ADVERTISEMENT

ಡಂಬಳ | ಪ್ರವಾಸೋದ್ಯಮಕ್ಕೆ ಕುತ್ತು, ಗ್ರಾಮಸ್ಥರ ಆತಂಕ

ಉಪಯೋಗಕ್ಕೆ ಬಾರದ ತಾಜ್ಯ ಸಂಗ್ರಹ ಘಟಕ: ಎಲ್ಲೆಂದರಲ್ಲಿ ಕಸದ ರಾಶಿ

ಲಕ್ಷ್ಮಣ ಎಚ್.ದೊಡ್ಡಮನಿ
Published 15 ಸೆಪ್ಟೆಂಬರ್ 2021, 5:18 IST
Last Updated 15 ಸೆಪ್ಟೆಂಬರ್ 2021, 5:18 IST
ಡಂಬಳ ಗ್ರಾಮದ ಹೊರವಲಯದಲ್ಲಿ ಸ್ವಚ್ಚ ಭಾರತ ಅಭಿಯಾನದಲ್ಲಿ ನಿರ್ಮಿತಿ ಕೇಂದ್ರದವರು ನಿರ್ಮಾಣ ಮಾಡಿರುವ ಘನ ತಾಜ್ಯ ಸಂಗ್ರಹ ಘಟಕ ಉಪಯೋಗಕ್ಕೆ ಬಾರದೆ ಖಾಲಿ ಉಳಿದಿರುವುದು.
ಡಂಬಳ ಗ್ರಾಮದ ಹೊರವಲಯದಲ್ಲಿ ಸ್ವಚ್ಚ ಭಾರತ ಅಭಿಯಾನದಲ್ಲಿ ನಿರ್ಮಿತಿ ಕೇಂದ್ರದವರು ನಿರ್ಮಾಣ ಮಾಡಿರುವ ಘನ ತಾಜ್ಯ ಸಂಗ್ರಹ ಘಟಕ ಉಪಯೋಗಕ್ಕೆ ಬಾರದೆ ಖಾಲಿ ಉಳಿದಿರುವುದು.   

ಡಂಬಳ: ಅಸಮರ್ಪಕ ತ್ಯಾಜ್ಯ ನಿರ್ವಹಣೆಯಿಂದಾಗಿ ಗ್ರಾಮದ ರಸ್ತೆ ಬದಿಯಲ್ಲಿ ಕಸದ ಗುಡ್ಡೆಗಳು ನಿರ್ಮಾಣವಾಗಿದ್ದು, ಪರಿಸರವೆಲ್ಲವೂ ಗಬ್ಬೆದ್ದು ನಾರುತ್ತಿದೆ. ಐತಿಹಾಸಿಕ ಹಿನ್ನಲೆಯ ದೇವಸ್ಥಾನದ ಬಳಿ ಕಸದ ರಾಶಿ ಸಂಗ್ರಹಗೊಳ್ಳುತ್ತಿರುವುದರಿಂದ ಪ್ರವಾಸೋದ್ಯಮಕ್ಕೆ ಕುತ್ತು ಎದುರಾಗಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

2019-20ನೇ ಸಾಲಿನಲ್ಲಿ ಗ್ರಾಮದ ಹೊರವಲಯದಲ್ಲಿ ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ಘನ ಮತ್ತು ದ್ರವ್ಯ ತಾಜ್ಯ ನಿರ್ವಹಣೆ ಘಟಕವನ್ನು ₹11 ಲಕ್ಷ ವಚ್ಚದಲ್ಲಿ ನಿರ್ಮಿಸಲಾಗಿದೆ. ಆದರೆ, ಗ್ರಾಮ ಪಂಚಾಯ್ತಿಯವರು ತ್ಯಾಜ್ಯ ಸಂಗ್ರಹ ಘಟಕವನ್ನು ಬಳಸದೇ ಇರುವುದರಿಂದ ಐತಿಹಾಸಿಕ ದೇವಸ್ಥಾನ ಹಾಗೂ ಗ್ರಾಮದ ಸೌಂದರ್ಯಕ್ಕೆ ಧಕ್ಕೆಯಾಗುತ್ತಿದೆ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ.

‘ಗ್ರಾಮ ಪಂಚಾಯ್ತಿಯವರು ಮನೆಗಳಿಂದ ಕಸ ಸಂಗ್ರಹಿಸದೇ ಇರುವುದರಿಂದ ಇಷ್ಟೆಲ್ಲಾ ಸಮಸ್ಯೆಗಳು ಉದ್ಭವವಾಗಿವೆ. ಹಾಗಾಗಿ, ಜನರು ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಕೆಲವರು ತ್ಯಾಜ್ಯವನ್ನೆಲ್ಲಾ ತಂದು ಚರಂಡಿಗೆ ಸುರಿಯುತ್ತಾರೆ. ತ್ಯಾಜ್ಯ ಹೆಚ್ಚಾಗಿ ಚರಂಡಿಗಳು ಕಟ್ಟಿಕೊಳ್ಳುತ್ತಿದ್ದು, ಮಳೆಗಾಲದಲ್ಲಿ ತೀವ್ರ ಸಮಸ್ಯೆ ಎದುರಾಗುತ್ತಿದೆ. ಆಗ ಪಂಚಾಯ್ತಿ ಅಧಿಕಾರಿಗಳು ಚರಂಡಿ ಸ್ವಚ್ಛಗೊಳಿಸಿ ಅಲ್ಲಿನ ಕಸವನ್ನು ಮತ್ತೇ ರಸ್ತೆ ಬದಿಗೆ ಸುರಿಸುತ್ತಿದ್ದಾರೆ. ಇದರಿಂದಾಗಿ ಕಸ ವಿಲೇವಾರಿ ಆಗದೇ ಊರಿನಲ್ಲೇ ಉಳಿಯುತ್ತಿದೆ. ಪರಿಸರವೆಲ್ಲವೂ ಅನೈರ್ಮಲ್ಯಗೊಂಡಿರುವುದಕ್ಕೆ ಪಂಚಾಯ್ತಿ ಅಧಿಕಾರಿಗಳ ತಿಳಿಗೇಡಿತನವೇ ಕಾರಣ’ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಪಂಚಾಯ್ತಿ ಅಧಿಕಾರಿಗಳು ಚರಂಡಿಯಲ್ಲಿನ ಕಸ ಎತ್ತಿಸಲು ಬಾಡಿಗೆ ಟ್ರಾಕ್ಟರ್‌ ಬಳಸಿಕೊಂಡು ಲಕ್ಷಾಂತರ ರೂಪಾಯಿ ಬಿಲ್ ಪಾವತಿ ಮಾಡುತ್ತಾರೆ. ಆದರೆ, ಕಸವೆಲ್ಲವೂ ಮತ್ತೇ ಗ್ರಾಮದ ರಸ್ತೆ ಬದಿಗೇ ಬಂದು ಬೀಳುತ್ತಿದೆ. ಇದರಿಂದಾಗಿ ಐತಿಹಾಸಿಕ ಹಿನ್ನಲೆಯ ದೊಡ್ಡಬಸವೇಶ್ವರ ದೇವಸ್ಥಾನ, ಸೋಮೇಶ್ವರ ದೇವಸ್ಥಾನ, ಪ್ರವಾಸಿ ಮಂದಿರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬದಿ ಎಲ್ಲವೂ ಕಸದ ರಾಶಿಯಿಂದ ತುಂಬಿಕೊಂಡಿದೆ. ತ್ಯಾಜ್ಯ ವಿಲೇವಾರಿ ಘಟಕ ಬಳಕೆ ಮಾಡದೇ ಇರುವುದಾದರೂ ಯಾಕೆ’ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

‘ಗ್ರಾಮದಲ್ಲಿ ಐತಿಹಾಸಿಕ ಹಿನ್ನಲೆಯ ತೋಂಟದಾರ್ಯ ಮಠ, ಜಪದಬಾವಿ, ಗಣೇಶ ಗುಡಿ, ವಿಕ್ಟೋರಿಯಾ ಮಹಾರಾಣಿ ಕೆರೆ, ಡಂಬಳದ ಕೋಟೆ ಮುಂತಾದ ತಾಣಗಳಿದ್ದು, ಅವುಗಳನ್ನು ನೋಡಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಪ್ರವಾಸಿಗರು ಬರುತ್ತಾರೆ. ಆದರೆ, ಗ್ರಾಮದ ಪ್ರವಾಸಿತಾಣಗಳ ಹತ್ತಿರ ಕಸ ವಿಲೇವಾರಿ ಆಗುತ್ತಿರುವುದರಿಂದ ಗ್ರಾಮದ ಸೌಂದರ್ಯಕ್ಕೆ ಹಾನಿಯಾಗುತ್ತಿದೆ. ಈ ಕುರಿತು ರಾಜ್ಯ ಪುರಾತತ್ವ ಇಲಾಖೆ ಅಧಿಕಾರಿಗಳು ಪ್ರವಾಸಿತಾಣಗಳ ಬಳಿ ಕಸ ತಂದು ಸುರಿಯದಂತೆ ಕ್ರಮ ವಹಿಸಲು ಸ್ಥಳೀಯ ಆಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು’ ಎಂದು ರೈತಮುಖಂಡ ಗೋಣಿಬಸಪ್ಪ ಎಸ್ ಕೊರ್ಲಹಳ್ಳಿ ಆಗ್ರಹಿಸಿದ್ದಾರೆ.

*
ಕಸ ಸಂಗ್ರಹಣೆಗೆ ಪಂಚಾಯ್ತಿಗೆ ಟ್ರಾಕ್ಟರ್‌ ನೀಡುವಂತೆ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ತ್ಯಾಜ್ಯ ಸಂಗ್ರಹ ಘಟಕದಲ್ಲಿ ಕಸ ಸಂಗ್ರಹವಾಗುವಂತೆ ಕ್ರಮ ತಗೆದುಕೊಳ್ಳಲಾಗುವುದು.
-ಎಸ್.ಕೆ.ಕವಡೆಲೆ, ಪಿಡಿಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.