ADVERTISEMENT

ಕ್ರಿಸ್‌ಮಸ್ ಸಂಭ್ರಮಕ್ಕೆ ಕೋವಿಡ್‌ ತೊಡಕು

ಕೋವಿಡ್‌ ನಿಯಮದೊಳಗೆ ಚರ್ಚ್‌ ಹಾಗೂ ಮನೆಗಳಲ್ಲಿ ಸರಳ ಆಚರಣೆಗೆ ಸಿದ್ಧತೆ

ಸತೀಶ ಬೆಳ್ಳಕ್ಕಿ
Published 25 ಡಿಸೆಂಬರ್ 2020, 5:42 IST
Last Updated 25 ಡಿಸೆಂಬರ್ 2020, 5:42 IST
ರೆವರೆಂಡ್‌ ರೆಜಿನಾಲ್ಡ್‌ ಪಾಲ್‌
ರೆವರೆಂಡ್‌ ರೆಜಿನಾಲ್ಡ್‌ ಪಾಲ್‌   

ಗದಗ: ನಗರದ ಪ್ರಮುಖ ಚರ್ಚ್‌ಗಳನ್ನು ಸುತ್ತಾಡಿದಾಗ ಹಿಂದಿನ ವರ್ಷಗಳಂತೆ ಕ್ರಿಸ್‌ಮಸ್‌ ಆಚರಣೆಯ ಸಂಭ್ರಮದ ಸಿದ್ಧತೆ ಕಂಡುಬರಲಿಲ್ಲ. ಕ್ರೈಸ್ತರ ಮನೆಗಳಲ್ಲೂ ಆ ಸಡಗರ ಕಾಣಲಿಲ್ಲ. ಚರ್ಚ್‌ನ ಆವರಣದಲ್ಲಿ ನಿರ್ಮಿಸಿದ್ದ ಗೋದಲಿಯಲ್ಲೂ ಹಿಂದಿನ ವೈಭವದ ಬೆಳಕು ಕಾಣಿಸಲಿಲ್ಲ.

ಕರುಣಾಳು ಕ್ರಿಸ್ತನ ಜನ್ಮದಿನದ ಸಂಭ್ರಮಾಚರಣೆಗೆ ಈ ಬಾರಿ ಕೋವಿಡ್‌–19 ತೊಡರುಗಾಲು ಹಾಕಿದೆ. ಜಾತಿ, ಮತ ಭೇದ ಇಲ್ಲದೇ ಎಲ್ಲರೂ ಒಂದಾಗಿ ಸಂಭ್ರಮಿಸುವ ಕ್ರಿಸ್‌ಮಸ್‌ ಈ ಬಾರಿ ನಿಯಮಗಳ ಚೌಕಟ್ಟಿನೊಳಗೆ ಸರಳವಾಗಿ ನಡೆಯಲಿದೆ.

‘ಕೋವಿಡ್‌–19 ಮಾರ್ಗಸೂಚಿಗಳ ಕಟ್ಟುನಿಟ್ಟಿನ ಪಾಲನೆಯೊಂದಿಗೆ ಚರ್ಚ್‌ನಲ್ಲಿ ಕ್ರಿಸ್‌ಮಸ್‌ ಆಚರಿಸಲಾಗುವುದು. ಚರ್ಚ್‌ನ ಒಳಕ್ಕೆ ಬರುವ ಪ್ರತಿಯೊಬ್ಬರಿಗೂ ಆರಂಭದಲ್ಲೇ ಥರ್ಮಲ್‌ ಸ್ಕ್ರೀನಿಂಗ್‌ ಮಾಡಲಾಗುವುದು. ಮಾಸ್ಕ್‌ ಧರಿಸುವುದು, ಸ್ಯಾನಿಟೈಸರ್‌ ಬಳಕೆ ಕಡ್ಡಾಯ ಮಾಡಲಾಗಿದೆ. 250 ಮಂದಿ ಕೂರಬಹುದಾದ ಚರ್ಚ್‌ನ ಒಳಾಂಗಣದಲ್ಲಿ 100 ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು. ಹೊರಭಾಗದಲ್ಲಿ ಶಾಮಿಯಾನ ಹಾಕಿಸಿದ್ದು, ಅಲ್ಲಿ ದೊಡ್ಡ ಎಲ್‌ಇಡಿ ಪರದೆ ಅಳವಡಿಸಲಾಗುವುದು. ಭಕ್ತರು ಹಾಗೂ ಸಾರ್ವಜನಿಕರಿಗೆ ಅಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ’ ಎಂದು ಬಾಸೆಲ್‌ ಮಿಷನ್‌ ಚರ್ಚ್‌ನ ರೆವರೆಂಡ್‌ ರೆಜಿನಾಲ್ಡ್‌ ಪಾಲ್‌ ತಿಳಿಸಿದರು.

ADVERTISEMENT

‘ಶುಕ್ರವಾರ ಬೆಳಿಗ್ಗೆ 5.30ಕ್ಕೆ ನಸುಕಿನ ಆರಾಧನೆ ನಡೆಯಲಿದೆ. 8.30ಕ್ಕೆ ಕ್ರಿಸ್‌ಮಸ್‌ ಆಚರಣೆ, ಬಲಿಪೂಜೆ, ಕ್ಯಾರಲ್‌ ಗೀತಗಾಯನ, ಕಾಣಿಕೆ ಸಂಗ್ರಹ, ಧರ್ಮ ಸಂದೇಶ ನೀಡಲಾಗುವುದು. ಬಳಿಕ ಚರ್ಚ್‌ಗೆ ಬಂದಂತಹ ಎಲ್ಲ ಭಕ್ತರಿಗೂ ಕ್ರಿಸ್‌ಮಸ್‌ ಕೇಕ್‌, ಲಡ್ಡು, ಕಾರ ಹಾಗೂ ಚುರುಮುರಿ ಪೊಟ್ಟಣ ವಿತರಿಸಲಾಗುವುದು. ಕ್ರಿಸ್‌ಮಸ್‌ ಅಂಗವಾಗಿ ಪ್ರತಿವರ್ಷ ಕ್ರಿಕೆಟ್‌ ಟೂರ್ನಿ ಆಯೋಜಿಸುತ್ತಿದ್ದೆವು. ಆದರೆ, ಕೋವಿಡ್‌–19 ಕಾರಣದಿಂದಾಗಿ ಈ ಬಾರಿ ರದ್ದುಗೊಳಿಸಲಾಗಿದೆ’ ಎಂದು ಅವರು ಹೇಳಿದರು.‌

ಕ್ರಿಸ್‌ಮಸ್ ಸಂದೇಶ

ಕ್ರಿಸ್‌ಮಸ್ ಅಂದರೆ ಥಟ್‌ ಅಂತ ನೆನಪಾಗುವುದು ನಕ್ಷತ್ರ, ಗೋದಲಿ, ಕೇಕ್‌, ಔತಣಕೂಟ ಮೊದಲಾದವು. ಆದರೆ, ಕ್ರಿಸ್‌ಮಸ್‌ ಅಂದರೆ ಇವಿಷ್ಟೇ ಅಲ್ಲ. ನಿಜವಾದ ಅರ್ಥದಲ್ಲಿ ಕ್ರಿಸ್‌ಮಸ್‌ ಅಂದರೆ ದೇವರು ಮಾನವನ ರೂಪ ಧರಿಸಿ ಭುವಿಗೆ ಬಂದಿದ್ದು!

ನಿರ್ವಿಕಾರನಾದ ದೇವರು ತನ್ನನ್ನು ತಾನು ಆಕಾರಕ್ಕೆ ಒಗ್ಗಿಸಿಕೊಂಡ. ಮಾನವ ಶರೀರವೆಂಬ ಮಿತಿಯೊಳಗೆ ತನ್ನನ್ನು ಸೀಮಿತಗೊಳಿಸಿಕೊಂಡ. ಸರ್ವಾಧಿಕಾರಿಯಾದ ದೇವರು ದಾನದ ರೂಪ ಧರಿಸಿದ. ಈ ರೀತಿ ದೇವರು ಮಾನವನಾಗಿ ನಮ್ಮ ಮಧ್ಯೆ ಬಂದಿದ್ದನ್ನು ಕ್ರಿಸ್‌ಮಸ್‌ ತಿಳಿಸುತ್ತದೆ. ‌

ನಮ್ಮನ್ನು ಅಜ್ಞಾನದಿಂದ, ಅಂಧಕಾರದಿಂದ ಬಿಡಿಸಿ ಸಂರಕ್ಷಿಸಲು ಏಸು ಮಾನವನಾಗಿ ಭೂಮಿಗೆ ಬಂದ. ಏಸುವಿನ ಜನನದ ಮೂಲಕ ಮಾನವೀಯತೆ, ದೈವಿಕ ಸಂಬಂಧ, ದೈವಿಕ ಪ್ರೀತಿಯಂತಹ ಕೆಲವೊಂದು ಅಮೂಲ್ಯ ವಿಚಾರಗಳು ಕೂಡ ಜನಿಸಿದವು. ಇಂದು ಕ್ರಿಸ್‌ಮಸ್‌ ಆಚರಿಸುವ ಪ್ರತಿಯೊಬ್ಬರೂ ಇವುಗಳನ್ನು ನೆನಪು ಮಾಡಿಕೊಂಡು, ಅದರಂತೆ ನಡೆಯಬೇಕು. ಎಲ್ಲರಿಗೂ ಕ್ರಿಸ್‌ಮಸ್ ಹಬ್ಬದ ಶುಭಾಶಯಗಳು.

ರೆವರೆಂಡ್‌ ರೆಜಿನಾಲ್ಡ್‌ ಪಾಲ್‌
ಬಾಸೆಲ್‌ ಮಿಷನ್‌ ಚರ್ಚ್‌, ಬೆಟಗೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.