ADVERTISEMENT

ಶಿರಹಟ್ಟಿ | ಬೆಳೆ ವಿಮೆ ಸಮೀಕ್ಷೆ: ಆರೋಪ

ವಿಪತ್ತು ನಿರ್ವಾಹಣ ಪ್ರಾಧಿಕಾರದ ಸಭೆ: ಶಾಸಕ ಚಂದ್ರು ಲಮಾಣಿ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 2:47 IST
Last Updated 8 ಸೆಪ್ಟೆಂಬರ್ 2025, 2:47 IST
ಶಿರಹಟ್ಟಿಯ ತಹಶೀಲ್ದಾರ್‌ ಕಚೇರಿಯಲ್ಲಿ ನಡೆದ ವಿಪತ್ತು ನಿರ್ವಾಹಣ ಪ್ರಾಧಿಕಾರದ ಸಭೆಯಲ್ಲಿ ಶಾಸಕ ಡಾ.ಚಂದ್ರು ಲಮಾಣಿ ಕೃಷಿ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು
ಶಿರಹಟ್ಟಿಯ ತಹಶೀಲ್ದಾರ್‌ ಕಚೇರಿಯಲ್ಲಿ ನಡೆದ ವಿಪತ್ತು ನಿರ್ವಾಹಣ ಪ್ರಾಧಿಕಾರದ ಸಭೆಯಲ್ಲಿ ಶಾಸಕ ಡಾ.ಚಂದ್ರು ಲಮಾಣಿ ಕೃಷಿ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು   

ಶಿರಹಟ್ಟಿ: ‘2025ನೇ ಸಾಲಿನ ಮುಂಗಾರಿನ ಬೆಳೆ ಸಮೀಕ್ಷೆಗೆ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿದ್ದು, ಅತಿವೃಷ್ಟಿಯಿಂದ ಹಾನಿಗೊಳಗಾದ ರೈತರ ಜಮೀನುಗಳಿಗೆ ಭೇಟಿ ನೀಡದೇ ತಪ್ಪು ಮಾಹಿತಿ ನೀಡಿದ್ದಾರೆ’ ಎಂದು ಶಾಸಕ ಡಾ.ಚಂದ್ರು ಲಮಾಣಿ ಆರೋಪಿಸಿದರು.

ಸ್ಥಳೀಯ ತಹಶೀಲ್ದಾರ್‌ ಕಾರ್ಯಾಲಯದಲ್ಲಿ ನಡೆದ ವಿಪತ್ತು ನಿರ್ವಾಹಣ ಪ್ರಾಧಿಕಾರದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಕೃಷಿ ಅಧಿಕಾರಿಗಳು ರೈತರ ಜಮೀನಿಗೆ ಹೋಗದೆ ಬೆಳೆ ಹಾನಿ ಸಮೀಕ್ಷೆಯನ್ನು ಯಾವ ಆಧಾರದಲ್ಲಿ ಮಾಡುತ್ತಿರಿ?. ನಿರಂತರ ಮಳೆಯಿಂದ ಹೆಸರು ಬೆಳೆ, ಮೆಕ್ಕೆಜೋಳ, ಮೆಣಸಿನಕಾಯಿ ಎಷ್ಟು ಹಾನಿಯಾಗಿವೆ’ ಎಂದು ಪ್ರಶ್ನಿಸಿದರು.

ಪ್ರತಿಕ್ರಿಯಿಸಿದ ಕೃಷಿ ಅಧಿಕಾರಿ ರೇವಣೆಪ್ಪ ಮನಗೂಳಿ, ‘121 ಹೇಕ್ಟರ್ ತೋಟಗಾರಿಕೆ ಬೆಳೆ ಮತ್ತು ಒಣ ಬೇಸಾಯದ 695 ಹೇಕ್ಟರ್ ಬೆಳೆ ಹಾನಿ ಸೇರಿ ಒಟ್ಟು 816 ಹೇಕ್ಟರ್ ಪ್ರದೇಶ ಹಾನಿಯಾಗಿದೆ. ಅದರಲ್ಲಿ ಹೆಸರು ಬೆಳೆ 62 ಹೆಕ್ಟೇರ್, ಮೆಣಸಿನಕಾಯಿ 57 ಹೆಕ್ಟೇರ್, ಉಳ್ಳಾಗಡ್ಡಿ 72 ಹೆಕ್ಟೇರ್, ಕೋಸು ಗಡ್ಡೆ 67 ಹೆಕ್ಟೇರ್ ಹಾನಿಯಾಗಿದ್ದು, ಮೆಕ್ಕೆಜೋಳ ಯಾವುದೇ ಹಾನಿಯಾಗಿಲ್ಲ’ ಎಂದು ಮಾಹಿತಿ ನೀಡಿದರು.

ADVERTISEMENT

ಪ್ರತಿಕ್ರಿಯಿಸಿದ ಶಾಸಕರು, ‘ತಾಲ್ಲೂಕಿನಲ್ಲಿ ಹೆಚ್ಚು ರೈತರು ಮೆಕ್ಕೆಜೋಳದ ಬೆಳೆ ಬೆಳೆದಿದ್ದಾರೆ. ತಹಸೀಲ್ದಾರ್‌ ಅವರೆ ಖುದ್ದು ರೈತರ ಜಮೀನಿಗೆ ಭೇಟಿ ನೀಡಿ ಮೆಕ್ಕೆಜೋಳ ಬೆಳೆ ಹಾನಿ ಗುರುತಿಸಿದ್ದು ಸರಿಯಾಗಿ ಸಮೀಕ್ಷೆ ಮಾಡದೇ ಸುಳ್ಳು ವರದಿ ನೀಡುತ್ತಿರುವುದು ಸರಿಯಲ್ಲ. ಕಳೆದ 4 ವರ್ಷದಿಂದ ಈ ರೀತಿಯ ಆರೋಪ ಕೇಳಿ ಬರುತ್ತಿದ್ದು, ರೈತರಿಗೆ ಅನ್ಯಾಯ ಮಾಡುತ್ತಿದ್ದಿರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರ ಬೆಳೆಗಳಿಗೆ ಬೆಳೆಹಾನಿ ವಿತರಿಸಬೇಕು. ತಾಲ್ಲೂಕಿನಲ್ಲಿ ಹಲವು ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ನಿರಂತರ ಮಳೆಯಿಂದ ಮನೆ ಹಾನಿ ಆದವರಿಗೆ ಪರಿಹಾರ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ತಹಶೀಲ್ದಾರ್‌ ಕೆ. ರಾಘವೇಂದ್ರ ರಾವ್, ಸಿಡಿಪಿಒ ಮೃತ್ಯುಂಜಯ್ಯ ಗುಡ್ಡದಾನ್ವೇರಿ, ಗ್ರಾಮೀಣ ನೀರು ಸರಬರಾಜು ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನಗೌಡ ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.