ಶಿರಹಟ್ಟಿ : ಸ್ಥಳೀಯ ತಾಲ್ಲೂಕು ಪಂಚಾಯ್ತಿಯ ಸಾಮರ್ಥ್ಯ ಸೌಧದಲ್ಲಿ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ದೇವಕ್ಕ ಗುಡಿಮನಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಪ.ಪಂನ ಸಾಮಾನ್ಯ ಸಭೆ ಜರುಗಿತು.
ಬಸವೇಶ್ವರ ವೃತ್ತದ ಹತ್ತಿರವಿರುವ ಶಿಥಿಲಗೊಂಡ ಪ.ಪಂನ ಹಳೆ ಕಟ್ಟಡ ಇರುವ ಜಾಗದಲ್ಲಿಯೇ ಸರ್ಕಾರದಿಂದ ಈಗಾಗಲೇ ಬಿಡುಗಡೆಯಾದ ಅನುದಾನ ಬಳಕೆ ಮಾಡಿಕೊಂಡು ಪಟ್ಟಣ ಪಂಚಾಯ್ತಿಯ ನೂತನ ಕಟ್ಟಡ ಕಾಮಗಾರಿ ಪ್ರಾರಂಭಿಸಲು ಸರ್ವ ಸದಸ್ಯರು ಅನುಮೋದನೆ ನೀಡಿದರು.
ಕಳೆದ ಎರಡು ವರ್ಷಗಳ ಹಿಂದೆಯೇ ಪಪಂ ನೂತನ ಕಟ್ಟಡಕ್ಕೆ ₹ 1.55 ಕೋಟಿ ಅನುದಾನ ಬಿಡುಗಡೆಯಾಗಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿತ್ತು. ಆದರೆ ಪಪಂ ನಿಂದ ಕಟ್ಟಡ ನಿರ್ಮಾಣಕ್ಕೆ ನಿವೇಶನ ಅಂತಿಮಗೊಳ್ಳದೆ ಹಾಗೂ ಕಾರಣಾಂತರಗಳಿಂದ ಕಟ್ಟಡ ಕಾಮಗಾರಿ ಆರಂಭವಾಗಿರಲಿಲ್ಲ. ಇದೀಗ ಸದಸ್ಯರು ಒಮ್ಮತದಿಂದ ನೀವೇಶನ ಅಂತಿಮಗೊಳಿಸಿ ಒಪ್ಪಿಗೆ ಸೂಚಿಸಿದರು.
2024-25 ಹಾಗೂ 2025-26 ನೇ ಸಾಲಿನ ಎಸ್ಎಫ್‌ಸಿ ಕುಡಿಯುವ ನೀರಿನ ಅನುದಾನ ಮತ್ತು 2025- 26 ನೇ ಸಾಲಿನ 15ನೇ ಹಣಕಾಸು/ ಎಸ್ ಎಫ್ ಸಿ/ ಶೇಕಡಾ 24.10 ಅನುದಾನ ಕಾಮಗಾರಿಗಳ ಟೆಂಡರ್ ಅನುಮೋದನೆ ನೀಡುವ ಕುರಿತು ಚರ್ಚಿಸಲಾಯಿತು. ಈ ಕಾಮಗಾರಿ ಅಡಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂರು ಲಕ್ಷ ರೂಗಳ ವೆಚ್ಚದಲ್ಲಿ ಘನತ್ಯಾಜ್ಯ ವಿಲೇವಾರಿ ಜಮೀನಿನಲ್ಲಿ ಬೋರ್‌ವೆಲ್ ಕೊರೆಸಿ ಪವರ್ ಪಂಪ ಅಳವಡಿಸುವುದು, ಅಂದಾಜು ಸುಮಾರು ₹ 12.80 ಲಕ್ಷ ವೆಚ್ಚದಲ್ಲಿ ಪಂಚಾಯತಿ ವ್ಯಾಪ್ತಿಗೆ ಗುರುತಿಸಿದ ಬ್ಲಾಕ್ ಸ್ಪಾಟ್ ಗಳಿಗೆ ಸಿಸಿ ಕ್ಯಾಮೆರಾ ಅಳವಡಿಸುವುದು, ಅಂದಾಜು ₹ 2.56 ಲಕ್ಷಗಳಲ್ಲಿ ಅಂಬೇಡ್ಕರ್ ಸಮುದಾಯ ಭವನದ ಹತ್ತಿರ ಮತ್ತು ರಫೀಕ್ ಹೆಗ್ಡೆ ಮನೆ ಹತ್ತಿರ ಸಿಸ್ಟರ್ನ ಟ್ಯಾಂಕ್ ಅಳವಡಿಸಿ ನೀರು ಸರಬರಾಜು ಮಾಡುವುದು, ವಾರ್ಡ್ ನಂಬರ್ 14ರ ವಾಲ್ಮೀಕಿ ಸಮುದಾಯ ಭವನದ ಮೊದಲನೇ ಮಹಡಿಯಲ್ಲಿ ಅಂದಾಜು ₹ 0.96 ಲಕ್ಷ ಮೊತ್ತದಲ್ಲಿ ಕೊಠಡಿ ಬಣ್ಣ, ಬಾಗಿಲು ಕಿಟಕಿ ಅಳವಡಿಸಲು ಅನುಮೋದನೆ ನೀಡಲಾಯಿತು.
ಅಂದಾಜು ₹ 5 ಲಕ್ಷ ರೂಗಳಲ್ಲಿ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ನಂಬರ್ ಒಂದರಲ್ಲಿ ಬೋರ್‌ವೆಲ್ ಕೊರೆಯಿಸಿ ಪವರ್ ಪಂಪ್ ಅಳವಡಿಸುವುದು. ಅಂದಾಜು ₹ 5 ಲಕ್ಷ ರೂಗಳಲ್ಲಿ ವಾರ್ಡ್ ನಂಬರ್ 2, ಹರಿಪುರದ ಗೋರಿ ಹತ್ತಿರ ಹಾಗೂ ವಾರ್ಡ್ ನಂಬರ್1 ಖಾನಾಪುರದ ಸರ್ಕಾರಿ ಶಾಲೆ ಹತ್ತಿರ ಐದು ಎಚ್ ಪಿ ಮತ್ತು 7.5 ಎಚ್ ಪಿ ಮೋಟಾರ್ ಕೇಬಲ್ ಪೈಪ್ ಸ್ಟಾರ್ಟರ್ ಅಳವಡಿಸುವುದು. ವಾರ್ಡ್ ನಂ: 2 ಹರಿಪುರ ಬಸ್ ಡಿಪೋ ಹತ್ತಿರ ಮತ್ತು ವಾರ್ಡ್ ನಂಬರ್ 15 ಎಲ್ಲಮ್ಮ ದೇವಸ್ಥಾನ ಹತ್ತಿರ ಬೋರವೆಲ್ ಕೊರೆಯಿಸಿ ಪವರ್ ಪಂಪ್ ಅಳವಡಿಕೆಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಸವಿತಾ ತಾಮ್ರೆ, ಉಪಾಧ್ಯಕ್ಷ ನೀಲವ್ವ ಹುಬ್ಬಳ್ಳಿ, ಸ್ಥಾಯಿ ಸಮಿತಿಯ ಅಧ್ಯಕ್ಷ ಹೊನ್ನಪ್ಪ ಶಿರಹಟ್ಟಿ, ಸದಸ್ಯರಾದ ಪರಮೇಶ ಪರಬ, ಈಸಾಕ ಅಹಮ್ಮದ ಢಾಲಾಯತ, ಸಂದೀಪ್ ಕಪ್ಪತ್ತನವರ್, ದೇವಪ್ಪ ಅಡೂರ್, ಅರ್ಶದ ಡಾಲಾಯತ್ ಇತರರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.