ADVERTISEMENT

ಶಿಸ್ತು ಇದ್ದರಷ್ಟೇ ಬಲಿಷ್ಠ ಸಂಘಟನೆ ಸಾಧ್ಯ: ಷಡಾಕ್ಷರಿ

ಸರ್ಕಾರಿ ನೌಕರರ ಸಂಘದ ಗದಗ ಜಿಲ್ಲಾ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 2:29 IST
Last Updated 7 ಸೆಪ್ಟೆಂಬರ್ 2025, 2:29 IST
ಗದಗ ನಗರದ ಪಂ. ಭೀಮಸೇನ ಜೋಶಿ ರಂಗಮಂದಿರದಲ್ಲಿ ಶನಿವಾರ ನಡೆದ ಸರ್ಕಾರಿ ನೌಕರರ ಸಂಘದ ಗದಗ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು ನೌಕರರ ಜನಸ್ನೇಹಿ ಕಾರ್ಯಾಗಾರವನ್ನು ಗಣ್ಯರು ಉದ್ಘಾಟಿಸಿದರು
ಗದಗ ನಗರದ ಪಂ. ಭೀಮಸೇನ ಜೋಶಿ ರಂಗಮಂದಿರದಲ್ಲಿ ಶನಿವಾರ ನಡೆದ ಸರ್ಕಾರಿ ನೌಕರರ ಸಂಘದ ಗದಗ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು ನೌಕರರ ಜನಸ್ನೇಹಿ ಕಾರ್ಯಾಗಾರವನ್ನು ಗಣ್ಯರು ಉದ್ಘಾಟಿಸಿದರು   

ಗದಗ: ‘ಸಂಘಟನೆ ಶಕ್ತಿಯುತವಾಗಿದ್ದರೆ ಮಾತ್ರ ನಿರ್ಭೀತಿಯಿಂದ ಕೆಲಸ ನಿರ್ವಹಿಸಲು ಸಾಧ್ಯ. ಸಂಘಟನೆಯಲ್ಲಿ ಆಡಳಿತಾತ್ಮಕ ಮತ್ತು ಆರ್ಥಿಕ ಶಿಸ್ತು ಮುಖ್ಯ. ಆಗ ಮಾತ್ರ ಸಂಘಟನೆ ಬಲಿಷ್ಠವಾಗಿ ಬೆಳೆಯಲು ಸಾಧ್ಯ’ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್‌. ಷಡಾಕ್ಷರಿ ಹೇಳಿದರು.

ನಗರದ ಪಂ. ಭೀಮಸೇನ ಜೋಶಿ ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆ, ವಿವಿಧ ಇಲಾಖೆಗಳ ವೃಂದ ಸಂಘಗಳು ಮತ್ತು ನೌಕರರ ಸಂಘಟನೆಗಳ ಸಹಯೋಗದಲ್ಲಿ ಶನಿವಾರ ನಡೆದ ನೂತನ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು ನೌಕರರ ಜನಸ್ನೇಹಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

‘ಕೇವಲ ಅಧ್ಯಕ್ಷರು, ಪದಾಧಿಕಾರಿಗಳಿಂದ ಸಂಘಟನೆ ಕಟ್ಟಲು ಸಾಧ್ಯವಿಲ್ಲ. ನೌಕರರ ಮನಃಸ್ಥಿತಿ ಅರ್ಥ ಮಾಡಿಕೊಂಡು ಸಂಘದ ಸದಸ್ಯರು ಕಾರ್ಯ ಮಾಡಬೇಕು. ನೌಕರರೇ ಈ ಸಂಘದ ಜೀವಾಳ. ಕಾರ್ಯತತ್ಪರತೆ, ಸೇವಾಮನೋಭಾವ ಇದ್ದವರು ಮಾತ್ರ ನಾಯಕರಾಗಲು ಸಾಧ್ಯ’ ಎಂದರು.

ADVERTISEMENT

‘ಸರ್ಕಾರ ಕಡಿಮೆ ಸಂಖ್ಯೆಯಲ್ಲಿ ಹೆಚ್ಚಿನ ಸೇವೆ ಕೊಡಲು ಯೋಚನೆ ಮಾಡುತ್ತಿದೆ. ಖಾಲಿ ಹುದ್ದೆಗಳನ್ನು ತುಂಬಲು ವಿಳಂಬ ಮಾಡುತ್ತಿದೆ. ಶಿಕ್ಷಕರು ಸೇವೆಗೆ ಸೇರಿದ ನಂತರ ಐದು ವರ್ಷಕ್ಕೊಮ್ಮೆ ಮತ್ತೇ ಪರೀಕ್ಷೆ ಎದುರಿಸಿ ಸೇವೆಗೆ ಸೇರಬೇಕು ಎಂಬ ನಿಯಮ ಜಾರಿಗೆ ತರುವ ನಿಟ್ಟಿನಲ್ಲಿ ಸರ್ಕಾರ ನಿರ್ಧಾರ ಮಾಡಿದೆ. ಇದು ಸುಧಾರಣೆಯ ಭಾಗ ಅಲ್ಲ. ಶಿಕ್ಷಕರಿಗೆ ಇದರಿಂದ ತೊಂದರೆ ಆಗುತ್ತದೆ. ಬದಲಾಗಿ ಶಿಕ್ಷಕರ ಕೌಶಲ ಹೆಚ್ಚಿಸಲು ಸರ್ಕಾರ ತರಬೇತಿ, ಕಾರ್ಯಾಗಾರಗಳನ್ನು ನಡೆಸಬೇಕು’ ಎಂದರು.

‘ಸರ್ಕಾರಿ ನೌಕರರು ಮತ್ತು ಕುಟುಂಬಸ್ಥರಿಗೆ ಉಚಿತ ಚಿಕಿತ್ಸೆ ನೀಡುವ ಯೋಜನೆ ಈ ತಿಂಗಳಲ್ಲಿ ಜಾರಿ ಬರಲಿದೆ. ರಾಜ್ಯ ಸರ್ಕಾರ ಸದ್ಯದಲ್ಲೇ ಆದೇಶ ಹೊರಡಿಸಲಿದೆ. ನೌಕರರು ಪ್ರತಿ ತಿಂಗಳು ವಂತಿಗೆ ತುಂಬಿ ಈ ಯೋಜನೆಯ ಲಾಭ ಪಡೆಯಬಹುದು’ ಎಂದರು.

ಮಣಕವಾಡದ ಅನ್ನದಾನೇಶ್ವರ ಮಠದ ಅಭಿನವ ಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಜ್ಯ ಸರ್ಕಾರಿ ನೌಕರರ ಗದಗ ಜಿಲ್ಲಾ ಶಾಖೆಯ ಅಧ್ಯಕ್ಷ ಬಸವರಾಜ ಬಳ್ಳಾರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಸರ್ಕಾರಿ ನೌಕರರ ಸಂಘದ ನಿಕಟ ಪೂರ್ವ ರಾಜ್ಯ ಹಿರಿಯ ಉಪಾಧ್ಯಕ್ಷ  ರವಿ ಗುಂಜಿಕರ, ಗಿರಿಗೌಡ ಎಚ್., ಬಸವರಾಜು, ಶಿವರುದ್ರಯ್ಯ, ಮಲ್ಲಿಕಾರ್ಜುನ ಬಳ್ಳಾರಿ, ಸುರೇಶ ಶೇಡಸ್ಯಾಳ, ನಾಗರಾಜ ಜುಮ್ಮಣ್ಣವರ, ಆರ್. ಮೋಹನಕುಮಾರ್, ಎಲ್.ಮೋಹನಕುಮಾರ, ಹರಿ ರಾಮಕೃಷ್ಣ, ಎಸ್.ಎಫ್.ಸಿದ್ದನಗೌಡರ, ಮಲ್ಲೇಶ್ ಕರಿಗಾರ, ಬಿ.ಎ.ಕುಂಬಾರ ಇದ್ದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಡಳಿತ ಭವನದಿಂದ ಪಂ. ಭೀಮಸೇನ್ ಜೋಶಿ ರಂಗಮಂದಿರದವರೆಗೆ ಕುಂಭಮೇಳ ಮೆರವಣಿಗೆ ಜರುಗಿತು. ಡಿ.ಎಸ್.ತಳವಾರ ಸ್ವಾಗತಿಸಿದರು.

ನೌಕರರು ಕೌಟುಂಬಿಕ ವೈಯಕ್ತಿಕ ಹಾಗೂ ಆಡಳಿತಾತ್ಮಕ ಸಮಸ್ಯೆ ಎದುರಿಸುತ್ತಿದ್ದಾಗ ಸಮಸ್ಯೆಗಳಿಗೆ ಸ್ಪಂದನೆ ಮಾಡುವಂತಹ ಗುರುತರ ಜವಾಬ್ದಾರಿ ಜಿಲ್ಲಾ ಹಾಗೂ ರಾಜ್ಯ ಸಂಘದ ಪದಾಧಿಕಾರಿಗಳದ್ದಾಗಿದೆ.
– ಸಿ.ಎಸ್‌.ಷಡಾಕ್ಷರಿ, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ

‘ನೌಕರರ ನಂಬಿಕೆ ಗಳಿಸುವಂತೆ ಕೆಲಸ ಮಾಡಿ’

‘ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿರುವ ಬಸವರಾಜ ಬಳ್ಳಾರಿ ಹಾಗೂ ಪದಾಧಿಕಾರಿಗಳು ಜಿಲ್ಲಾ ಮಟ್ಟದ ನೌಕರರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಪದಾಧಿಕಾರಿಗಳು ಒಗ್ಗಟ್ಟಿನಿಂದ ಉತ್ತಮ ಕೆಲಸ ಮಾಡುವ ಮೂಲಕ ಮುಂದಿನ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗುವ ರೀತಿಯಲ್ಲಿ ನೌಕರರ ನಂಬಿಕೆ ಗಳಿಸಬೇಕು’ ಎಂದು ವಿಧಾನ ಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರ ಹೇಳಿದರು.

ರಾಜ್ಯದ ಅಭಿವೃದ್ಧಿಯಲ್ಲಿ ಸರ್ಕಾರಿ ನೌಕರರ ಪಾತ್ರ ದೊಡ್ಡದಿದೆ. ರಾಜ್ಯದಲ್ಲಿ 2.70 ಲಕ್ಷ ಹುದ್ದೆಗಳು ಖಾಲಿಯಿದ್ದು ನಿರುದ್ಯೋಗ ತಾಂಡವವಾಡುತ್ತಿದೆ. ದೊಡ್ಡ ಸಂಖ್ಯೆಯಲ್ಲಿ ಹುದ್ದೆಗಳು ಖಾಲಿ ಇರುವ ಕಾರಣ ಸರ್ಕಾರಿ ನೌಕರರು ಒತ್ತಡದ ನಡುವೆ ಕೆಲಸ ನಿರ್ವಹಿಸುತ್ತಿದ್ದಾರೆ. ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ದರಿಂದ ಖಾಲಿ ಹುದ್ದೆಗಳನ್ನು ತುಂಬಿಕೊಳ್ಳುವಂತೆ ಸರ್ಕಾರಿ ನೌಕರರು ಸರ್ಕಾರವನ್ನು ಒತ್ತಾಯಿಸಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.