ADVERTISEMENT

ಕಾಮಗಾರಿ ಅಪೂರ್ಣ: ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 1 ಜೂನ್ 2025, 14:51 IST
Last Updated 1 ಜೂನ್ 2025, 14:51 IST
ಕೆರೂರ ಸ್ಥಳಿಯ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ನಿರ್ಮಲಾ ಮದಿ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.
ಕೆರೂರ ಸ್ಥಳಿಯ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ನಿರ್ಮಲಾ ಮದಿ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.   

ಕೆರೂರ: ವಾರ್ಡ್‌ ನಂ. 15 ಮತ್ತು 16 ರಲ್ಲಿ 5 ವರ್ಷಗಳಿಂದ ಕಾಮಗಾರಿ ಅಪೂರ್ಣ ಮಾಡಿ ಹಾಗೆಯೇ ಬಿಟ್ಟಿದ್ದಾರೆ. ಸಾಕಷ್ಟು ಬಾರಿ ಪಟ್ಟಣ ಪಂಚಾಯಿತಿ ಸದಸ್ಯರು ಹೇಳಿದರೂ ಕಾಮಗಾರಿಯನ್ನು ಪೂರ್ಣಗಳಿಸದೇ ಇರುವುದರಿಂದ ಗುತ್ತಿಗೆದಾರರಾದ ಹನಮಂತ ಮತ್ತಿಕಟ್ಟಿ ಹಾಗೂ ಮಾದೇವಪ್ಪ ಮತ್ತಿಕಟ್ಟಿ ಅವರ ವಿರುದ್ಧ ಸೂಕ್ತ ಕ್ರಮ ಗೈಗೊಳ್ಳಬೇಕು ಎಂದು ಹಲವು ಸದಸ್ಯರು ಒತ್ತಾಯಿಸಿದರು.

ಸ್ಥಳೀಯ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಶನಿವಾರ ನಡೆದ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.     

ಟೆಂಡರ್‌ ಕರೆದ ಕಾಮಗಾರಿಗಳನ್ನು ಬೇಗನೆ ಪ್ರಾರಂಭಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಯಿತು. 

ADVERTISEMENT

ಮಳೆಗಾಲ ಪ್ರಾರಂಭವಾಗಿರುವುದರಿಂದ ಕೇಲವೊಂದು ವಾರ್ಡ್‌ಗಳಲ್ಲಿ ಮಳೆ ನೀರು ನಿಂತು ರಸ್ತೆಗಳು ಕೆಸರಾಗಿ ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಸುಗುಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕು ಎಂದು ಪಟ್ಟಣ ಪಂಚಾಯಿತಿ ಸದಸ್ಯ ಶಂಕರ ಕೆಂದೂಳಿ ಆಗ್ರಹಿಸಿದರು.

ಪಟ್ಟಣದಲ್ಲಿರುವ ಸಾರ್ವಜನಿಕ ಶೌಚಾಲಯಗಳು ನಿರ್ವಹಣೆ ಇಲ್ಲದೇ ಪಾಳು ಬಿಳುತ್ತಿವೆ. ಅವುಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. 

ಹಿಂದಿನ ಸಭೆಯಲ್ಲಿ ಟೆಂಡರ್‌ ಕರೆದ ಅಭಿವೃದ್ಧಿ ಕಾಮಗಾರಿಗಳಿಗೆ ಎಲ್ಲ ಸದಸ್ಯರಿಂದ ಒಪ್ಪಿಗೆ ಪಡೆಯಲಾಯಿತು. ಬೀದಿ ದೀಪಗಳ ತೊಂದರೆಯಾಗದಂತೆ ನೋಡಿಕೊಳ್ಳಿ. ಉದ್ಯಾನಗಳಲ್ಲಿ ವೃದ್ಧರಿಗೆ ಆಸನದ ವ್ಯವಸ್ಥೆ ಕಲ್ಪಿಸುವಂತೆ ಸದಸ್ಯರು ಒತ್ತಾಯಿಸಿದರು. 2025-26ನೇ ಸಾಲಿನ 15ನೇ ಹಣಕಾಸು ಹಾಗೂ ಎಸ್‌ಎಫ್‌ಸಿ ಯೋಜನೆಯ ಅಡಿ  ಹಂಚಿಕೆಯಾದ ಅನುದಾನದ ಕ್ರಿಯಾ ಯೋಜನೆಗೆ ಸಭೆಯಲ್ಲಿ ಅನುಮತಿ ಪಡೆಯಲಾಯಿತು. 

ಅಧ್ಯಕ್ಷೆ ನಿರ್ಮಲಾ ಮದಿ ಅವರ ಅಧ್ಯಕ್ಷತೆ ವಹಿಸಿದ್ದರು.

ಪಟ್ಟಣ ಪಂಚಾಯಿತಿ ಎಸ್‌ಡಿಎಯಾಗಿ ಕಾರ್ಯ ನಿರ್ವಹಿಸಿ ವಯೋ ನಿವೃತ್ತಿ ಹೊಂದಿದ ಸಿಬ್ಬಂದಿ ಗಣಿಸಾಬ ನದಾಫ್ ಅವರಿಗೆ ಪಟ್ಟಣ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಸಿಬ್ಬಂದಿ ಸನ್ಮಾನಿಸಿದರು. ಉಪಾಧ್ಯಕ್ಷ ಮೋದಿನಸಾಬ ಚಿಕ್ಕೂರ, ಸದಸ್ಯರು, ಎಂಜಿನಿಯರ್‌ ಎಂ.ಐ. ಹೊಸಮನಿ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.