ಗದಗ: ‘ಹಿಂದೂಗಳಿಗೆ ಹಿಂದೂಗಳೇ ಶತ್ರು ಎನ್ನುವಂತಹ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ನಡೆಸುತ್ತಿರುವುದು ಅಪರಾಧ. ಹಿಂದೂ ಧರ್ಮವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿರುವ ಷಡ್ಯಂತ್ರ ನಿಲ್ಲಬೇಕು’ ಎಂದು ಮುಕ್ಕಣ್ಣೇಶ್ವರ ಮಠದಶಂಕರನಾಂದ ಸ್ವಾಮೀಜಿ ಆಗ್ರಹಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ವೀರೇಂದ್ರ ಹೆಗ್ಗಡೆ ಮತ್ತು ಕುಟುಂಬದವರ ಹೆಸರಿಗೆ ಕಳಂಕ ತರುವ ಹಾಗೂ ಧರ್ಮಸ್ಥಳ ಕ್ಷೇತ್ರದ ಭಕ್ತರ ಭಾವನೆಗೆ ಧಕ್ಕೆ ತರುತ್ತಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಧರ್ಮಸ್ಥಳ ಅಭಿಮಾನಿಗಳ ವೇದಿಕೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಾವಿರಾರು ಸದಸ್ಯರು ಬುಧವಾರ ನಗರದ ಅಂಬೇಡ್ಕರ್ ಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಸಿದ ಬಳಿಕ, ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ ಮಾತನಾಡಿದರು.
‘ಇವತ್ತು ಧರ್ಮಸ್ಥಳ, ಮುಂದೆ ಇನ್ನೊಂದು ಸ್ಥಳ. ಹಿಂದೂಗಳು ಜಾಗೃತರಾಗುವ ಸಮಯ ಈಗ ಬಂದಿದೆ. ಸರ್ಕಾರ ಎಸ್‌ಐಟಿ ರಚನೆ ಮಾಡಿದೆ. ಪೊಲೀಸರು ತನಿಖೆ ಮಾಡುತ್ತಿದ್ದು, ವರದಿ ಬಂದ ನಂತರ ತಪ್ಪು ಸರಿ ನಿರ್ಣಯಿಸಲು ನ್ಯಾಯಾಂಗ ವ್ಯವಸ್ಥೆ ಇದೆ. ಆದಕ್ಕಿಂತ ಪೂರ್ವದಲ್ಲಿ ಕೆಲವರು ಧರ್ಮಸ್ಥಳದ ಹೆಸರು ಕೆಡಿಸಲು, ಭಕ್ತರ ಮನಸ್ಸು ಒಡೆಯುವ ಹುನ್ನಾರ ನಡೆಸಿದ್ದಾರೆ’ ಎಂದು ಕಿಡಿಕಾರಿದರು.
‘ಜೈನ, ಬಸವ ಧರ್ಮ ಎಲ್ಲದಕ್ಕೂ ಮೂಲಬೇರು ಹಿಂದೂ ಧರ್ಮ. ಹಿಂದೂ ಧರ್ಮ ಭಾರತದ ಮಣ್ಣಿನ ಗುಣಧರ್ಮ. ಬಡ್ಡೆ ಇಲ್ಲವಾದರೆ ಟೊಂಗೆಗಳನ್ನು ತೆಗೆದುಕೊಂಡು ಏನು ಮಾಡಲು ಸಾಧ್ಯ. ಬೇರು ನಾಶ ಮಾಡಿದರೆ ಯಾವ ಧರ್ಮವೂ ಉಳಿಯುವುದಿಲ್ಲ. ಧರ್ಮಸ್ಥಳದ ಮೇಲೆ ಚ್ಯುತಿ ಬರುತ್ತಿದ್ದು, ಮಂಜುನಾಥ ಸ್ವಾಮಿಯ ಆಶೀರ್ವಾದ ಇರುವವರೆಗೆ ಏನೂ ಮಾಡಲು ಸಾಧ್ಯವಿಲ್ಲ. ತನಿಖೆ ಮುಗಿಯುವವರೆಗೆ ಎಲ್ಲರೂ ಸುಮ್ಮನಿರಬೇಕು’ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಮಹಿಳೆಯರು ಮಾತನಾಡಿ, ‘ನಡೆದಾಡುವ ದೇವರ ಬಗ್ಗೆ ಈ ರೀತಿಯ ಆರೋಪಗಳನ್ನು ಮಾಡುತ್ತಿರುವುದನ್ನು ಕೇಳಿ ನಮ್ಮಲ್ಲಿ ಆಕ್ರೋಶ ಮೂಡಿಬರುತ್ತಿದೆ. ಇದನ್ನು ಎಲ್ಲ ಮಹಿಳೆಯರು ಖಂಡಿಸುತ್ತೇವೆ. ಮಹಿಳೆಯರ ಅಭಿವೃದ್ಧಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡುಗೆ ಅಪಾರವಾಗಿದೆ. ಅಪಪ್ರಚಾರ ನಡೆಸುವವರಿಗೆ ಕಠಿಣ ಶಿಕ್ಷೆ ಆಗಬೇಕು’ ಎಂದು ಕಿಡಿಕಾರಿದರು.
ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಶಿವಾನಂದ ಬೆಂತೂರ ಮಾತನಾಡಿ, ‘ಅನಾಮಿಕ ವ್ಯಕ್ತಿ ನೀಡಿದ ದೂರಿನ ಆಧಾರದಲ್ಲಿ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿ, ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವುದನ್ನು ಕ್ಷೇತ್ರದ ಭಕ್ತರಾದ ನಾವು ಸ್ವಾಗತಿಸುತ್ತಿದ್ದೇವೆ. ಆದರೆ, ಈ ತನಿಖೆಯು ಗೊತ್ತು ಗುರಿ ಇಲ್ಲದೆ ಹೋಗಬಾರದು’ ಎಂದು ಆಗ್ರಹಿಸಿದರು.
‘ತನಿಖೆಯನ್ನು ನಿಗದಿತ ಸಮಯದಲ್ಲಿ ಮುಗಿಸಿ, ವರದಿಯನ್ನು ಪಡೆದು ಎಲ್ಲಾ ಗೊಂದಲಗಳಿಗೆ ತೆರೆ ಎಳೆಯಬೇಕು’ ಎಂದು ಒತ್ತಾಯಿಸಿದರು.
‘ಅನಾಮಿಕ ದೂರುದಾರ ಮತ್ತು ಆತನ ಹಿಂದೆ ಇರುವ ಗಿರೀಶ್ ಮಟ್ಟೆಣ್ಣನವರ, ಮಹೇಶ ಶೆಟ್ಟಿ ತಿಮರೋಡಿ, ಸಂತೋಷ ಕಡಬ, ಸಮೀರ್ ಎಂ. ಡಿ., ಕುಡ್ಲ ರ‍್ಯಾಂಪೇಜ್, ಜಯಂತ ಟಿ. ಇವರ ಹಿನ್ನೆಲೆ ಏನು? ಇವರಿಗೆ ಯಾರಿಂದ ಧನಸಹಾಯವಾಗುತ್ತಿದೆ ಹಾಗೂ ಸುಳ್ಳು ಆರೋಪ ಮಾಡಲು ಇವರಿಗೆ ಯಾರು ಪ್ರಚೋದನೆ ಮಾಡುತ್ತಿದ್ದಾರೆ ಮತ್ತು ಇವರ ಬ್ಯಾಂಕ್ ಖಾತೆಗಳನ್ನು ತನಿಖೆಗೊಳಪಡಿಸಬೇಕು’ ಎಂದು ಆಗ್ರಹಿಸಿದರು.
ಗದಗ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರುಗಳು, ದಿಗಂಬರ ಜೈನ ಸಮಾಜ, ನವಜೀವನ ಸಮಿತಿ ಸದಸ್ಯರು, ಕರ್ನಾಟಕ ರಕ್ಷಣಾ ವೇದಿಕೆ, ಆಟೊ ಚಾಲಕರ ಸಂಘ, ಹುಯಿಲಗೋಳ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಜಿಲ್ಲೆಯ ಎಲ್ಲ ತಾಲ್ಲೂಕಿನ ಪ್ರಗತಿ ಬಂಧು, ಸ್ವಸಹಾಯ ಸಂಘದ ಸದಸ್ಯರು ಮತ್ತು ಅಭಿಮಾನಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಹೋರಾಟ ನಿರಂತರ
‘ರಾಜ್ಯದ ಸಾಮರಸ್ಯ ಹಾಳು ಮಾಡುವ ಉದ್ದೇಶದಿಂದ ಇಂತಹ ಷಡ್ಯಂತ್ರ ನಡೆದಿದೆ’ ಎಂದು ಜಿಲ್ಲಾ ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಶಿವಪ್ರಕಾಶ ಮಹಾಜನಶೆಟ್ಟರ ಕಿಡಿಕಾರಿದರು. ವೀರೇಂದ್ರ ಹೆಗ್ಗಡೆ ಅವರು ಮಹಿಳಾ ಸಬಲೀಕರಣದಲ್ಲಿ ದೊಡ್ಡ ಬದಲಾವಣೆ ತರುತ್ತಿದ್ದಾರೆ. ದುಷ್ಟಶಕ್ತಿಗಳು ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ಮೂಲಕ ಹೆಗ್ಗಡೆ ಅವರ ಹೆಸರು ಹಾಳು ಮಾಡುತ್ತಿರುವುದು ಖಂಡನೀಯ. ಷಡ್ಯಂತ್ರ ಮಾಡುವವರನ್ನು ಶಿಕ್ಷಿಸುವವರೆಗೆ ಹೋರಾಟ ಮುಂದುವರಿಯಲಿದೆ ಎಂದರು.
ಈ ಪ್ರತಿಭಟನೆಯಿಂದ ಧರ್ಮಯುದ್ದ ಆರಂಭವಾಗಿದೆ. ನಾವೆಲ್ಲರೂ ಶ್ರೀಕ್ಷೇತ್ರ ಧರ್ಮಸ್ಥಳದ ಪರವಾಗಿ ನಿಲ್ಲುತ್ತೇವೆ. ಮುಂದಿನ ದಿನಗಳಲ್ಲಿ ನ್ಯಾಯಕ್ಕೆ ಜಯ ಸಿಗಲಿದೆ.–ಚಂದ್ರಶೇಖರ ಹುಣಸಿಕಟ್ಟಿ, ಜನಜಾಗೃತಿ ವೇದಿಕೆ ಉಪಾಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.