ADVERTISEMENT

ಲೋಕಾಯುಕ್ತ ಬಲಪಡಿಸಲು ಒತ್ತಾಯ; ಪಾದಯಾತ್ರೆ

ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2021, 5:08 IST
Last Updated 17 ಮಾರ್ಚ್ 2021, 5:08 IST
ಮಹಾಂತೇಶ್ವರ ಬಿ. ಹೊಸಮನಿ
ಮಹಾಂತೇಶ್ವರ ಬಿ. ಹೊಸಮನಿ   

ಗದಗ: ‘ಲೋಕಾಯುಕ್ತ ಬಲಪಡಿಸುವಂತೆ ಒತ್ತಾಯಿಸಿ ಮಾರ್ಚ್‌ 19ರಂದು ಎಡಿಯೂರಿನ ಸಿದ್ಧಲಿಂಗೇಶ್ವರ ಸನ್ನಿಧಿಯಿಂದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಗೃಹಕಚೇರಿವರೆಗೆ ಪಾದಯಾತ್ರೆ ನಡೆಯಲಿದ್ದು, ಗದಗ ಜಿಲ್ಲಾ ಘಟಕದಿಂದ ಹೆಚ್ಚಿನ ಕಾರ್ಯಕರ್ತರು ಭಾಗಿಯಾಗುತ್ತಾರೆ’ ಎಂದು ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಮಹಾಂತೇಶ್ವರ ಬಿ. ಹೊಸಮನಿ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು,‘ಲೋಕಾಯುಕ್ತ ಬಲಹೀನಗೊಂಡ ನಂತರ ಭ್ರಷ್ಟಾಚಾರ ಮಿತಿ ಮೀರಿದೆ. ಲೂಟಿಯಿಂದಾಗಿ ಖಜಾನೆ ಖಾಲಿಯಾಗಿದೆ. ಈಗ ಖಜಾನೆ ತುಂಬಿಸುವ ಸಲುವಾಗಿ ಸರ್ಕಾರ ಜನರ ಮೇಲೆ ಅತಿ ಹೆಚ್ಚು ತೆರಿಗೆಯ ಭಾರ ಹೇರುತ್ತಿದೆ. ಇದರಿಂದಾಗಿ ಬಡವರು, ಮದ್ಯಮ ವರ್ಗದ ಜನರ ಬದುಕು ದುಸ್ತರವಾಗಿದೆ. ಎಲ್ಲದಕ್ಕೂ ಪರಿಹಾರ ಲೋಕಾಯುಕ್ತಕ್ಕೆ ಬಲ ತುಂಬುವುದೇ ಪರಿಹಾರ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಕಳೆದ ಚುಣಾವಣೆ ಸಮಯದಲ್ಲಿ ಯಡಿಯೂರಪ್ಪ ಅವರು ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ, ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಎಸಿಬಿ ರದ್ದುಪಡಿಸಿ ಲೋಕಾಯುಕ್ತ ಬಲಪಡಿಸುವುದಾಗಿ ತಿಳಿಸಿದ್ದರು. ಆದರೆ, ಅಧಿಕಾರಕ್ಕೆ ಬಂದು 2 ವರ್ಷವಾದರೂ ಅವರು ಕೊಟ್ಟ ಮಾತು ಉಳಿಸಿಕೊಂಡಿಲ್ಲ. ಆದ್ದರಿಂದ ಇದೇ 19ರಂದು ಯಡಿಯೂರಪ್ಪ ಅವರ ಮನೆದೇವರಾದ ಎಡಿಯೂರು ಸಿದ್ಧಲಿಂಗೇಶ್ವ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಪಾದಯಾತ್ರೆ ಆರಂಭಿಸುತ್ತೇವೆ.ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ರಮೇಶ ಎಚ್.ಜಿ. ಕುಣಿಗಲ್ ಮುಂದಾಳತ್ವದಲ್ಲಿ ಹೊರಟು ಮಾರ್ಚ್‌ 22ರಂದು ಬೆಂಗಳೂರಿಗೆ ತಲುಪಲಿದೆ. ಬಳಿಕ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಲೋಕಾಯುಕ್ತ ಬಲಗೊಳಿಸುವ ಮನವಿ ನೀಡಲಾಗುವುದು ’ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.