ADVERTISEMENT

ಗದಗ: ಇಂದಿನಿಂದ ಲಾಕ್‌ಡೌನ್‌ ಮತ್ತಷ್ಟು ಬಿಗಿ, ರಸ್ತೆಗಿಳಿದರೆ ಲಾಠಿ ಏಟು

ದೃಢಪಟ್ಟ ಮೊದಲ ಪ್ರಕರಣ; ಆತಂಕದಲ್ಲಿ ಅವಳಿ ನಗರದ ಜನರು; ಜಿಲ್ಲಾಡಳಿತದಿಂದ ಕಟ್ಟುನಿಟ್ಟಿನ ಕ್ರಮ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2020, 19:45 IST
Last Updated 7 ಏಪ್ರಿಲ್ 2020, 19:45 IST
ವೃದ್ದೆಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮಂಗಳವಾರ ಗದುಗಿನ ರಂಗನವಾಡ ಪ್ರದೇಶಕ್ಕೆ ತೆರಳುವ ರಸ್ತೆ ಮಾರ್ಗವನ್ನು ಸಂಪೂರ್ಣ ಮುಚ್ಚಲಾಗಿತ್ತು
ವೃದ್ದೆಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮಂಗಳವಾರ ಗದುಗಿನ ರಂಗನವಾಡ ಪ್ರದೇಶಕ್ಕೆ ತೆರಳುವ ರಸ್ತೆ ಮಾರ್ಗವನ್ನು ಸಂಪೂರ್ಣ ಮುಚ್ಚಲಾಗಿತ್ತು   

ಗದಗ: ಲಾಕ್‌ಡೌನ್‌ ಘೋಷಣೆಯಾಗಿ ಎರಡು ವಾರಗಳ ನಂತರ ಜಿಲ್ಲೆಯಲ್ಲಿ ಮೊದಲ ಕೊರೊನಾ ಪ್ರಕರಣ ದೃಢಪಟ್ಟಿದೆ. ಇದರ ಬೆನ್ನಲ್ಲೇ, ಜಿಲ್ಲಾಡಳಿತವು ಮಂಗಳವಾರದಿಂದಲೇ ಲಾಕ್‌ಡೌನ್‌ ನಿರ್ಬಂಧಗಳನ್ನು ಇನ್ನಷ್ಟು ಕಠಿಣಗೊಳಿಸಿದೆ. ಬುಧವಾರದಿಂದ ಅನಗತ್ಯವಾಗಿ ರಸ್ತೆಗಿಳಿದರೆ ಪೊಲೀಸರಿಂದ ನಿರ್ದಾಕ್ಷಿಣ್ಯವಾಗಿ ಲಾಠಿ ಏಟು ಬೀಳಲಿವೆ. ಪೆಟ್ರೋಲ್‌–ಡೀಸೆಲ್ ಮಾರಾಟಕ್ಕೂ ನಿರ್ಬಂಧ ವಿಧಿಸಲಾಗಿದೆ.

ಪ್ರತಿ ದಿನ ಬೆಳಿಗ್ಗೆ 7ರಿಂದ 10ಗಂಟೆಯವರೆಗೆ ಅವಳಿ ನಗರದಲ್ಲಿ ದಿನಸಿ ಮತ್ತು ತರಕಾರಿ ಖರೀದಿಗೆ ಅವಕಾಶ ನೀಡಲಾಗಿತ್ತು. ಆದರೆ, ಮಾರ್ಚ್‌ 8ರಿಂದ ಈ ಅವಕಾಶವನ್ನು ವಾರಕ್ಕೆ ಎರಡು ದಿನಕ್ಕೆ ತಗ್ಗಿಸಲಾಗಿದೆ. ಅಂದರೆ ವಾರದಲ್ಲಿ ಎರಡು ದಿನ ಮಾತ್ರ ಸಾರ್ವಜನಿಕರು ಮನೆಯಿಂದ ಹೊರಬಂದು ದಿನಸಿ ಖರೀದಿಗೆ ಅವಕಾಶ ನೀಡಲಾಗಿದೆ. ಲಾಕ್‌ಡೌನ್‌ ಮುಗಿಯುವರೆಗೆ ಕಠಿಣ ನಿರ್ಬಂಧಗಳು ಕಠಿಣವಾಗಿ ಮುಂದುವರಿಯಲಿವೆ. ವೈದ್ಯಕೀಯ ತುರ್ತು ಹೊರತುಪಡಿಸಿ, ಸಾರ್ವಜನಿಕರು ರಸ್ತೆಗಿಳಿಯುವಂತಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟವಾಗಿ ಹೇಳಿದೆ.

ಸರ್ಕಾರಿ, ವೈದ್ಯಕೀಯ, ಮಾಧ್ಯಮ ಸಿಬ್ಬಂದಿ ಹೊರತುಪಡಿಸಿ ಅನಗತ್ಯವಾಗಿ ರಸ್ತೆಗಳಿಯುವ ಇತರೆ ವಾಹನಗಳಿಗೆ ಇಂಧನ ಹಾಕದಂತೆ ಪೆಟ್ರೋಲ್‌ ಬಂಕ್‌ಗಳಿಗೆ ನಿರ್ದೇಶನ ನೀಡಲಾಗಿದೆ. ಪ್ರತಿನಿತ್ಯದ ಪೆಟ್ರೋಲ್‌–ಡೀಸೆಲ್‌ ಮಾರಾಟ ವಿವರವನ್ನೂ ಬಂಕ್‌ ಮಾಲೀಕರು ಜಿಲ್ಲಾಡಳಿತಕ್ಕೆ ಕಳುಹಿಸಬೇಕು. ಸೋಂಕು ತಗುಲಿದ ವೃದ್ಧೆಯ ಮನೆ ಇರುವ ಪ್ರದೇಶ ಮತ್ತು ಅವರು ಭೇಟಿ ನೀಡಿದ ಪ್ರದೇಶವನ್ನು ನಿರ್ಬಂಧಿತ ಪ್ರದೇಶವನ್ನಾಗಿ ಘೋಷಿಸಿ, ವಾಹನ ಮತ್ತು ಜನ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ.

ADVERTISEMENT

ಈಗಾಗಲೇ ಪಡಿತರ ವಿತರಣೆಗೆ ಕ್ರಮ ವಹಿಸಲಾಗಿದೆ. ವ್ಯಾಪಾರಿಗಳು ಫಲಾನುಭವಿಗಳ ಮನೆಗೆ ಹೋಗಿ ಪಡಿತರ ವಿತರಿಸಬೇಕು. ಇದಕ್ಕೆ ಒಪ್ಪದ ವ್ಯಾಪಾರಿಗಳ ಪರವಾನಿಗೆ ರದ್ದುಪಡಿಸಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಸದ್ಯ ಗದುಗಿನ ಎಪಿಎಂಸಿ ಆವರಣದಲ್ಲಿ ತರಕಾರಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಮಂಗಳವಾರ ಈ ಮಾರುಕಟ್ಟೆಯ ಪ್ರವೇಶ ದ್ವಾರದಲ್ಲಿ ‘ಕೊರೊನಾ ಸೋಂಕು ನಿರೋಧಕ ಸುರಂಗ’ ವ್ಯವಸ್ಥೆ ನಿರ್ಮಿಸಲಾಗಿದೆ. ಈ ಸುರಂಗದ ಮೂಲಕ ಹಾದುಹೋಗುವ ವ್ಯಕ್ತಿಗಳ ಮೇಲೆ ಸೋಂಕು ನಿರೋಧಕ ದ್ರಾವಣ ಬೀಳಲಿದೆ. ರೈತರು, ವರ್ತಕರು ಹಾಗೂ ಗ್ರಾಹಕರು ಸುರಂಗದ ಮೂಲಕ ಒಳಗೆ ಪ್ರವೇಶಿಸಬೇಕು. ವ್ಯವಹಾರದ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಪಾಡಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.