ADVERTISEMENT

ನರೇಗಾ: ಕೆಲಸಕ್ಕೆ ಹೆಚ್ಚಿದ ಬೇಡಿಕೆ

ನಾಗರಾಜ ಎಸ್‌.ಹಣಗಿ
Published 24 ನವೆಂಬರ್ 2022, 2:58 IST
Last Updated 24 ನವೆಂಬರ್ 2022, 2:58 IST
ನರೇಗಾ ಯೋಜನೆಯಡಿ ಲಕ್ಷ್ಮೇಶ್ವರ ಸಮೀಪದ ಬಟ್ಟೂರು ಗ್ರಾಮದಲ್ಲಿ ಹಳ್ಳದ ಹೂಳು ತೆಗೆಯುತ್ತಿರುವ ನರೇಗಾ ಕೂಲಿಕಾರರು
ನರೇಗಾ ಯೋಜನೆಯಡಿ ಲಕ್ಷ್ಮೇಶ್ವರ ಸಮೀಪದ ಬಟ್ಟೂರು ಗ್ರಾಮದಲ್ಲಿ ಹಳ್ಳದ ಹೂಳು ತೆಗೆಯುತ್ತಿರುವ ನರೇಗಾ ಕೂಲಿಕಾರರು   

ಲಕ್ಷ್ಮೇಶ್ವರ: ಅತೀವೃಷ್ಟಿಯಿಂದಾಗಿ ಈ ಬಾರಿ ಮುಂಗಾರು ಹಂಗಾಮು ಕೈಕೊಟ್ಟಿದ್ದು ಗ್ರಾಮೀಣ ಭಾಗದ ಜನತೆಗೆ ಕೆಲಸ ಇಲ್ಲದಂತಾಗಿದೆ. ಕೆಲಸಕ್ಕಾಗಿ ಗ್ರಾಮಸ್ಥರು ನರೇಗಾ ಯೋಜನೆ ಮೊರೆ ಹೋಗಿದ್ದಾರೆ. ಈಗಾಗಲೇ ಕೃಷಿ ಕೆಲಸಗಳು ಮುಗಿಯುತ್ತ ಬಂದಿದ್ದು ಗ್ರಾಮೀಣ ಭಾಗದ ಜನರು ಕೆಲಸಕ್ಕಾಗಿ ಕಾಯುತ್ತಿದ್ದಾರೆ.

ಈ ನಿಟ್ಟಿನಲ್ಲಿ ತಾಲ್ಲೂಕಿನಲ್ಲಿ ಉದ್ಯೋಗ ಖಾತ್ರಿ ಯೋಜನೆಗೆ ಸಿದ್ಧತೆ ನಡೆದಿದ್ದು ಈಗಾಗಲೇ ಸಮೀಪದ ಬಟ್ಟೂರು ಗ್ರಾಮ ಪಂಚಾಯ್ತಿಯಲ್ಲಿ ಸದ್ಯ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮದಲ್ಲಿ ಕಳೆದ ನಾಲ್ಕು ದಿನಗಳಿಂದ ನರೇಗಾ ಕೂಲಿಕಾರರು ಗ್ರಾಮದ ಹಳ್ಳದ ಹೂಳನ್ನು ತೆಗೆಯುತ್ತಿದ್ದಾರೆ. ಪ್ರತಿದಿನ 400-500 ಜನ ಕೂಲಿಕಾರರು ಕೆಲಸ ಮಾಡುತ್ತಿದ್ದಾರೆ. ಕೆಲಸದ ಸಮಸ್ಯೆ ಇರುವುದರಿಂದ ನರೇಗಾ ಕೆಲಸಕ್ಕಾಗಿ ಈ ವರ್ಷ ಹೆಚ್ಚಿನ ಬೇಡಿಕೆ ಬರುವ ಸಂಭವ ಇದೆ.

ಈ ಕುರಿತು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಎಂ.ವಿ. ಬಡಿಗೇರ ಮಾಹಿತಿ ನೀಡಿ ‘ಗ್ರಾಮೀಣ ಭಾಗದ ಜನತೆಗೆ ಕೆಲಸ ಕೊಡುವ ನಿಟ್ಟಿನಲ್ಲಿ ಈಗಾಗಲೇ ಕೆಲ ಗ್ರಾಮ ಪಂಚಾಯ್ತಿಗಳಲ್ಲಿ ನರೇಗಾ ಯೋಜನೆಯಡಿ ಕೆಲಸ ನೀಡಲಾಗಿದೆ. ಬಟ್ಟೂರು, ಪುಟಗಾಂವ್‍ಬಡ್ನಿ, ಆದರಹಳ್ಳಿ, ಮುನಿಯನ ತಾಂಡಾಗಳಲ್ಲಿ ಕೆಲಸ ಮಾಡಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕೆಲಸ ನೀಡಲಾಗುವುದು’ ಎಂದರು.

ADVERTISEMENT

‘ಖಾತ್ರಿ ಯೋಜನೆಯಡಿ 100 ದಿನ ಕೆಲಸ ಪೂರೈಸಿದವರಿಗಾಗಿ ಅವರ ಆರ್ಥಿಕ ಪುನಶ್ಚೇತನಕ್ಕಾಗಿ ಉನ್ನತಿ ಯೋಜನೆಯಡಿ ತರಬೇತಿ ನೀಡಲಾಗುವುದು. ಈ ರೀತಿಯ ತರಬೇತಿ ಸದ್ಯ ಗೋವನಾಳ ಗ್ರಾಮದಲ್ಲಿ ನಡೆಯುತ್ತಿದ್ದು ಇಲ್ಲಿ 24 ಜನ ತರಬೇತಿ ಪಡೆಯುತ್ತಿದ್ದಾರೆ. ಹೈನುಗಾರಿಕೆ ಸೇರಿದಂತೆ ಮತ್ತಿತರ ಯೋಜನೆಗಳ ಕುರಿತು ತರಬೇತಿ ನೀಡಲಾಗುವುದು. ತರಬೇತಿ ನೀಡುವುದರ ಮೂಲಕ ಅವರನ್ನು ಕುಶಲ ಕಾರ್ಮಿಕರನ್ನಾಗಿ ಮಾಡಲಾಗುವುದು’ ಎಂದರು.

‘ಈ ವರ್ಷ ಕೃಷಿ ಕೆಲಸಗಳು ಕಡಿಮೆ ಇರುವುದರಿಂದ ಜನರ ಗುಳೆ ತಪ್ಪಿಸುವ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಕೆಲಸ ಕೊಡಲು ಅಧಿಕಾರಿಗಳು ಮುಂದಾಗಬೇಕು’ ಎಂದು ಶಿಗ್ಲಿ ಗ್ರಾಮದ ನಿವಾಸಿ ಸೋಮಣ್ಣ ಡಾಣಗಲ್ಲ ಆಗ್ರಹಿಸಿದರು.

‘ನಾಲ್ಕು ದಿನಗಳಿಂದ ನರೇಗಾ ಯೋಜನೆಯಡಿ ಗ್ರಾಮದ ಹಳ್ಳದ ಹೂಳನ್ನು ತೆಗೆಸುವ ಕೆಲಸ ಮಾಡಿಸಿದ್ದು ದಿನಕ್ಕೆ 500 ಜನರು ಕೆಲಸ ಮಾಡಿದ್ದಾರೆ. ಆದರೆ ಹಳ್ಳದಲ್ಲಿ ನೀರು ಇರುವುದರಿಂದ ಕೆಲಸ ಕಷ್ಟವಾಗುತ್ತಿದೆ. ಮುಂದಿನ ದಿನಗಳಲ್ಲಿ ಬೇರೆ ಕೆಲಸ ಕೊಡಲು ಯೋಜನೆ ರೂಪಿಸಲಾಗಿದೆ’ಜಗದೀಶಗೌಡ ಪಾಟೀಲ, ಅಧ್ಯಕ್ಷ ಬಟ್ಟೂರು ಗ್ರಾಮ ಪಂಚಾಯ್ತಿ

‘ಸಮೀಪದ ಆದರಹಳ್ಳಿ ಗ್ರಾಮದಲ್ಲಿ ನರೇಗಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಆದರೆ ಅಲ್ಲಿ ಆಧಾರ ಕಾರ್ಡ್ ಅಪ್ಡೇಟ್ ಮಾಡಬೇಕಾಗಿದೆ. ಹೀಗಾಗಿ ಸದ್ಯ ಕೆಲಸ ಸ್ಥಗಿತಗೊಳಿಸಲಾಗಿದೆ’ಗೌರಮ್ಮ ಲಮಾಣಿ, ತಾಂಡಾ ರೋಜ್‍ಗಾರ್ ಮಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.