ADVERTISEMENT

ಗದಗ | ಜಿಲ್ಲೆಯಲ್ಲಿ 18ಕ್ಕೇರಿದ ಕೋವಿಡ್‌‌ ಪ್ರಕರಣ

ಮುಂಬೈನಿಂದ ಜಿಲ್ಲೆಗೆ ಬಂದ ಮಹಿಳೆಯಲ್ಲಿ ಸೋಂಕು ಪತ್ತೆ

​ಪ್ರಜಾವಾಣಿ ವಾರ್ತೆ
Published 19 ಮೇ 2020, 13:42 IST
Last Updated 19 ಮೇ 2020, 13:42 IST
ಬಸ್‌ ಸಂಚಾರ ಆರಂಭವಾದ ಬೆನ್ನಲ್ಲೇ ಪ್ರಯಾಣಿಕರು ಮಂಗಳವಾರ ಗದುಗಿನಿಂದ ಬೇರೆಡೆಗೆ ಪ್ರಯಾಣಿಸಲು ನಿಲ್ದಾಣಕ್ಕೆ ಮುಗಿಬಿದ್ದರು
ಬಸ್‌ ಸಂಚಾರ ಆರಂಭವಾದ ಬೆನ್ನಲ್ಲೇ ಪ್ರಯಾಣಿಕರು ಮಂಗಳವಾರ ಗದುಗಿನಿಂದ ಬೇರೆಡೆಗೆ ಪ್ರಯಾಣಿಸಲು ನಿಲ್ದಾಣಕ್ಕೆ ಮುಗಿಬಿದ್ದರು   

ಗದಗ: ಮುಂಬೈನಿಂದ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ಸೂರಣಗಿ ಗ್ರಾಮಕ್ಕೆ ಬಂದಿದ್ದ ಐವರಲ್ಲಿ, 49 ವರ್ಷದ ಮಹಿಳೆಗೆ (ಪಿ-1307) ಮಂಗಳವಾರ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಪಾಸಿಟಿವ್‌ ಪ್ರಕರಣಗಳ ಸಂಖ್ಯೆ 18ಕ್ಕೇರಿದೆ.

ಉಳಿದ ನಾಲ್ವರನ್ನು ನಿಗಾದಲ್ಲಿ ಇರಿಸಲಾಗಿದ್ದು, ಅವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಇವರ ದ್ವಿತೀಯ ಸಂಪರ್ಕಕ್ಕೆ ಬಂದ ಎಂಟು ಜನರನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ. ಇವರೆಲ್ಲರೂ ಮೇ 15ರಂದು ಮುಂಬೈನಿಂದ ಖಾಸಗಿ ವಾಹನದಲ್ಲಿ ಜಿಲ್ಲೆಗೆ ಬಂದಿದ್ದರು.

ಸೋಮವಾರವಷ್ಟೇ ಗದುಗಿನ ಕಂಟೈನ್‍ಮೆಂಟ್ ಪ್ರದೇಶ ಗಂಜಿಬಸವೇಶ್ವರ ಓಣಿಯ ನಾಲ್ವರಿಗೆ ಮತ್ತು ತಮಿಳುನಾಡಿನಿಂದ ಬಂದಿದ್ದ ವ್ಯಕ್ತಿಯೊಬ್ಬರಿಗೆ ಸೋಂಕು ಕಾಣಿಸಿಕೊಂಡಿತ್ತು. ಲಾಕ್‌ಡೌನ್‌ ಸಡಿಲಿಕೆ ಬೆನ್ನಲ್ಲೇ ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಇದರ ಬೆನ್ನಲ್ಲೇ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿರುವುದು ತೀವ್ರ ಆತಂಕ ಮೂಡಿಸಿದೆ.

ADVERTISEMENT

12 ಸಕ್ರಿಯ ಪ್ರಕರಣಗಳು: ಜಿಲ್ಲೆಯಲ್ಲಿ ಇದುವರೆಗೆ ವರದಿಯಾಗಿರುವ 18 ಪಾಸಿಟಿವ್‌ ಪ್ರಕರಣಗಳಲ್ಲಿ ಮೊದಲ ಸೋಂಕಿತೆ 80 ವರ್ಷದ ವೃದ್ಧೆ (ಪಿ-166) ಹೃದಯಾಘಾತದಿಂದ ನಿಧನರಾಗಿದ್ದಾರೆ. ಇನ್ನುಳಿದ ಐವರು ಪಿ-304, ಪಿ-370, ಪಿ-396, ಪಿ-514 ಹಾಗೂ ಪಿ.912 ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ಸದ್ಯ 12 ಪ್ರಕರಣಗಳು ಸಕ್ರಿಯವಾಗಿವೆ.

ಕಂಟೈನ್‌ಮೆಂಟ್‌ ಪ್ರದೇಶದ ಸಂಪರ್ಕದಿಂದ ಇಬ್ಬರಿಗೆ ಸೋಂಕು ಕಾಣಿಸಿಕೊಂಡ ಬೆನ್ನಲ್ಲೇ, ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಅವರು, ಮಂಗಳವಾರ ಗಂಜಿ ಬಸವೇಶ್ವರ ಓಣಿಗೆ ಭೇಟಿ ನೀಡಿ ಪರಿಶೀಲಿಸಿದರು. ಪ್ರತಿಬಂಧಿತ ಪ್ರದೇಶದಲ್ಲಿ ಜನರು ಮನೆ ಬಿಟ್ಟು ಹೊರಗೆ ಬಾರದಂತೆ ಹಾಗೂ ಅಗತ್ಯದ ಸಾಮಗ್ರಿಗಳನ್ನು ಪೂರೈಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಉಪ ವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಗದಗ ತಹಶೀಲ್ದಾರ್‌ ಶ್ರೀನಿವಾಸಮೂರ್ತಿ ಕುಲಕರ್ಣಿ,ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ ಎಸ್.ಎನ್., ಗದಗ-ಬೆಟಗೇರಿ ನಗರ ಸಭೆ ಪೌರಾಯುಕ್ತ ಮನ್ಸೂರ ಅಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.