ADVERTISEMENT

ಗದಗ| ಅಂಗವಿಕಲ ಮಕ್ಕಳ ಚಿಕಿತ್ಸೆಗೆ ಅನುದಾನ ಲಭ್ಯ: ಪ್ರೊ.ಎಸ್‌.ವಿ.ನಾಡಗೌಡ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 5:17 IST
Last Updated 15 ನವೆಂಬರ್ 2025, 5:17 IST
ರಾಷ್ಟ್ರೀಯ ದತ್ತು ಮಾಸಾಚರಣೆ ಮತ್ತು ಮಕ್ಕಳ ಮಾಸದ ಪ್ರಯುಕ್ತ ಬುಧವಾರ ಜಿಲ್ಲಾಡಳಿತ ಕಚೇರಿಯಿಂದ ಟಿಪ್ಪು ಸುಲ್ತಾನ್‌ ವೃತ್ತದವರೆಗೆ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಜಿಲ್ಲಾ
ರಾಷ್ಟ್ರೀಯ ದತ್ತು ಮಾಸಾಚರಣೆ ಮತ್ತು ಮಕ್ಕಳ ಮಾಸದ ಪ್ರಯುಕ್ತ ಬುಧವಾರ ಜಿಲ್ಲಾಡಳಿತ ಕಚೇರಿಯಿಂದ ಟಿಪ್ಪು ಸುಲ್ತಾನ್‌ ವೃತ್ತದವರೆಗೆ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಜಿಲ್ಲಾ   

ಗದಗ: ‘ಅಂಗವಿಕಲ ಮಕ್ಕಳ ಸಮಸ್ಯೆಗಳನ್ನು ಪ್ರಾರಂಭಿಕ ಹಂತದಲ್ಲೇ ಗುರುತಿಸಿ, ಚಿಕಿತ್ಸೆ ನೀಡಲು ಜಿಲ್ಲಾ ಪಂಚಾಯಿತಿಯಿಂದ ಸಾಕಷ್ಟು ಅನುದಾನ ಕಾಯ್ದಿರಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಮಹಾತ್ಮಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ. ಎಸ್‌.ವಿ.ನಾಡಗೌಡ ಹೇಳಿದರು.

2025-26ನೇ ಸಾಲಿನ ದತ್ತು ಮಾಸಾಚರಣೆ ಮತ್ತು ಮಕ್ಕಳ ಮಾಸದ ಪ್ರಯುಕ್ತ ಬುಧವಾರ ಜಿಲ್ಲಾಡಳಿತ ಕಚೇರಿಯಿಂದ ಟಿಪ್ಪು ಸುಲ್ತಾನ್‌ ವೃತ್ತದವರೆಗೆ ನಡೆದ ಜಾಗೃತಿ ಜಾಥಾದಲ್ಲಿ ಭಾಗವಹಿಸಿ ಮಾತನಾಡಿದರು.

‘ಅಂಗವಿಕಲ ಮಕ್ಕಳ ಪೋಷಕರಲ್ಲಿ ಅನೇಕರಿಗೆ ಈ ವಿಷಯ ತಿಳಿದಿಲ್ಲ. ಈ ಸಂಬಂಧ ಜಾಗೃತಿ ಮೂಡಿಸಲು ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದಲ್ಲಿ ಒಂದು ಘಟಕ ಸ್ಥಾಪಿಸಿದ್ದು, ಪೋಷಕರಿಗೆ ಸಮಗ್ರ ಮಾಹಿತಿ ನೀಡಲಾಗುವುದು’ ಎಂದು ತಿಳಿಸಿದರು.

ADVERTISEMENT

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ್‌ ಮಾತನಾಡಿ, ‘ನಮ್ಮ ದೇಶದಲ್ಲಿ ವಿಶೇಷಚೇತನ ಮಗು ಜನಿಸಿದರೆ ಪೋಷಕರು ಆ ಮಗುವನ್ನು ಪ್ರೀತಿ, ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ಆದರೆ, ಅಂಗವಿಕಲ ಮಕ್ಕಳನ್ನು ದತ್ತು ಪಡೆಯಲು ಯಾರೂ ಮುಂದೆ ಬರುವುದಿಲ್ಲ. ಮಕ್ಕಳಿಲ್ಲದ ದಂಪತಿ ಅಂಗವಿಕಲ, ಬುದ್ಧಿಮಾಂದ್ಯ ಮಕ್ಕಳನ್ನು ದತ್ತು ಪಡೆಯಲು ಮುಂದೆ ಬರಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್‌.ಶಿವನಗೌಡ್ರ ಮಾತನಾಡಿ, ‘ದತ್ತು ತೆಗೆದುಕೊಳುವುದು ಮತ್ತು ಕೊಡುವುದು ಅತ್ಯಂತ ಸೂಕ್ಷ್ಮ ವಿಷಯ. ಈ ಮೊದಲು ಮಕ್ಕಳನ್ನು ದತ್ತು ತೆಗೆದುಕೊಳುವುದಕ್ಕೆ ಯಾವುದೇ ಕಾನೂನು ಇರಲಿಲ್ಲ. ಈಗ ಮಕ್ಕಳಿಲ್ಲದ ದಂಪತಿಗೆ ಕಾನೂನುಬದ್ಧವಾಗಿ ಮಕ್ಕಳನ್ನು ದತ್ತು ನೀಡಲಾಗುತ್ತಿದೆ’ ಎಂದರು.

ಕೆ.ಎಚ್‌.ಪಾಟೀಲ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ಮಾತನಾಡಿದರು.

ನಂತರ ಜಿಲ್ಲಾಡಳಿತ ಕಚೇರಿಯಿಂದ ಟಿಪ್ಪು ಸುಲ್ತಾನ್ ವೃತ್ತದವರೆಗೆ ಜಾಥಾ ನಡೆಸಿ, ಮಾನವ ಸರಪಳಿ ನಿರ್ಮಿಸಿ ವಿದ್ಯಾರ್ಥಿಗಳು ದತ್ತು ಮಾಸಾಚರಣೆಯ ಜಾಗೃತಿ ಮೂಡಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ದುರುಗೇಶ್‌ ಕೆ.ಆರ್‌., ಉಪವಿಭಾಗಾಧಿಕಾರಿ ಗಂಗಪ್ಪ ಎಂ., ಮಕ್ಕಳ ಸಹಾಯವಾಣಿ 1098 ಸಿಬ್ಬಂದಿ, ಬಾಲಕರ ಮತ್ತು ಬಾಲಕಿಯರ ಸರ್ಕಾರಿ ಬಾಲ ಮಂದಿರದ ಅಧಿಕಾರಿಗಳು ಹಾಗೂ ಸಿಬ್ಬಂದಿ, ವಿ.ಪಿ.ಗಾಲಾ ಹಾಗೂ ಗುರಮ್ಮ ನರ್ಸಿಂಗ್‌ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಫೀಕಾ ಹಳ್ಳೂರ ಸ್ವಾಗತಿಸಿದರು. ಪ್ರಕಾಶ ಗಾಣಗೇರ ವಂದಿಸಿದರು.

ವಿಶೇಷಚೇತನ ಮಕ್ಕಳನ್ನು ದತ್ತು ತೆಗೆದುಕೊಳುವುದರಲ್ಲಿ ಸ್ವದೇಶಿಯರಿಗಿಂತ ವಿದೇಶಿಯರ ಸಂಖ್ಯೆ ಹೆಚ್ಚಾಗಿದೆ. ಈ ದತ್ತು ಪ್ರಕ್ರಿಯೆಯ ಕುರಿತು ವ್ಯಾಪಕ ಪ್ರಚಾರ ಮಾಡಬೇಕಿದೆ.
–ಜಯದೇವಿ ಕವಲೂರ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.