ಡಂಬಳದಲ್ಲಿ ತೋಟಗಾರಿಕೆ ಮಹಾವಿದ್ಯಾಲಯ ಸ್ಥಾಪನೆಗಾಗಿ ಶಾಸಕ ಜಿ.ಎಸ್.ಪಾಟೀಲ ಹಾಗೂ ತೋಟಗಾರಿಕೆ ಮತ್ತು ಕೃಷಿ ಇಲಾಖೆಗಳ ಅಧಿಕಾರಿಗಳು ಇದೇ ವರ್ಷದ ಜನವರಿಯಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದರು
ಡಂಬಳ: ಗ್ರಾಮದಲ್ಲಿ ತೋಟಗಾರಿಕೆ ಮಹಾವಿದ್ಯಾಲಯ ಸ್ಥಾಪನೆಗೆ ಸಿಎಂ ಸಿದ್ದರಾಮಯ್ಯ ಸಕರಾತ್ಮಕವಾಗಿ ಸ್ಪಂದನೆ ನೀಡಿದ್ದು, ಈ ಭಾಗದ ಜನರ ನಿರೀಕ್ಷೆ ಮತ್ತಷ್ಟು ಗಟ್ಟಿಯಾಗಿದೆ.
ಈ ಹಿಂದೆ ಡಂಬಳ ಸುತ್ತಲಿನ ಗ್ರಾಮಗಳಾದ ಪೇಠಾಲೂರ, ತಾಮ್ರಗುಂಡಿ, ಜಂತಲಿಶಿರೂರ, ಹಿರೇವಡ್ಡಟ್ಟಿ, ಮುರಡಿ ಭಾಗದಲ್ಲಿನ ಜನರು ಮಳೆಯ ಅನಿಶ್ಚಿತತೆ ಕಾರಣ ಗುಳೆ ಹೋಗುತ್ತಿದ್ದರು. ಆದರೆ, ಶಿಂಗಟಾಲೂರ ಏತನೀರಾವರಿ ಯೋಜನೆಯಡಿ ಕೆರೆಗಳಿಗೆ ನೀರು ತುಂಬಿಸುತ್ತಿರುವುದರಿಂದ ಬತ್ತಿದ್ದ ಕೊಳವೆಬಾವಿಗಳಲ್ಲಿ ಜೀವಜಲ ಉಕ್ಕುತ್ತಿದೆ. ಅಂತರ್ಜಲ ಮಟ್ಟ ಹೆಚ್ಚಳವಾಗಿದೆ. ಗುಳೆ ಹೋಗುತ್ತಿದ್ದ ಜನರು ಸ್ಥಳೀಯವಾಗಿಯೇ ಕೃಷಿ ಕೈಗೊಂಡು, ಹೊಸ ಪ್ರಯೋಗಗಳನ್ನೂ ಮಾಡುತ್ತಿದ್ದಾರೆ.
‘ಗ್ರಾಮದ ಸಿಹಿ ಪೇರಲ ಎಲ್ಲೆಡೆ ಪ್ರಸಿದ್ಧವಾಗಿದೆ. ಈ ಭಾಗದಲ್ಲಿ ಮಳೆ ಕೈಕೊಟ್ಟರೂ, ಕೆರೆಯಲ್ಲಿ ನೀರು ಸಿಗುವುದರಿಂದ ತೋಟಗಾರಿಕೆ ಬೆಳೆ ಕ್ಷೇತ್ರ ವರ್ಷದಿಂದ ವರ್ಷಕ್ಕೆ ವಿಸ್ತರಣೆಯಾಗುತ್ತಿದೆ. ಜಂಬು ನೇರಳೆ, ಡ್ರ್ಯಾಗನ್ ಫ್ರೂಟ್, ಬಾಳೆ, ಅಡಿಕೆ, ದಾಳಿಂಬೆ, ಪಪ್ಪಾಯಿ, ಸಪೋಟ, ನುಗ್ಗೆಕಾಯಿ, ಮಾವು, ಟೊಮೊಟೊ ಸೇರಿದಂತೆ ವಿವಿಧ ಬಗೆಯ ತರಕಾರಿ, ಹೂವು, ಹಣ್ಣು ಸೇರಿದಂತೆ ಸಾಂಪ್ರಾದಾಯಿಕ ಹಾಗೂ ಹೊಸ ಬೆಳೆಗಳನ್ನು ಬೆಳೆಯಲು ರೈತರು ಹೆಚ್ಚು ಉತ್ಸಾಹ ತೋರುತ್ತಿದ್ದಾರೆ. ಕೃಷಿಯಲ್ಲಿ ಹೊಸ ತಾಂತ್ರಿಕತೆಯನ್ನು ಅಳವಡಿಸಿ ಕೊಳ್ಳುತ್ತಿದ್ದಾರೆ’ ಎನ್ನುತ್ತಾರೆ ರೈತ ಮಲ್ಲಪ್ಪ ಗಡಗಿ.
‘ಈ ಭಾಗದಲ್ಲಿ ಕಪ್ಪು ಹಾಗೂ ಕೆಂಪು ಮಿಶ್ರಿತ ಮಸಾರಿ ಮಣ್ಣು ಹೆಚ್ಚಿನ ಪ್ರಮಾಣದಲ್ಲಿದೆ. ನೀರಿನ ಲಭ್ಯತೆ ಸಮರ್ಪಕವಾಗಿದೆ. ನರೇಗಾ ಯೋಜನೆಯ ಸಹಾಯಧನ ಬಳಸಿಕೊಂಡು ಹೆಚ್ಚಿನ ರೈತರು ತೋಟಗಾರಿಕೆ ಬೆಳೆಯುತ್ತ ಆಸಕ್ತಿ ವಹಿಸುತ್ತಿದ್ದಾರೆ’ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿ ಮಹಮದ್ ರಫೀ ಎಂ. ತಾಂಬೋಟಿ.
‘ಗ್ರಾಮದಲ್ಲಿ ತೋಟಗಾರಿಕೆ ಮಹಾವಿದ್ಯಾಲಯ ಸ್ಥಾಪನೆ ಆಗಬೇಕಾದರೆ ಅಂದಾಜು 60ರಿಂದ 80 ಎಕರೆ ಭೂಮಿಯ ಅವಶ್ಯಕತೆ ಇದೆ. ಕಳೆದ ಜನವರಿಯಲ್ಲಿ ರೋಣ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ ಸೇರಿದಂತೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ತಂಡ ಡಂಬಳ ಗ್ರಾಮಕ್ಕೆ ಬಂದು, ವಿವಿಧ ರೈತರ ಜಮೀನುಗಳಿಗೆ ಭೇಟಿ ನೀಡಿದ್ದರು. ವಿವಿಧ ಬೆಳೆ ಹಾಗೂ ಈ ಭಾಗದ ಮಣ್ಣಿನ ಫಲವತ್ತತೆಯ ಗುಣಮಟ್ಟವನ್ನು ಪರಿಶೀಲಿಸಿದ್ದಾರೆ’ ಎಂದು ರೈತ ಮರಿಯಪ್ಪ ಸಿದ್ದಣ್ಣವರ ಹೇಳಿದರು.
‘ನಮ್ಮ ಗ್ರಾಮದಲ್ಲಿ ತೋಟಗಾರಿಕೆ ಕಾಲೇಜು ಸ್ಥಾಪನೆಯಾದರೆ ತುಂಬಾ ಉಪಯೋಗವಾಗುತ್ತದೆ. ತೋಟಗಾರಿಕೆ ಮಹಾವಿದ್ಯಾಲಯ ಸ್ಥಾಪನೆ ಆದರೆ ಈ ಭಾಗದ ವಿದ್ಯಾರ್ಥಿಗಳು ಮತ್ತು ಕೃಷಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ’ ಎನ್ನುತ್ತಾರೆ ಅವರು.
‘ತೋಟಗಾರಿಕೆ ಮಹಾವಿದ್ಯಾಲಯ ಸ್ಥಾಪನೆಯಾಗಬೇಕೆನ್ನುವ ಕನಸನ್ನು ಲಿಂ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಹೊಂದಿದ್ದರು. ಅವರ ಕನಸು ನನಸಾಗುವ ಲಕ್ಷಣಗಳಿವೆ’ ಎನ್ನುತ್ತಾರೆ ರೋಣ ಕ್ಷೇತ್ರದ ಶಾಸಕ ಜಿ.ಎಸ್.ಪಾಟೀಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಈ ಸಲದ ಬಜೆಟ್‍ನಲ್ಲಿ, ಡಂಬಳದಲ್ಲಿ ತೋಟಗಾರಿಕೆ ಕಾಲೇಜು ಸ್ಥಾಪನೆಗೆ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಈ ಮೂಲಕ ನಮ್ಮ ಬೇಡಿಕೆಗೆ ಸ್ಪಂದಿಸಿದ್ದಾರೆ. ರೈತರು, ಸಾರ್ವಜನಿಕರು ತೋಟಗಾರಿಕೆ ಕಾಲೇಜು ಸ್ಥಾಪನೆಗೆ ಎಲ್ಲಾ ರೀತಿಯ ಸಹಾಯ ಸಹಕಾರ ನೀಡುವ ಭರವಸೆ ನೀಡಿದ್ದಾರೆ. ನಮ್ಮ ಸರ್ಕಾರ ರೈತರೊಂದಿಗೆ ಸದಾ ಇರುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.