ADVERTISEMENT

ಗದಗ: ಸಿ.ಸಿ ರಸ್ತೆ ಜರೂರಾಗಿ ಆಗಬೇಕ್ರೀ...

24X7 ಪ್ರತಿದಿನ ಬೆಳಿಗ್ಗೆ ನೀರು ಬಿಡುವಂತೆ ಬಡಾವಣೆ ನಿವಾಸಿಗಳ ಆಗ್ರಹ

ಸತೀಶ ಬೆಳ್ಳಕ್ಕಿ
Published 17 ಫೆಬ್ರುವರಿ 2021, 3:18 IST
Last Updated 17 ಫೆಬ್ರುವರಿ 2021, 3:18 IST
ಜಗನ್ನಾಥ್‌
ಜಗನ್ನಾಥ್‌   

ಗದಗ: ಪಕ್ಕಾ ‘ರೆಸಿಡೆನ್ಶಿಯಲ್‌ ಏರಿಯಾ’ ಎಂಬ ಖ್ಯಾತಿ ಪಡೆರುವ ವಿವೇಕಾನಂದ ನಗರದಲ್ಲಿ ರಸ್ತೆ ಸಂಚಾರ ದುಸ್ತರವಾಗಿದೆ. ಮುಖ್ಯರಸ್ತೆಯಿಂದ ತಿರುವು ರಸ್ತೆಗಳಿಗೆ ಹೊರಳಿದರೆ ಹಳ್ಳ ದಿಣ್ಣೆ, ಗುಂಡಿಗಳ ದರ್ಶನ ಆಗುತ್ತದೆ. ದ್ವಿಚಕ್ರ ವಾಹನ ಸವಾರರು ಮಳೆಗಾಲದಲ್ಲಿ ಈ ರಸ್ತೆಗಳಲ್ಲಿ ಅಡ್ಡಾವುದು ಕಷ್ಟಕರ. ಮಳೆಗಾಲದಲ್ಲಿ ಜಾರುವ ಸಮಸ್ಯೆಯಾದರೆ, ಉಳಿದ ಋತುಗಳಲ್ಲಿ ನಿತ್ಯವೂ ದೂಳಿನ ಮಜ್ಜನ.

ನಗರಸಭೆ ವಾರ್ಡ್‌ ಮೀಸಲಾತಿ ಹಂಚಿಕೆ ಸರಿಯಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿ ಈ ಹಿಂದೆ ನಗರಸಭಾ ಸದಸ್ಯರೊಬ್ಬರು ಕೋರ್ಟ್‌ ಮೆಟ್ಟಿಲೇರಿದ್ದರು. ಇದರಿಂದಾಗಿ ಅವಧಿ ಮುಗಿದು ವರ್ಷಗಳು ಕಳೆದರೂ ನಗರಸಭೆಗೆ ಚುನಾವಣೆ ನಡೆದಿಲ್ಲ. ಈಗ ಹೊಸದಾಗಿ ಮೀಸಲಾತಿ ಪಟ್ಟಿ ಪ್ರಕಟ ಆಗಿದ್ದು, ಚುನಾವಣೆ ನಡೆಯುವ ದಿನಾಂಕ ಇನ್ನೂ ನಿಗದಿಯಾಗಿಲ್ಲ. ನಗರಸಭೆಗೆ ಜನಪ್ರತಿನಿಧಿಗಳು ಇಲ್ಲವಾದ ಕಾರಣ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ ಎಂದು ಬಡಾವಣೆ ನಿವಾಸಿಗಳು ಅಲವತ್ತುಕೊಂಡಿದ್ದಾರೆ.

‘ವಿವೇಕಾನಂದ ಬಡಾವಣೆ ಅಭಿವೃದ್ಧಿಗೊಂಡು ಹಲವು ದಶಕಗಳು ಕಳೆದರೂ ಸಿಸಿ ರಸ್ತೆಗಳು ಆಗಿಲ್ಲ. ಡಾಂಬರು ರಸ್ತೆಗಳು ಕಿತ್ತುಹೋಗಿದ್ದು, ದುರಸ್ತಿ ಕಾರ್ಯ ನಡೆದಿಲ್ಲ. ಗಾಳಿ ಹೆಚ್ಚಿರುವ ಸಂದರ್ಭದಲ್ಲಿ ಮಣ್ಣಿನ ಕಣಗಳು ಕಣ್ಣು ಸೇರುತ್ತವೆ. 24X7 ನೀರಿನ ವ್ಯವಸ್ಥೆ ಇದೆಯಾದರೂ ಪ್ರತಿದಿನ ರಾತ್ರಿ 1ಗಂಟೆಗೆ ನೀರು ಬಿಡುತ್ತಾರೆ. ಇದರಿಂದ ಕೆಲವರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಬೆಳಿಗ್ಗೆ ಸಮಯದಲ್ಲಿ ನೀರು ಬಿಟ್ಟರೆ ಅನುಕೂಲ ಆಗುತ್ತದೆ’ ಎನ್ನುತ್ತಾರೆ ವಿವೇಕಾನಂದ ನಗರ ನಿವಾಸಿ ರಾಜೇಶ್‌ ಕಣ್ಣೂರು.

ADVERTISEMENT

ಕಸ ಸಂಗ್ರಹ ವಾಹನ ಪ್ರತಿನಿತ್ಯ ಬರುತ್ತದೆಯಾದರೂ ಇಲ್ಲಿನ ಕೆಲವು ನಿವಾಸಿಗಳು ಮನೆಯ ಕಸವನ್ನು ರಸ್ತೆಬದಿ, ಖಾಲಿ ಸೈಟ್‌ಗಳಿಗೆ ತಂದು ಎಸೆಯುವ ಚಾಳಿ ಬಿಟ್ಟಿಲ್ಲ. ಕೆಲವೊಂದು ಸ್ಥಳಗಳಲ್ಲಿ ಕೊಳೆತು ನಾರುತ್ತಿರುವ ಕಸದಿಂದಾಗಿ ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಇದೆ.

‘ಮನೆ ಮುಂದಿರುವ ಚರಂಡಿಯಲ್ಲಿನ ನೀರು ಅಲ್ಲೇ ಕೊಳೆಯುತ್ತದೆ. ಇದರಿಂದಾಗಿ ಸೊಳ್ಳೆಗಳ ಕಾಟ ವಿಪರೀತವಾಗಿದೆ. ಹಂದಿಗಳ ಹಾವಳಿಯೂ ಹೆಚ್ಚಾಗಿದೆ. ಈಗ ಯುಜಿಡಿ ಸಂಪರ್ಕ ವ್ಯವಸ್ಥೆ ಲಭ್ಯವಾಗಿದ್ದು, ಎಲ್ಲ ಮನೆಗಳವರೂ ಇನ್ನಷ್ಟೇ ಈ ಸೌಲಭ್ಯ ಬಳಸಿಕೊಳ್ಳಬೇಕಿದೆ. ಲಿಂಗೈಕ್ಯ ತೋಂಟದ ಶ್ರೀಗಳ ಪ್ರೋತ್ಸಾಹದಿಂದ ಹಲವು ವರ್ಷಗಳ ಹಿಂದೆ ಬಸವದಳದ ಸದಸ್ಯರು ಬಡಾವಣೆಯಲ್ಲಿ ವನಮಹೋತ್ಸವ ನಡೆಸಿದ್ದರು. ಇದರಿಂದಾಗಿ ವಿವೇಕಾನಂದ ನಗರದಲ್ಲಿ ಇಂದು ಹಸಿರು ನಳನಳಿಸುತ್ತಿದೆ’ ಎನ್ನುತ್ತಾರೆ ರಾಜೇಶ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.