ADVERTISEMENT

ಲಕ್ಕುಂಡಿ ಉತ್ಸವಕ್ಕೂ ಮುನ್ನ ಸೌಲಭ್ಯ ಕಲ್ಪಿಸಲು ಕ್ರಮ

ಫೆ.11.12ರಂದು ಐತಿಹಾಸಿಕ ಲಕ್ಕುಂಡಿ ಉತ್ಸವ ಆಚರಣೆಗೆ ನಿರ್ಧಾರ, ಸಚಿವ ಸಿ.ಸಿ.ಪಾಟೀಲ ಮಾಹಿತಿ

​ಪ್ರಜಾವಾಣಿ ವಾರ್ತೆ
Published 10 ಜನವರಿ 2023, 6:22 IST
Last Updated 10 ಜನವರಿ 2023, 6:22 IST
ಲಕ್ಕುಂಡಿ ಗ್ರಾಮದ ಅನ್ನದಾನೇಶ್ವರ ಸಮುದಾಯ ಭಾವನದಲ್ಲಿ ಸೋಮವಾರ ನಡೆದ ಲಕ್ಕುಂಡಿ ಉತ್ಸವ ಪೂರ್ವಭಾವಿ ಸಭೆಯಲ್ಲಿ ಸಚಿವ ಸಿ.ಸಿ.ಪಾಟೀಲ ಮಾತನಾಡಿದರು
ಲಕ್ಕುಂಡಿ ಗ್ರಾಮದ ಅನ್ನದಾನೇಶ್ವರ ಸಮುದಾಯ ಭಾವನದಲ್ಲಿ ಸೋಮವಾರ ನಡೆದ ಲಕ್ಕುಂಡಿ ಉತ್ಸವ ಪೂರ್ವಭಾವಿ ಸಭೆಯಲ್ಲಿ ಸಚಿವ ಸಿ.ಸಿ.ಪಾಟೀಲ ಮಾತನಾಡಿದರು   

ಗದಗ: ಐತಿಹಾಸಿಕ ಲಕ್ಕುಂಡಿ ಉತ್ಸವಕ್ಕೂ ಮುನ್ನ ಗ್ರಾಮಕ್ಕೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಊರಿನ ಗ್ರಾಮಸ್ಥರು ಆಗ್ರಹಿಸಿದರು.

ಲಕ್ಕುಂಡಿ ಗ್ರಾಮದ ಅನ್ನದಾನೇಶ್ವರ ಸಮುದಾಯ ಭಾವನದಲ್ಲಿ ಸೋಮವಾರ ನಡೆದ ‘ಲಕ್ಕುಂಡಿ ಉತ್ಸವ ಪೂರ್ವಭಾವಿ ಸಭೆ’ಯಲ್ಲಿ ಉತ್ಸವಕ್ಕೆ ಸಂಬಂಧಪಟ್ಟಂತೆ ಗ್ರಾಮಸ್ಥರು ತಮ್ಮ ಅಭಿಪ್ರಾಯಗಳನ್ನು ದಾಖಲಿಸಿದರು.

ಕೋವಿಡ್‌–19 ಕಾರಣದಿಂದಾಗಿ ಹಲವು ವರ್ಷಗಳಿಂದ ಲಕ್ಕುಂಡಿ ಉತ್ಸವ ನಡೆದಿಲ್ಲ. ಹಾಗಾಗಿ, ಈ ಬಾರಿ ಅದ್ಧೂರಿ ಆಚರಣೆಗೆ ಕ್ರಮವಹಿಸಬೇಕು. ಉತ್ಸವದ ಅಂಗವಾಗಿ ಊರಿನ ಎರಡು ಕಡೆಗಳಲ್ಲಿ ಕಮಾನು ನಿರ್ಮಾಣ ಮಾಡಬೇಕು. ಉತ್ಸವಕ್ಕೆ ಬರುವ ಪ್ರವಾಸಿಗರಿಗೆ ಗ್ರಾಮದ ಇತಿಹಾಸ ತಿಳಿಸಿಕೊಡಲು ನೆರವಾಗುವಂತೆ ಗೈಡ್‌ಗಳನ್ನು ನೇಮಿಸಬೇಕು. ಗ್ರಾಮದ ಇತಿಹಾಸ ಪರಂಪರೆ ಸಾರುವ ‘ವೀರಬಲ್ಲಾಳ’ ನಾಟಕ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.

ADVERTISEMENT

‘ಗ್ರಾಮವನ್ನು ಸುಂದರವಾಗಿಟ್ಟುಕೊಳ್ಳಲು ಪ್ರತಿಯೊಬ್ಬರೂ ಸಹಕರಿಸಬೇಕು. ಮನೆ ಮುಂದಿರುವ ತಿಪ್ಪೆಗಳನ್ನು ಸ್ವಯಂಪ್ರೇರಿತರಾಗಿ ಸ್ವಚ್ಛಗೊಳಿಸಬೇಕು. ಪ್ರವಾಸಿಗರಿಗೆ ಶುದ್ಧಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕು. ಶೌಚಾಲಯಗಳ ನಿರ್ಮಾಣ ಆಗಬೇಕು. ಕಲಾವಿದರಿಗೆ ವಸತಿ ಸೌಲಭ್ಯ ಕಲ್ಪಿಸುವ ಶಾಲೆಯಲ್ಲಿನ ಕಾಂಪೌಂಡ್‌ ಕುಸಿದು ಬಿದ್ದಿದ್ದು, ಅದರ ದುರಸ್ತಿಗೆ ಕ್ರಮವಹಿಸಬೇಕು. ಸಮರ್ಪಕ ವಿದ್ಯುತ್‌ ಸರಬರಾಜಿಗೆ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.

‘ಜೆಜೆಎಂ ಕಾಮಗಾರಿ ಸಂಬಂಧ ರಸ್ತೆಗಳನ್ನು ಅಗೆದು ಏಳೆಂಟು ತಿಂಗಳಾದರೂ ರಸ್ತೆ ದುರಸ್ತಿಗೆ ಕ್ರಮವಹಿಸಿಲ್ಲ. ಗ್ರಾಮದ ಕೆಲವೊಂದು ಭಾಗಕ್ಕೆ ಇನ್ನೂ ಪೈಪ್‌ ಅಳವಡಿಸಿಲ್ಲ. ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಜನರು ಕಷ್ಟ ಅನುಭವಿಸುವಂತಾಗಿದೆ’ ಎಂದು ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

‘ಗ್ರಾಮದಲ್ಲಿ ನಡೆಯುವ ಲಕ್ಕುಂಡಿ ಉತ್ಸವಕ್ಕೆ ಹಂಸಲೇಖ ಸೇರಿದಂತೆ ರಾಜ್ಯ ಮಟ್ಟದ ಖ್ಯಾತ ಕಲಾವಿದರನ್ನು ಕರೆಸಬೇಕು. ಬಿ.ಎಸ್‌.ಯಡಿಯೂರಪ್ಪ, ಬಸನಗೌಡ ಪಾಟೀಲ ಯತ್ನಾಳ ಅವರನ್ನು ಉದ್ಘಾಟನೆಗೆ ಆಹ್ವಾನಿಸಬೇಕು. ಉತ್ಸವದಲ್ಲಿ ಕ್ರೀಡೆ, ಕೃಷಿ ಮೇಳ ಏರ್ಪಡಿಸಬೇಕು ಎಂದು ಒತ್ತಾಯಿಸಿದರು.

ಗ್ರಾಮಸ್ಥರ ಸಲಹೆ, ಬೇಡಿಕೆಗಳನ್ನು ಆಲಿಸಿದ ಬಳಿಕ ಸಚಿವ ಸಿ.ಸಿ.ಪಾಟೀಲ ಮಾತನಾಡಿ, ‘ಐತಿಹಾಸಿಕ ಲಕ್ಕುಂಡಿ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಕ್ರಮವಹಿಸಲಾಗುವುದು. ಉತ್ಸವಕ್ಕೆ ಯಾರೆಲ್ಲಾ ಕಲಾವಿದರನ್ನು ಆಹ್ವಾನಿಸಬೇಕು ಎಂಬುದರ ಕುರಿತು ಶೀಘ್ರವೇ ತೀರ್ಮಾನ ಮಾಡಲಾಗುವುದು’ ಎಂದು ಪ್ರತಿಕ್ರಿಯಿಸಿದರು.

‘ಗ್ರಾಮಸ್ಥರ ಬೇಡಿಕೆಯಂತೆ ಈ ಬಾರಿ ಒಂದು ಕಡೆ ದಾನಚಿಂತಾಮಣಿ ಅತ್ತಿಮಬ್ಬೆ ಹೆಸರಿನಲ್ಲಿ ಕಮಾನು ನಿರ್ಮಾಣ ಮಾಡಿಸಲಾಗುವುದು. ರಾಜಬೀದಿ ದುರಸ್ತಿಗೆ ಕ್ರಮವಹಿಸಲಾಗುವುದು. ಶಾಲಾ ತಡೆಗೋಡೆ ನಿರ್ಮಾಣ, ಶೌಚಾಲಯ ಹಾಗೂ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲು ಸೂಕ್ತ ಕ್ರಮವಹಿಸಲಾಗುವುದು’ ಎಂದು ತಿಳಿಸಿದರು.

ಜೆಜೆಎಂ ಕಾಮಗಾರಿ ಸಂಬಂಧ ಅಗೆದಿರುವ ರಸ್ತೆಗಳನ್ನು ಸಂಬಂಧಪಟ್ಟ ಗುತ್ತಿಗೆದಾರರೇ ದುರಸ್ತಿ ಮಾಡಬೇಕು. ಹಾಗೆಯೇ, ಲಕ್ಕುಂಡಿ ಗ್ರಾಮದಲ್ಲಿನ ಕುಡಿಯುವ ನೀರಿನ ಸಮಸ್ಯೆಯನ್ನು ಮುಂದಿನ 15 ದಿನಗಳ ಒಳಗೆ ಪೂರ್ಣಗೊಳಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಕಳೆದ ಬಾರಿ ನಡೆದ ಲಕ್ಕುಂಡಿ ಉತ್ಸವದಲ್ಲಿ ಆದ ಲೋಪದೋಷಗಳನ್ನು ಸರಿಪಡಿಸಿಕೊಂಡು, ಹಂಪಿ, ಚಿಕ್ಕಬಳ್ಳಾಪುರದಲ್ಲಿ ನಡೆಯುತ್ತಿರುವ ಉತ್ಸವದಂತೆ ಲಕ್ಕುಂಡಿ ಉತ್ಸವವನ್ನೂ ಅರ್ಥಪೂರ್ಣವಾಗಿ ಆಚರಿಸಲು ಗ್ರಾಮಸ್ಥರು ಸಹಕಾರ ನೀಡಬೇಕು. ಸ್ಥಳೀಯ ಕಲಾವಿದರಿಗೂ ಉತ್ಸವದಲ್ಲಿ ಕಾರ್ಯಕ್ರಮ ನೀಡಲು ಅವಕಾಶ ಮಾಡಿಕೊಡಲಾಗುವುದು’ ಎಂದು ತಿಳಿಸಿದರು.

ಲಕ್ಕುಂಡಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಲಲಿತಾ ಗದಗಿನ, ಉಪಾಧ್ಯಕ್ಷ ಸಿದ್ದು ಮುಳಗುಂದ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್‌., ಸಿಇಒ ಡಾ.ಸುಶೀಲಾ ಬಿ., ಎಸ್‌ಪಿ ಬಿ.ಎಸ್.ನೇಮಗೌಡರ, ಡಿಎಫ್‌ಒ ದೀಪಿಕಾ ಬಾಜಪೇಯಿ, ಎಡಿಸಿ ಮಾರುತಿ ಎಂ.ಪಿ, ಎಸಿ ಅನ್ನಪೂರ್ಣ ಮುದಕಮ್ಮನವರ ಇದ್ದರು.

****

ಲಕ್ಕುಂಡಿ ಉತ್ಸವವನ್ನು ಅಚ್ಚುಕಟ್ಟಾಗಿ ಆಚರಿಸಲು ಊರಿನ ಹಿರಿಯರನ್ನು ಒಳಗೊಂಡ ಸಮಿತಿಗಳನ್ನು ರಚಿಸಲಾಗುವುದು. ಉತ್ಸವದ ಯಶಸ್ಸಿಗೆ ಊರಿನವರ ಸಹಕಾರ ತುಂಬಾ ಮುಖ್ಯ.
- ಸಿ.ಸಿ.ಪಾಟೀಲ, ಸಚಿವ

ಲಕ್ಕುಂಡಿ ಪ್ರಾಧಿಕಾರದ ಅಸ್ತಿತ್ವ ಮತ್ತು ಪ್ರಾಧಿಕಾರದಲ್ಲಿ ಲಕ್ಕುಂಡಿ ಗ್ರಾಮಸ್ಥರ ಪಾತ್ರ ಏನು ಎಂಬುದನ್ನು ತಿಳಿಸಬೇಕು. ಅತ್ತಿಮಬ್ಬೆ ಪ್ರಶಸ್ತಿಯನ್ನು ಲಕ್ಕುಂಡಿ ಉತ್ಸವದಲ್ಲೇ ಪ್ರದಾನ ಮಾಡಬೇಕು.

- ಜೋಶಿ, ಲಕ್ಕುಂಡಿ ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.