ನರೇಗಲ್: ‘ಪಟ್ಟಣ ಪಂಚಾಯಿತಿ ಅಭಿವೃದ್ಧಿ ಹಿನ್ನಡೆ ಅನುಭವಿಸುತ್ತಿದ್ದು, ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು’ ಎಂದು ನೂತನ ಜಿಲ್ಲಾಧಿಕಾರಿ ಗೋವಿಂದ ರಡ್ಡಿ ಹೇಳಿದರು.
ಪಟ್ಟಣ ಪಂಚಾಯಿತಿಗೆ ಶನಿವಾರ ದಿಢೀರ್ ಭೇಟಿ ನೀಡಿ, ಪಟ್ಟಣ ಪಂಚಾಯಿತಿ ಕಟ್ಟಡ ಹಾಗೂ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲನೆ ಕೈಗೊಂಡು ಅಧಿಕಾರಿಗಳಿಗೆ ಸೂಚನೆ ನೀಡಿದರು.
‘ಪಟ್ಟಣ ಪಂಚಾಯಿತಿ ಆದಾಯಕ್ಕೆ ಕತ್ತರಿಯಾಗಿರುವ ವಾಣಿಜ್ಯ ಮಳಿಗೆಗಳನ್ನು ಆದಷ್ಟು ಬೇಗನೇ ಟೆಂಡರ್ ಕರೆಯಲಾಗುತ್ತದೆ. ಒಂದು ವೇಳೆ ಈಗಾಗಲೇ ಆ ವಾಣಿಜ್ಯ ಮಳಿಗೆಗಳಲ್ಲಿ ವ್ಯಾಪಾರ- ವಹಿವಾಟು ಮಾಡುತ್ತಿರುವ ಉದ್ಯೋಗಿಗಳಿಂದ ಬರಬೇಕಾದ ಹಳೆ ಬಾಕಿ ಮೊತ್ತವನ್ನು ಪಾವತಿಸಲು ಅವರು ಹಿಂದೇಟು ಹಾಕಿದ್ದಲ್ಲಿ, ಆ ವ್ಯಾಪಾರಸ್ಥರ ಮನೆಗಳ ಮೇಲೆ ಭೋಜಾ ಹೇರುವಂತೆ ಹಾಗೂ ಕರ ವಸೂಲಿಗೆ ಮುಂದಾಗಬೇಕು’ ಎಂದು ಸೂಚಿಸಿದರು.
‘ಈಗಾಗಲೇ ಸಾರ್ವಜನಿಕರಿಂದ ನರೇಗಲ್ ಪಟ್ಟಣಕ್ಕೆ ಆಂಬುಲೆನ್ಸ್ ಸೇವೆ ಅವಶ್ಯಕತೆ ಇರುವ ಬಗ್ಗೆ ಗಮನಕ್ಕೆ ಬಂದಿದ್ದು, ಕೂಡಲೇ ಸಂಬಂಧಿಸಿದ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಅವರನ್ನು ಸಂಪರ್ಕಿಸಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಂಬುಲೆನ್ಸ್ ಒದಗಿಸುವ ಕುರಿತು ಕ್ರಮ ಕೈಗೊಳ್ಳುತ್ತೇನೆ’ ಎಂದರು.
ಪಟ್ಟಣ ಪಂಚಾಯಿತಿ ಸದಸ್ಯರು ಕಳೆದೊಂದು ವರ್ಷದಿಂದ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನ ತೆರವುಗೊಂಡಿರುವ ಕುರಿತು ಪ್ರಶ್ನಿಸಿದರು.
‘ರಾಜ್ಯದ ಬಹುತೇಕ ಪಟ್ಟಣ ಪಂಚಾಯಿತಿ, ಪುರಸಭೆಗಳಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳು ತೆರವುಗೊಂಡಿದ್ದು, ಸರ್ಕಾರದಿಂದ ಆದಷ್ಟು ಬೇಗನೇ ಮೀಸಲಾತಿ ಪ್ರಕಟಿಸುವ ಬಗ್ಗೆ ಚಿಂತನೆ ನಡೆದಿದೆ. ಸದಸ್ಯರ ಅವಧಿಯು ಇನ್ನೂ ಎರಡೂವರೆ ವರ್ಷ ಇದೆ. ಯಾವುದೇ ಕಾರಣಕ್ಕೂ ಸದಸ್ಯರು ಆತಂಕಕ್ಕೆ ಒಳಗಾಗಬಾರದು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಪಟ್ಟಣದಲ್ಲಿ ಸ್ಥಗಿತಗೊಂಡ ಆಧಾರ ಕೇಂದ್ರ ಮರುಸ್ಥಾಪನೆಗೆ ಕ್ರಮವಹಿಸುವುದಾಗಿ ಭರವಸೆ ನೀಡಿದ ಜಿಲ್ಲಾಧಿಕಾರಿ, ಯಾವುದಾದರೂ ಸಮಸ್ಯೆಗಳು ಇದ್ದರೆ ಸಾರ್ವಜನಿಕರು ನೇರವಾಗಿ ಬಂದು ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಬಹುದು ಎಂದು ಹೇಳಿದರು.
ಪಟ್ಟಣ ಪಂಚಾಯಿತಿ ಸದಸ್ಯರಾದ ಈರಪ್ಪ ಜೋಗಿ, ಮುತ್ತಪ್ಪ ನೂಲ್ಕಿ, ಕುಮಾರಸ್ವಾಮಿ ಕೋರಧ್ಯಾನಮಠ, ಶ್ರೀಶೈಲಪ್ಪ ಬಂಡಿಹಾಳ, ನಿಂಗಪ್ಪ ಚಲವಾದಿ, ಯಲ್ಲಪ್ಪ ಮಣ್ಣೊಡ್ಡರ, ಕಾರ್ಯನಿರ್ವಾಹಕ ಅಭಿಯಂತರ ಎಸ್.ಬಿ.ಮರಿಗೌಡ್ರ, ಅಭಿಯಂತರ ಉಮೇಶ ಓಜನಳ್ಳಿ, ಮುಖ್ಯಾಧಿಕಾರಿ ರಮೇಶ ಹೊಸಮನಿ, ಆರೋಗ್ಯ ನಿರೀಕ್ಷಕ ರಾಮಚಂದ್ರಪ್ಪ ಕಜ್ಜಿ, ರಮೇಶ ಹಲಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.