ಲಕ್ಷ್ಮೇಶ್ವರ: ಸ್ಥಳೀಯ ಸಂಸ್ಥೆಗಳ ಆದಾಯಕ್ಕಾಗಿ ಸರ್ಕಾರ ವಿವಿಧ ಯೋಜನೆಗಳಡಿ ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕಾಗಿ ಕೋಟ್ಯಂತರ ರೂಪಾಯಿ ಅನುದಾನ ಕೊಡುತ್ತದೆ. ಅದರಂತೆ ಪಟ್ಟಣದ ಆಯಕಟ್ಟಿನ ಜಾಗದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದೆ. ಹೇಳಿಕೊಳ್ಳುವುದಕ್ಕೆ ಅವು ಕಟ್ಟಡಗಳು. ಆದರೆ, ಅಲ್ಲಿ ಕುಡಿಯುವ ನೀರು, ಶೌಚಾಲಯ, ಮೂತ್ರಾಲಯಗಳ ವ್ಯವಸ್ಥೆ ಇಲ್ಲ. ಇದರಿಂದಾಗಿ ಮಳಿಗೆಗಳನ್ನು ಬಾಡಿಗೆ ಪಡೆದಿರುವ ವ್ಯಾಪಾರಸ್ಥರು ಸಂಕಟ ಅನುಭವಿಸಬೇಕಾದ ಪರಿಸ್ಥಿತಿ ಇದೆ.
ಪಟ್ಟಣದ ಹೃದಯ ಭಾಗದಲ್ಲಿ 2009ರಲ್ಲಿ ನಿರ್ಮಾಣವಾಗಿರುವ ಸೋಮೇಶ್ವರ ಭಾನು ಮಾರ್ಕೆಟ್ ವಾಣಿಜ್ಯ ಮಳಿಗೆಯ ಕಟ್ಟಡದ ಸ್ಥಿತಿಯಂತೂ ಅಯೋಮಯವಾಗಿದೆ. ವಿಶಾಲವಾಗಿರುವ ಈ ಕಟ್ಟಡದ ಹೊರಭಾಗದಲ್ಲಿ 32, ಒಳಭಾಗದಲ್ಲಿ 28, ಮೇಲ್ಭಾಗದಲ್ಲಿ 12 ಮತ್ತು 30 ತರಕಾರಿ ಅಂಗಡಿಗಳು ಇವೆ. ಅದರೊಂದಿಗೆ ಮೇಲ್ಬಾಗದಲ್ಲಿ ಎರಡು ಶೌಚಾಲಯ ಕೂಡ ನಿರ್ಮಿಸಿದ್ದಾರೆ. ಆದರೆ, ಆರಂಭದಲ್ಲಿ ಕೆಲ ತಿಂಗಳವರೆಗೆ ಕಾರ್ಯನಿರ್ವಹಿಸಿದ ಅವು ನಂತರ ಬಂದ್ ಆದಾಗಿನಿಂದ ಮತ್ತೆ ಬಾಗಿಲು ತೆರೆದಿಲ್ಲ. ಇದರಿಂದಾಗಿ ನೂರಾರು ವ್ಯಾಪಾರಸ್ಥರಿಗೆ ತೀವ್ರ ತೊಂದರೆ ಆಗಿದೆ. ಶೌಚಾಲಯ ಮತ್ತು ಮೂತ್ರಾಲಯ ಇಲ್ಲದ ಕಾರಣ ಜನರು ಎಲ್ಲೆಂದರಲ್ಲಿ ಶೌಚ ಮತ್ತು ಮೂತ್ರ ಮಾಡುವುದರಿಂದ ಇಡೀ ಕಟ್ಟಡವೇ ಗಬ್ಬೆದ್ದು ನಾರುತ್ತಿದೆ.
ಕಟ್ಟಡದ ಮೇಲ್ಭಾಗದಲ್ಲಿ 12 ಮಳಿಗೆಗಳು ಇದ್ದು ಒಂದರಲ್ಲಿ ಅಲ್ಪಸಂಖ್ಯಾತರ ಸೊಸೈಟಿ, ಮತ್ತೊಂದರಲ್ಲಿ ನಿವೃತ್ತ ನೌಕರರ ಸಂಘದ ಕಚೇರಿ, ಮತ್ತೊಂದರಲ್ಲಿ ಕಂದಾಯ ಇಲಾಖೆ, ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿ ಹೊರತುಪಡಿಸಿ ಉಳಿದೆಲ್ಲ ಕೊಠಡಿಗಳು ಖಾಲಿ ಬಿದ್ದಿವೆ. ಸೂಕ್ತ ನಿರ್ವಹಣೆ ಇಲ್ಲದ ಕಾರಣ ಕಟ್ಟಡ ಶಿಥಿಲಗೊಳ್ಳುತ್ತಿದೆ. ಅಲ್ಲದೆ ಮೇಲ್ಭಾಗ ಸೋರುತ್ತಿದೆ.
ಇನ್ನು, ಹತ್ತು- ಹದಿನೈದು ವರ್ಷಗಳ ಹಿಂದೆ ಮಳಿಗೆ ಬಾಡಿಗೆ ಪಡೆದವರು ಅಲ್ಲಿ ವ್ಯಾಪಾರ ಮಾಡದೆ ಹೆಚ್ಚಿನ ಬಾಡಿಗೆಗೆ ಬೇರೆ ವ್ಯಾಪಾರಸ್ಥರಿಗೆ ಬಾಡಿಗೆ ನೀಡಿರುವ ಆರೋಪಗಳು ಇವೆ. ಈ ಕುರಿತು ಪುರಸಭೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಇದೇ ಕಟ್ಟಡದ ಒಳಭಾಗದಲ್ಲಿರುವ ತರಕಾರಿ ಅಂಗಡಿಗಳು ವ್ಯವಸ್ಥಿತವಾಗಿಲ್ಲ. ವ್ಯಾಪಾರಸ್ಥರು ಅಲ್ಲಲ್ಲಿ ಹರಕು ಮುರುಕು ಹರಿದ ಪ್ಲಾಸ್ಟಿಕ್ ಚೀಲ, ತಟ್ಟುಗಳನ್ನು ಜೋತು ಬಿಟ್ಟಿದ್ದಾರೆ. ಇದು ಇಡೀ ಕಟ್ಟಡದ ಕಳೆಯನ್ನೇ ನುಂಗಿ ಹಾಕಿದೆ. ಮಳಿಗೆಗಳ ಬಾಡಿಗೆ ನೇರವಾಗಿ ಜಿಲ್ಲಾಧಿಕಾರಿಗಳ ಖಾತೆಗೆ ಜಮೆ ಆಗುತ್ತಿದೆ. ಅವರಾದರೂ ಕಟ್ಟಡದ ದುರಸ್ತಿ ಮಾಡಿಸಬೇಕಿತ್ತು. ನಿರ್ಮಾಣದ ನಂತರ ಒಮ್ಮೆಯೂ ಕಟ್ಟಡ ಸುಣ್ಣಬಣ್ಣ ಕಂಡಿಲ್ಲ. ಹೀಗಾಗಿ ಕಟ್ಟಡ ಯಾವುದೋ ಹಳೆ ಬಂಗಲೆ ಕಂಡಂತೆ ಕಾಣುತ್ತಿದೆ.
ಇನ್ನು 1998ರಲ್ಲಿ ಇಲ್ಲಿನ ಹೊಸ ಬಸ್ ನಿಲ್ದಾಣದ ಎದುರು ಎಸ್‍ಎಫ್‍ಸಿ ಯೋಜನೆಯಡಿ ನಿರ್ಮಾಣಗೊಂಡಿರುವ ವಾಣಿಜ್ಯ ಸಂಕೀರ್ಣದ ಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ಸಂಕೀರ್ಣದಲ್ಲಿ 12 ಮಳಿಗೆಗಳು ಇದ್ದು, ಇಲ್ಲಿಯೂ ಮೂಲಸೌಲಭ್ಯಗಳು ಇಲ್ಲ.
ಮತ್ತೊಂದು ದುರಂತ ಎಂದರೆ ಈ ಸಂಕೀರ್ಣದಲ್ಲಿ ಒಬ್ಬೊಬ್ಬರೇ ಎರಡ್ಮೂರು ಮಳಿಗೆಗಳನ್ನು ಬಾಡಿಗೆ ಪಡೆದಿದ್ದು ಇತರರಿಗೆ ಸಿಗಬೇಕಾದ ಅವಕಾಶವನ್ನು ಕಸಿದುಕೊಂಡಿದ್ದಾರೆ. ಅಲ್ಲದೆ ಬಾಡಿಗೆ ಪಡೆಯುವಾಗ ಮಾಹಿತಿ ನೀಡಿದ ವ್ಯಾಪಾರಕ್ಕೆ ಬದಲಾಗಿ ಬೇರೆ ಬೇರೆ ವ್ಯಾಪಾರ ನಡೆಸುತ್ತಿದ್ದಾರೆ. ಹೆಚ್ಚಾಗಿ ಇಲ್ಲಿ ಎಗ್‍ರೈಸ್, ಚಿಕನ್, ಮಟನ್ ಅಂಗಡಿಗಳು ಇವೆ. ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುವುದರಿಂದ ಸಂಕೀರ್ಣ ಹೊಲಸು ವಾಸನೆಯಿಂದ ನಾರುತ್ತಿದ್ದು, ಸುತ್ತಮುತ್ತ ಕಸಕಡ್ಡಿಯೊಂದಿಗೆ ತ್ಯಾಜ್ಯ ಸೇರುವುದರಿಂದ ಇಡೀ ಕಟ್ಟಡ ಸ್ಲಂ ಆಗಿದೆ. ಈ ಸಂಕೀರ್ಣದ ಎದುರಿನಿಂದ ಇತಿಹಾಸ ಪ್ರಸಿದ್ಧ ಸೋಮೇಶ್ವರ ದೇವಸ್ಥಾನಕ್ಕೆ ಭಕ್ತರು ಹೋಗುತ್ತಾರೆ. ಆದರೆ ಗಬ್ಬು ವಾತಾವರಣ ಅವರಿಗೆ ಕಿರಿಕಿರಿ ಉಂಟು ಮಾಡಿದೆ. ಇಲ್ಲಿಯೂ ಮೂಲ ಬಾಡಿಗೆದಾರರು ವ್ಯಾಪಾರ ಮಾಡದೆ ಬೇರೆಯವರಿಗೆ ಹೆಚ್ಚಿನ ದರಕ್ಕೆ ಬಾಡಿಗೆ ಕೊಟ್ಟಿದ್ದಾರೆ. ಈ ಕುರಿತು ಪುರಸಭೆ ಹೆಚ್ಚಿನ ತಲೆ ಕೊಡಿಸಿಕೊಂಡಿಲ್ಲ.
ಅದೇರೀತಿ, ನಗರೋತ್ಥಾನ ಯೋಜನೆಯಡಿ ಇಟ್ಟಿಗೇರಿ ಕೆರೆ ಹತ್ತಿರ ಕಳೆದ ವರ್ಷ ನಿರ್ಮಿಸಿರುವ ಒಂಬತ್ತು ಮಳಿಗೆಗಳ ಪೈಕಿ ಒಂದನ್ನು ಬಿಟ್ಟು ಎಂಟು ಮಳಿಗೆಗಳು ಹಾಕಿದ ಬಾಗಿಲು ಇನ್ನೂ ತೆಗೆದಿಲ್ಲ. ಅಂಗಡಿಗಳ ಅಳತೆಯಲ್ಲಿ ವ್ಯತ್ಯಾಸ ಆಗಿರುವುದರಿಂದ ಬಾಡಿಗೆದಾರರು ಅಂಗಡಿಗಳಿಗೆ ಬೀಗ ಜಡಿದಿದ್ದಾರೆ. ಮಳಿಗೆಗಳಿಂದ ಪುರಸಭೆಗೆ ಲಕ್ಷಾಂತರ ರೂಪಾಯಿ ಆದಾಯ ಬರಬೇಕಾಗಿತ್ತು. ಆದರೆ, ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಅವುಗಳಿಂದ ಬರಬೇಕಾಗಿದ್ದ ಆದಾಯ ಖೋತಾ ಆಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಐಡಿಎಸ್‍ಎಂಟಿ ಮಳಿಗೆಗಳ ಬಾಡಿಗೆ ವಿಷಯದಲ್ಲಿ ಸಾಕಷ್ಟು ಗೋಲ್‍ಮಾಲ್ ಆಗಿರುವ ಬಗ್ಗೆ ಮಾಹಿತಿ ಬಂದಿದೆ. ಮೂಲ ಬಾಡಿಗೆದಾರರು ವ್ಯಾಪಾರ ಮಾಡದೆ ಬೇರೆಯವರಿಗೆ ಹೆಚ್ಚಿನ ಬಾಡಿಗೆಗೆ ಮಳಿಗೆ ಕೊಟ್ಟಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ ಜತೆಗೆ ಚರ್ಚಿಸಲಾಗುವುದು.ಡಾ.ಚಂದ್ರು ಲಮಾಣಿ ಶಾಸಕ
ವಾಣಿಜ್ಯ ಮಳಿಗೆಗಳನ್ನು ಬಾಡಿಗೆ ಪಡೆದು ತಾವು ವ್ಯಾಪಾರ ನಡೆಸದೆ ಬೇರೆಯವರಿಗೆ ಬಾಡಿಗೆ ಕೊಟ್ಟಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು. ಈ ಕುರಿತು ಈಗಾಗಲೇ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ. ಇದರೊಂದಿಗೆ ವಾಣಿಜ್ಯ ಸಂಕೀರ್ಣದಲ್ಲಿ ಮೂಲಸೌಲಭ್ಯ ಕಲ್ಪಿಸುವ ವ್ಯವಸ್ಥೆ ಮಾಡಲಾಗುವುದು.ಮಹಾಂತೇಶ ಬೀಳಗಿ ಮುಖ್ಯಾಧಿಕಾರಿ ಪುರಸಭೆ