ADVERTISEMENT

ಗದಗ: ಜಿಮ್ಸ್‌ನಲ್ಲಿ ₹10 ಕೋಟಿ ವೆಚ್ಚದಲ್ಲಿ ಕ್ಯಾಥ್‌ಲ್ಯಾಬ್‌ ನಿರ್ಮಾಣ

ಅತ್ಯಾಧುನಿಕ ಹೃದ್ರೋಗ ಚಿಕಿತ್ಸಾ ಘಟಕ ಡಿಸೆಂಬರ್‌ ಎರಡನೇ ವಾರದಲ್ಲಿ ಸೇವೆಗೆ ಲಭ್ಯ

ಕೆ.ಎಂ.ಸತೀಶ್ ಬೆಳ್ಳಕ್ಕಿ
Published 27 ನವೆಂಬರ್ 2024, 4:23 IST
Last Updated 27 ನವೆಂಬರ್ 2024, 4:23 IST
ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಕ್ಯಾಥ್‌ಲ್ಯಾಬ್‌ನ ಒಳಾಂಗಣ ಚಿತ್ರಣ
ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಕ್ಯಾಥ್‌ಲ್ಯಾಬ್‌ನ ಒಳಾಂಗಣ ಚಿತ್ರಣ   

ಗದಗ: ನಗರದ ಹೊರವಲಯದಲ್ಲಿರುವ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಜಿಮ್ಸ್‌) ಹೃದಯದ ಆರೈಕೆ ಮಾಡುವ ಅತ್ಯಾಧುನಿಕ ತಂತ್ರಜ್ಞಾನದ ಕ್ಯಾಥ್‌ಲ್ಯಾಬ್‌ ನಿರ್ಮಾಣ ಪ್ರಕ್ರಿಯೆ ಪೂರ್ಣಗೊಂಡಿದ್ದು, ಡಿಸೆಂಬರ್‌ ಎರಡನೇ ವಾರದ ವೇಳೆಗೆ ರೋಗಿಗಳ ಸೇವೆಗೆ ಲಭ್ಯವಾಗಲಿದೆ.

ಕ್ಯಾಥ್‌ಲ್ಯಾಬ್‌ಗೆ ಬೇಕಿರುವ ಅಗತ್ಯ ಯಂತ್ರಗಳೆಲ್ಲವೂ ಬಂದಿದ್ದು, ಅವುಗಳನ್ನು ಅಳವಡಿಸಲಾಗಿದೆ. ಸದ್ಯ ಕ್ಯಾಥ್‌ಲ್ಯಾಬ್‌ಗೆ ಬೇಕಿರುವ ಪೂರ್ಣಾವಧಿಯ ಹೃದ್ರೋಗ ತಜ್ಞರು, ಅಗತ್ಯ ತಾಂತ್ರಿಕ ಹಾಗೂ ನರ್ಸಿಂಗ್ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಚಾಲನೆಯಲ್ಲಿದೆ. ಇದು ಡಿಸೆಂಬರ್‌ ಮೊದಲವಾರದಲ್ಲಿ ಮುಗಿಯಲಿದ್ದು, ಎರಡನೇ ವಾರದಲ್ಲಿ ಕ್ಯಾಥ್‌ಲ್ಯಾಬ್‌ ಸೇವೆ ಆರಂಭಿಸಲಾಗುವುದು ಎಂದು ಜಿಮ್ಸ್‌ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ತಿಳಿಸಿದ್ದಾರೆ.

ಕ್ಯಾಥ್‌ಲ್ಯಾಬ್‌ಬಲ್ಲಿ ಓಪನ್‌ ಹಾರ್ಟ್‌ ಸರ್ಜರಿ ಸೌಲಭ್ಯ ಹೊರತುಪಡಿಸಿ ಸ್ಟಂಟ್‌ ಅಳವಡಿಕೆ, ಹಾರ್ಟ್‌ ಬಲೂನಿಂಗ್‌ ಸರ್ಜರಿ, ಹಾರ್ಟ್‌ ವಾಲ್ವ್‌ ಸರ್ಜರಿ ಮಾಡಬಹುದಾಗಿದೆ. ಪಡಿತರ ಚೀಟಿ ಮತ್ತು ಆಯುಷ್ಮಾನ್‌ ಭಾರತ್‌ ಚೀಟಿ ಹೊಂದಿರುವವರಿಗೆ ಈ ಸೇವೆಗಳೆಲ್ಲವೂ ಸಂಪೂರ್ಣ ಉಚಿತವಾಗಿ ಲಭ್ಯವಿರಲಿದೆ. ಬಿಪಿಎಲ್‌ ಕಾರ್ಡ್‌ನವರಿಗೆ ಶೇ 30ರಷ್ಟು ಶುಲ್ಕ ಇರಲಿದೆ. ರಾಜ್ಯ ರಸ್ತೆ ಸಾರಿಗೆ ನಿಗಮದವರು ಜಿಮ್ಸ್‌ ಜತೆಗೆ ಕೈಜೋಡಿಸಿದ್ದು, ಅವರ ನೌಕರರಿಗೆ ಇಲ್ಲಿನ ಹೃದ್ರೋಗ ಚಿಕಿತ್ಸಾ ಘಟಕದಲ್ಲಿ ಉಚಿತ ಚಿಕಿತ್ಸೆ ಸಿಗಲಿದೆ.

ADVERTISEMENT

‘ಕಾಲಿನ ರಕ್ತನಾಳ ಉಬ್ಬುವಿಕೆ, ಪಾರ್ಶ್ವವಾಯು ಚಿಕಿತ್ಸೆಗಳಿಗೂ ಕ್ಯಾಥ್‌ಲ್ಯಾಬ್‌ ಮುನ್ನುಡಿ ಬರೆಯಲಿದೆ. ಆದರೆ, ಸದ್ಯ ಹೃದ್ರೋಗ ತಜ್ಞರಿಂದ ಇವುಗಳಿಗೆ ಚಿಕಿತ್ಸೆ ಕೊಡಲು ಸಾಧ್ಯವಿಲ್ಲ. ಅದಕ್ಕಾಗಿ ಪ್ರತ್ಯೇಕ ತಜ್ಞ ವೈದ್ಯರ ಅಗತ್ಯವಿದೆ. ಮುಂದೆ ಆ ಸೇವೆಗಳನ್ನು ಒದಗಿಸಲು ಇದು ನೆರವಾಗಲಿದೆ’ ಎಂದು ಡಾ. ಬಸವರಾಜ ಬೊಮ್ಮನಹಳ್ಳಿ ತಿಳಿಸಿದ್ದಾರೆ.

ಕ್ಯಾಥ್‌ಲ್ಯಾಬ್‌ ಸೌಲಭ್ಯ ರೋಗಿಗಳಿಗೆ ಸಮರ್ಪಕವಾಗಿ ಸಿಗಬೇಕಾದರೆ ತಜ್ಞ ವೈದ್ಯರು ಮತ್ತು ಸಿಬ್ಬಂದಿಯ ತಂಡವನ್ನು ಸಿದ್ಧಪಡಿಸಬೇಕಿದೆ. ಅವರಿಗೆ ಇಲ್ಲಿ ಕೆಲಸ ಮಾಡಲು ಉತ್ತಮ ವಾತಾವರಣ ಕಲ್ಪಿಸಬೇಕಿದೆ. ಆ ನಿಟ್ಟಿನಲ್ಲಿ ಜಿಮ್ಸ್‌ ಕಾರ್ಯಪ್ರವೃತ್ತವಾಗಿದೆ. ನಮ್ಮಲ್ಲಿನ ಅತ್ಯಾಧುನಿಕ ಕ್ಯಾಥ್‌ಲ್ಯಾಬ್‌ ಸೌಲಭ್ಯ ನೋಡಿ ಅನೇಕರು ಆಶ್ಚರ್ಯಪಟ್ಟುಕೊಂಡು ತೆರಳಿದ್ದಾರೆ. ಅದೇರೀತಿ, ಗುಣಮಟ್ಟದ ಚಿಕಿತ್ಸೆಗೆ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿನ ಜನರ ಹೃದಯದ ಆರೋಗ್ಯದ ದೃಷ್ಟಿಯಿಂದ ಕ್ಯಾಥ್‌ಲ್ಯಾಬ್‌ ಮಹತ್ವದ ಹೆಜ್ಜೆಯಾಗಿದೆ. ಹೃದ್ರೋಗ ಚಿಕಿತ್ಸೆಗಾಗಿ ಅಮೃತ ಕಾಲದಲ್ಲಿ ದೂರದ ಊರುಗಳಿಗೆ ತೆರಳುವುದು ಇದರಿಂದ ತಪ್ಪಲಿದೆ
ಡಾ. ಬಸವರಾಜ ಬೊಮ್ಮನಹಳ್ಳಿ ಜಿಮ್ಸ್‌ ನಿರ್ದೇಶಕ

‘ಕ್ಯಾಥ್‌ಲ್ಯಾಬ್‌; ಸಚಿವ ಎಚ್‌.ಕೆ.ಪಾಟೀಲರ ಯೋಜನೆ’

‘ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಕ್ಯಾಥ್‌ಲ್ಯಾಬ್‌ ತರಬೇಕು ಎಂಬುದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ ಅವರ ಕನಸಿನ ಯೋಜನೆಯಾಗಿತ್ತು’ ಎಂದು ಜಿಮ್ಸ್‌ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ಹೇಳಿದರು. ‘2018ರಿಂದಲೂ ಅದಕ್ಕಾಗಿ ನಿರಂತರ ಪ್ರಯತ್ನ ಮಾಡಿದ್ದರು. ಅವರ ನಿರಂತರ ಪರಿಶ್ರಮದಿಂದಾಗಿ ಜಿಮ್ಸ್‌ನಲ್ಲಿ ಈಗ ಸುಸಜ್ಜಿತ ಕ್ಯಾಥ್‌ಲ್ಯಾಬ್‌ ನಿರ್ಮಾಣಗೊಂಡಿದೆ’ ಎಂದು ತಿಳಿಸಿದರು. ‘ಯಾವುದೇ ಒಬ್ಬ ವ್ಯಕ್ತಿ ಹೃದಯಾಘಾತ ಆದಾಗಿಂದ ಮುಂದಿನ ಒಂದು ಗಂಟೆಯನ್ನು ಅಮೃತ ಕಾಲ ಎನ್ನುತ್ತೇವೆ. ರೋಗಿಗೆ ತಕ್ಷಣವೇ ಪ್ರಾಥಮಿಕ ಚಿಕಿತ್ಸೆ ಸಿಕ್ಕರೆ ಅವರನ್ನು ಬದುಕಿಸಬಹುದು. ಜಿಮ್ಸ್‌ನಲ್ಲಿ ಪ್ರಾರಂಭವಾಗಲಿರುವ ಕ್ಯಾಥ್‌ಲ್ಯಾಬ್‌ ಹೃದ್ರೋಗ ಸಮಸ್ಯೆ ಹೊಂದಿರುವ ಜಿಲ್ಲೆಯ ಜನರ ಅಮೃತ ಕಾಲದಲ್ಲಿ ಪರಿಣಾಮಕಾರಿ ಚಿಕಿತ್ಸೆ ನೀಡಲು ನೆರವಾಗಲಿದೆ. ವಿಶೇಷ ಆರೈಕೆಗೆ ಅನುಕೂಲವಾಗಲಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.