ADVERTISEMENT

ತೆಲಂಗಾಣ ಮಾದರಿ ಮರಳು ನೀತಿ, ಕಡಿಮೆ ದರದಲ್ಲಿ ಮರಳು ಪೂರೈಕೆಗೆ ಕ್ರಮ: ಸಚಿವ ಪಾಟೀಲ

​ಪ್ರಜಾವಾಣಿ ವಾರ್ತೆ
Published 2 ಮೇ 2020, 11:03 IST
Last Updated 2 ಮೇ 2020, 11:03 IST
ಸಚಿವ ಸಿ.ಸಿ ಪಾಟೀಲ
ಸಚಿವ ಸಿ.ಸಿ ಪಾಟೀಲ   

ಗದಗ: ‘ಜನರಿಗೆ ಕಡಿಮೆ ದರದಲ್ಲಿ ಸುಲಭವಾಗಿ ಹಾಗೂ ಪಾರದರ್ಶಕವಾಗಿ ಮರಳು ದೊರೆಯುವಂತೆ ಮಾಡಲು ತೆಲಂಗಾಣ ರಾಜ್ಯದ ಮರಳು ನೀತಿಯನ್ನು ಸಣ್ಣಪುಟ್ಟ ತಿದ್ದುಪಡಿಯೊಂದಿಗೆ ರಾಜ್ಯದಲ್ಲಿ ಜಾರಿಗೊಳಿಸಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ’ ಎಂದು ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ.ಸಿ.ಪಾಟೀಲ ಹೇಳಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹೊಸ ಮರಳು ನೀತಿ ಅನ್ವಯ ಹಳ್ಳ, ತೊರೆ, ಕೆರೆಗಳಲ್ಲಿನ ಮರಳು ನಿಕ್ಷೇಪಗಳನ್ನು ಗ್ರಾಮ ಪಂಚಾಯ್ತಿ ಅನುಮತಿಯೊಂದಿಗೆ ರೈತರೇ ತೆಗೆಯಬಹುದಾಗಿದೆ. ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಿರ್ವಹಿಸುವ ಮನೆ, ರಸ್ತೆ ಕಾಮಗಾರಿಗಳಿಗೆ ಲಘು ವಾಹನ ಮತ್ತು ಎತ್ತಿನ ಗಾಡಿಗಳ ಮೂಲಕ ಮರಳು ಸಾಗಾಣಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ’ ಎಂದರು.

‘ನದಿ, ಆಣೆಕಟ್ಟುಗಳ ಹಿನ್ನೀರಿನ ಪ್ರದೇಶಗಳಲ್ಲಿನ ಮರಳು ನಿಕ್ಷೇಪಗಳನ್ನು ಸರ್ಕಾರಿ ಸ್ವಾಮ್ಯದ ನಿಗಮ ಮಂಡಳಿಗಳ ಮೂಲಕ ಗ್ರಾಹಕರಿಗೆ ಜಿಲ್ಲಾ ಮರಳು ಸಮಿತಿ ನಿಗದಿಪಡಿಸಿದ ದರದಲ್ಲಿ ಪಡೆಯುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಸದರಿ ವ್ಯವಸ್ಥೆಯನ್ನು ಪಾರದರ್ಶಕವಾಗಿ ನಿರ್ವಹಿಸುವ ಉದ್ದೇಶದಿಂದ ಮೊಬೈಲ್ ಅಪ್ಲಿಕೇಷನ್‌ ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ಮೊಬೈಲ್‌ ಆ್ಯಪ್ ಮೂಲಕ ಗ್ರಾಹಕರು ನೇರವಾಗಿ ಮರಳು ಪಡೆಯುವ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದರು.

ADVERTISEMENT

ಅಕ್ರಮ ಗಣಿಗಾರಿಕೆ ತಡೆಗಟ್ಟಲು ಹೊಸದಾಗಿ ಖನಿಜ ರಕ್ಷಣಾ ಪಡೆ ಸ್ಥಾಪಿಸಲಾಗುವುದು. ಈ ಮೂಲಕ ಅನಧಿಕೃತ ಗಣಿಗಾರಿಕೆ, ಸಾಗಾಣಿಕೆ ಮತ್ತು ಅನಧಿಕೃತ ಖನಿಜ ದಾಸ್ತಾನಿನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದರು.

ವೈದ್ಯರಿಗೆ ಅಭಿನಂದನೆ: ಜಿಲ್ಲೆಯಲ್ಲಿ ನಾಲ್ವರು ಕೋವಿಡ್‌ ಸೋಂಕಿತರಲ್ಲಿ 59 ವರ್ಷದ ಮಹಿಳೆ (ಪಿ-304) ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು ಸಂತಸದ ವಿಷಯ. ಸೊಂಕಿತ ಮಹಿಳೆಗೆ ಚಿಕಿತ್ಸೆ ನೀಡಿದ ವೈದ್ಯರು ಹಾಗೂ ಶುಶ್ರೂಕಿಯರಿಗೆ ಅಭಿನಂದನೆ ಎಂದು ಸಚಿವ ಸಿ.ಸಿ.ಪಾಟೀಲ ಹೇಳಿದರು. ವಿಧಾನ ಪರಿಷತ್‌ ಸದಸ್ಯ ಎಸ್.ವಿ.ಸಂಕನೂನರ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಆನಂದ ಕೆ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಯತೀಶ ಎನ್. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.