
ಶಿರಹಟ್ಟಿ: ಜನಸಾಮಾನ್ಯರ ಬೇಡಿಕೆಯಂತೆ ರಾಜ್ಯ ಸರ್ಕಾರದ ಆಯವ್ಯಯ ರೂಪಿತಗೊಳ್ಳಬೇಕು. ಗ್ರಾಮ ಸಭೆಗಳ ಮೂಲಕ ತಳಹಂತದ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ಕರೆ ನೀಡಿದರು.
ಸ್ಥಳೀಯ ತಾಲ್ಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಗುರುವಾರ ನಡೆದ ಗ್ರಾಮ ಪಂಚಾಯಿತಿ ಹಾಗೂ ಪಟ್ಟಣ ಪಂಚಾಯಿತಿ, ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ಮತ್ತು ತಾಲ್ಲೂಕು ಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿಗಳ, ಗ್ರಾಮ ಪಂಚಾಯಿತಿ ಪಿಡಿಒಗಳೊಂದಿಗೆ, ಜನರ ಪಾಲ್ಗೊಳ್ಳುವಿಕೆಯಿಂದ 2027-28ನೇ ಸಾಲಿನ ಯೋಜನೆಯನ್ನು ಅರ್ಥಪೂರ್ಣವಾಗಿ ಜನಪರ ಯೋಜನೆಯನ್ನಾಗಿ ಮಾಡುವ ಕುರಿತು ಕರೆದ ಚಿಂತನ ಮಂಥನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸ್ಥಳೀಯವಾಗಿ ಮೀಸಲಾತಿ ಆಧಾರದ ಮೇಲೆ ಇಲ್ಲಿಯವರೆಗೂ ಅಧಿಕಾರಕ್ಕೆ ಬಂದ ಜನಪ್ರತಿನಿಧಿಗಳಿಗೆ ಅಧಿಕಾರಿಗಳು ಗ್ರಾಮಸಭೆ, ಗ್ರಾಮ ಪಂಚಾಯಿತಿಗಳಿಗೆ ಇರುವ ಅಧಿಕಾರದ ಕುರಿತು ಸಮಗ್ರವಾಗಿ ತಿಳಿಸಿಲ್ಲ. ಇನ್ನು ಮುಂದೆ ಈ ಕೆಲಸ ಆಗಬೇಕು. ಸಾಮಾನ್ಯ ಜನರ ಅಪೇಕ್ಷೆ ಅನಿಸಿಕೆಯಂತೆ ಸ್ಥಳೀಯ ಮಟ್ಟದ ಸಮಸ್ಯೆಗಳು ಈ ಬಾರಿಯ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಅಳವಡಿಕೆಯಾಗುವ ಹಂತದಲ್ಲಿ ಗಮನ ಸೆಳೆಯಲು ಎಲ್ಲರೂ ಸಹಕರಿಸಬೇಕು ಎಂದರು.
ಗ್ರಾಮ ಸಭೆಗಳು ಸ್ಥಳೀಯ ಸರ್ಕಾರವಾಗಿ, ಅರ್ಥಪೂರ್ಣವಾಗಿ ಹಾಗೂ ಪರಿಣಾಮಕಾರಿಯಾಗಿ ನಡಯಬೇಕು. ಜನರು ಪೂರ್ಣಪ್ರಮಾಣದಲ್ಲಿ ಪಾಲ್ಗೊಳ್ಳಬೇಕು. ಸ್ಥಳೀಯವಾಗಿ ಇರುವ ಅಗತ್ಯ ಹಾಗೂ ಮೂಲ ಸೌಲಭ್ಯಗಳ ಬಗ್ಗೆ ಈಡಿ ರಾಜ್ಯಕ್ಕೆ ಮಾದರಿ ಆಗುವ ಹಾಗೆ ಯೋಜನೆ ರೂಪಿಸಿ ನಮ್ಮ ಗಮನಕ್ಕೆ ತಂದಲ್ಲಿ ಈ ಬಾರಿಯ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಅಳವಡಿಕೆಗೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಹೇಳಿದರು.
ಸ್ಥಳೀಯ ಜನರ ಸಮಸ್ಯೆಗಳ ಪರಿಹಾರಕ್ಕೆ ಎಲ್ಲರೂ ಒಗ್ಗೂಡಿ ಶಾಶ್ವತ ಯೋಜನೆ ಹಮ್ಮಿಕೊಂಡಲ್ಲಿ ಇದರ ಪ್ರಯೋಜನೆ ಜನರಿಗೆ ಸಿಗಲಿದೆ. ಇಂದಿನ ಸಭೆಯ ಉದ್ದೇಶವೂ ಇದೆ ಆಗಿದೆ. ಸಾಮಾಜಿಕ ಕಳಕಳಿ ಇದ್ದು ಸಮಾಜಕ್ಕೆ ಕೈಲಾದ ಅಳಿಲು ಸೇವೆ ಮಾಡಿದರೆ ಮಾತ್ರ ಮಹಾತ್ಮ ಗಾಂಧೀಜಿ ಅವರ ಕನಸು ನನಸಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಅಧ್ಯಕ್ಷ-ಉಪಾಧ್ಯಕ್ಷರು ಸಭೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ರಾಮಣ್ಣ ಲಮಾಣಿ, , ಸುಜಾತ ದೊಡ್ಡಮನಿ, ಜಿಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ, ಪಪಂ ಮಾಜಿ ಅಧ್ಯಕ್ಷ ಹುಮಾಯೂನ ಮಾಗಡಿ, ಗ್ರಾಪಂ ಅಧ್ಯಕ್ಷ ವೀರಯ್ಯ ಮಠಪತಿ, ರಮೆಶ ನಿರ್ವಾಣಶೆಟ್ಟರ, ಮಾಜಿ ಅಧ್ಯಕ್ಷ ಶಿವನಗೌಡ ಪಾಟೀಲ,ಎ.ಎ. ಕಂಬಾಳಿಮಠ, ತಹಸೀಲ್ದಾರ ಕೆ. ರಾಘವೇಂದ್ರ ರಾವು, ಇಒ ರಾಮಣ್ಣ ದೊಡ್ಡಮನಿ, ಪಿಎಸ್‌ಐ ಈರಪ್ಪ ರಿತ್ತಿ, ಪರಮೇಶ ಪರಬ, ಚೆನ್ನಪ್ಪ ಜಗಲಿ, ಡಿ.ಕೆ. ಹೊನ್ನಪ್ಪನವರ, ದೇವಪ್ಪ ಲಮಾಣಿ, ಹೊನ್ನಪ್ಪ ಶಿರಹಟ್ಟಿ ಸೇರಿ ಎಲ್ಲ ಗ್ರಾಪಂ ಮಾಜಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.