್ಯವಸ್ಥೆ ಕುರಿತು ಚರ್ಚಿಸಿ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಜವಾಬ್ದಾರಿಗಳನ್ನು ನೀಡಲಾಯಿತು.

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೋಟೂರ, ಉಪವಿಭಾಗಾದಿಕಾರಿ ಗಂಗಪ್ಪ ಎಂ., ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಎಸ್.ಬುರುಡಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಸನಾಯಕ, ಜಿಲ್ಲಾ ಪಂಚಾಯಿತಿ ಅಧಿಕಾರಿ ಎಂ.ವಿ.ಚಳಗೇರಿ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶರಣು ಗೋಗೇರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್.ನೀಲಗುಂದ, ಮಹಿಳಾ ಮತ್ತು ಮಕ್ಕಳ ಅಭಿವೃಧಿ ಇಲಾಖೆಯ ಉಪ ನಿರ್ದೇಶಕಿ ಪದ್ಮಾವತಿ ಜಿ., ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ನಂದಾ ಹಣಬರಟ್ಟಿ, ವಾರ್ತಾಧಿಕಾರಿ ವಸಂತ ಮಡ್ಲೂರ ಇದ್ದರು.

ಸಿಎಂ ಸಂಚರಿಸುವ ಮಾರ್ಗಗಳು ವ್ಯವಸ್ಥಿತವಾಗಿ ಇರುವಂತೆ ಹಾಗೂ ವಾಹನ ನಿಲುಗಡೆಗೆ ಸ್ಥಳಾವಕಾಶ ವ್ಯವಸ್ಥೆ ಮಾಡಬೇಕು. ತುರ್ತು ವೈದ್ಯಕೀಯ ಚಿಕಿತ್ಸೆಗೆ ವೈದ್ಯರ ತಂಡ ಸನ್ನದ್ಧಗೊಳಿಸಬೇಕು
–ರೋಹನ್ ಜಗದೀಶ್ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ

ಮುಖ್ಯಮಂತ್ರಿ ಸ್ವಾಗತಕ್ಕೆ ಭರದ ಸಿದ್ಧತೆ

ಲಕ್ಷ್ಮೇಶ್ವರ: ಪಟ್ಟಣದ ಸಿಬಿಎಸ್‍ಇ ಸ್ಕೂಲ್ ಚಂದನಕ್ಕೆ ಡಿ. 13ರಂದು ಸಿಎಂ ಸಿದ್ಧರಾಮಯ್ಯ ಅವರು ಭೇಟಿ ನೀಡುವ ಹಿನ್ನೆಲೆ ಶಾಲೆಯಲ್ಲಿ ಭರದ ಸಿದ್ಧತೆ ನಡೆದಿವೆ’ ಎಂದು ಶಾಲೆ ಸಂಸ್ಥಾಪಕ ಅಧ್ಯಕ್ಷ ಟಿ.ಈಶ್ವರ ತಿಳಿಸಿದರು.

ಈ ಕುರಿತು ಗುರುವಾರ ಮಾಹಿತಿ ನೀಡಿದ ಅವರು, ‘ಶಾಲೆಯಲ್ಲಿ ಮೂರು ದಿನ ನಡೆಯುವ ವಿಜ್ಞಾನ ವಿಸ್ತೃತ ಕಾರ್ಯಕ್ರಮಕ್ಕೆ ಜರ್ಮನ್ ತಂತ್ರಜ್ಞಾನದ ಭವ್ಯ ವೇದಿಕೆ ಸಿದ್ಧಗೊಳ್ಳುತ್ತಿದೆ. ಶಾಲೆ ವತಿಯಿಂದ ಕೊಡಮಾಡುವ ಚಂದನ ಶ್ರೀ ಪ್ರಶಸ್ತಿಯನ್ನು ನಿವೃತ್ತ ಅಧಿಕಾರಿ ಬಿ.ಎಸ್. ಪಾಟೀಲ ಅವರಿಗೆ ನೀಡಲಾಗುವುದು. ಮಾಜಿ ಸಚಿವ ಜಯರಾಂ ರಮೇಶ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ಶಾಸಕ ಜಿ.ಎಸ್. ಪಾಟೀಲ ಆಗಮಿಸಲಿದ್ದಾರೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.