ಗಜೇಂದ್ರಗಡ: ಪಟ್ಟಣದಲ್ಲಿ ಖಾಸಗಿ ಕಂಪನಿಯಲ್ಲಿನ ಕೆಲಸದ ಜೊತೆಗೆ ಗ್ರಾಮದಲ್ಲಿರುವ ಸಂಬಂಧಿಯ ನಿವೇಶನದಲ್ಲಿ (ಪ್ಲಾಟ್) ಸೌತೆ ಪ್ಲಾಟ್ ಮಾಡಿ ಟ್ಯಾಂಕರ್ ನೀರು ಹಾಯಿಸಿ ತಾಯಿ-ಮಗ ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದಾರೆ.
ಸಮೀಪದ ದಿಂಡೂರ ಗ್ರಾಮದ ಪ್ರಮೋದ ಅಬ್ಬಿಗೇರಿ ಬಿ.ಎ ಪದವಿಧರನಾಗಿದ್ದು, ಗಜೇಂದ್ರಗಡದಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಅದೇ ಕಂಪನಿಯಲ್ಲಿ ಅವರ ತಾಯಿ ಯಶೋದಾ ಅಬ್ಬಿಗೇರಿ ಅಡುಗೆ ಮಾಡುತ್ತಿದ್ದಾರೆ. ಮೊದಲಿನಿಂದಲೂ ಕೃಷಿ ಮಾಡಬೇಕೆಂಬ ಬಯಕೆ ಹೊಂದಿದ್ದ ಪ್ರಮೋದ ಗ್ರಾಮದ ಹೊರ ವಲಯದಲ್ಲಿರುವ ಸಂಬಂಧಿಯ ಎರಡು ನಿವೇಶನಗಳ ಪೈಕಿ ಒಂದ ನಿವೇಶನದಲ್ಲಿ 2 ಸಾವಿರ ಸೌತೆ ಬೀಜಗಳನ್ನು ನಾಟಿ ಮಾಡಿದ್ದಾರೆ. ಪ್ಲಾಟ್‌ನ ಒಂದು ಮೂಲೆಯಲ್ಲಿ 3 ಸಾವಿರ ಲೀ. ಸಾಮರ್ಥ್ಯದ ಸಿಂಟ್ಯಾಕ್ಸ್ ಅಳವಡಿಸಿದ್ದಾರೆ. ಅದಕ್ಕೆ ಟ್ಯಾಂಕರ್ ಅಥವಾ ಪಕ್ಕದಲ್ಲಿರುವ ಸಂಬಂಧಿಕರ ಕೊಳವೆ ಬಾವಿಯಿಂದ ನೀರು ಪಡೆದು ಮೂರು ದಿನಗಳಿಗೊಮ್ಮೆ ನಾಟಿ ಮಾಡಿದ ಸಸಿಗಳಿಗೆ ಡ್ರಿಪ್ ಮೂಲಕ ನೀರುಣಿಸುತ್ತಿದ್ದಾರೆ.
ಆರಂಭದಲ್ಲಿ ಪ್ಲಾಟ್‌ನಲ್ಲಿ ಕೃಷಿ ಮಾಡಲು ಆಗುತ್ತದೆಯೇ?, ಭೂಮಿ ಸರಿಯಿಲ್ಲ ಎಂದು ಹಲವರ ಸಲಹೆ ಹಾಗೂ ಮನೆಯವರ ಪ್ರೋತ್ಸಾಹದಿಂದ ಕೃಷಿ ಆರಂಭಿಸಿದ್ದ ಪ್ರಮೋದ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಸೌತೆ ಪ್ಲಾಟ್ ನಿರ್ವಹಣೆ ಮಾಡಿದರೆ, ಮಧ್ಯಾಹ್ನ 2 ಗಂಟೆಯಿಂದ ಸಂಜೆ ವರೆಗೆ ತಾಯಿ ನಿರ್ವಹಣೆ ಮಾಡುತ್ತಿದ್ದಾರೆ. ಬೀಜ ನಾಟಿ, ಕಟ್ಟಿಗೆ ನೆಡುವುದು ಸೇರಿದಂತೆ ಸುಮಾರು ₹50 ಸಾವಿರ ಖರ್ಚು ಮಾಡಿದ್ದಾರೆ. ಸದ್ಯ ಕಾಯಿ ಬರುತ್ತಿದ್ದು, ಪ್ರತಿದಿನ ಸುಮಾರು 2 ಸಾವಿರ ಕಾಯಿ ಬರುತ್ತಿದ್ದು, ಕಂಪನಿಯವರ ಪ್ರತಿದಿನ ತೋಟಕ್ಕೆ ಬಂದು ಕಾಯಿ ಖರಿದಿಸುತ್ತಿದ್ದಾರೆ.
‘ನನ್ನ ಮಗ ಗಜೇಂದ್ರಗಡದಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾನೆ. ಅದೇ ಕಂಪನಿಯಲ್ಲಿ ನಾನು ಅಡುಗೆ ಮಾಡುತ್ತೇನೆ. ಅದರಿಂದ ಬರುವ ಆದಾಯದಲ್ಲಿ ಮನೆ ನಡೆಯುವುದಿಲ್ಲ. ಅಲ್ಲದೆ ಮಗನಿಗೆ ಕೃಷಿ ಮಾಡಬೇಕೆಂಬ ಆಸೆಯಿತ್ತು. ಹೀಗಾಗಿ ನಮ್ಮ ಸಂಬಂಧಿಕರ ಎರಡು ಪ್ಲಾಟ್‌ಗಳ ಪೈಕಿ ಒಂದರಲ್ಲಿ ಸೌತೆ ಪ್ಲಾಟ್ ಮಾಡಿ ಕೃಷಿ ಮಾಡುತ್ತಿದ್ದೇವೆ. ಇದರಿಂದ ಲಾಭ ಬಂದರೆ ಮನೆ ನಡೆಸಲು ಅನುಕೂಲವಾಗುತ್ತದೆ’ ಎನ್ನುತ್ತಾರೆ ಪ್ರಮೋದ ಅವರ ತಾಯಿ ಯಶೋದಾ ಅಬ್ಬಿಗೇರಿ.
‘ನಮ್ಮ ಗ್ರಾಮದ ಬಡ ಕುಟುಂಬದ ಪ್ರಮೋದ ಅಬ್ಬಿಗೇರಿ ಕಳೆದ ನಾಲ್ಕೆದು ವರ್ಷಗಳ ಹಿಂದೆ ತಂದೆ ಕಳೆದುಕೊಂಡಿದ್ದಾರೆ. ತಾಯಿಯೊಂದಿಗೆ ಪರಿಶ್ರಮದಿಂದ ದುಡಿದು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಈ ವರ್ಷ ಅವರ ಸಂಬಂಧಿಕರ ನಿವೇಶನದಲ್ಲಿ ಸೌತೆ ಪ್ಲಾಟ್ ಮಾಡಲು ಮುಂದಾದಾಗ ಪ್ರಮೋದನಿಗೆ ಪ್ಲಾಟ್ ನಿರ್ವಹಣೆ ಜೊತೆಗೆ ಉತ್ತಮ ಇಳುವರಿ ಪಡೆಯಲು ಮಾರ್ಗದರ್ಶನ ನೀಡುತ್ತಿದ್ದೇನೆ. ನಿವೇಶನದಲ್ಲಿ ಕೃಷಿ ಮಾಡುತ್ತಿರುವ ಪ್ರಮೋದ ಇತರ ಯುವಕರಿಗೆ ಮಾದರಿಯಾಗಿದ್ದಾರೆ’ ಎನ್ನುತ್ತಾರೆ ದಿಂಡೂರ ಗ್ರಾಮದ ನಿವಾಸಿ ಹಾಗೂ ಖಾಸಗಿ ಕಂಪನಿಯ ಕ್ಷೇತ್ರ ಅಧಿಕಾರಿ ಬಸವರಾಜ ಕುರುಬನಾಳ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.