ADVERTISEMENT

ಮುಂಡರಗಿ|ಅಪರಿಚಿತರಿಂದ ಬಿತ್ತನೆ ಬೀಜ ಖರೀದಿಸಬೇಡಿ: ತಹಶೀಲ್ದಾರ್ ಎರ‍್ರಿಸ್ವಾಮಿ

​ಪ್ರಜಾವಾಣಿ ವಾರ್ತೆ
Published 24 ಮೇ 2025, 14:31 IST
Last Updated 24 ಮೇ 2025, 14:31 IST
ಮುಂಡರಗಿ ತಹಶೀಲ್ದಾರ್ ಎರ‍್ರಿಸ್ವಾಮಿ.ಪಿ.ಎಸ್. ಅವರು ತಹಶೀಲ್ದಾರ್ ಕಾರ್ಯಾಲಯದಲ್ಲಿ ರೈತ ಮುಖಂಡರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು
ಮುಂಡರಗಿ ತಹಶೀಲ್ದಾರ್ ಎರ‍್ರಿಸ್ವಾಮಿ.ಪಿ.ಎಸ್. ಅವರು ತಹಶೀಲ್ದಾರ್ ಕಾರ್ಯಾಲಯದಲ್ಲಿ ರೈತ ಮುಖಂಡರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು   

ಮುಂಡರಗಿ: ‘ಹಣ ಉಳಿಸುವ ದೃಷ್ಟಿಯಿಂದ ರೈತರು ಅಪರಿಚಿತರಿಂದ ಬಿತ್ತನೆ ಬೀಜಗಳನ್ನು ಖರೀದಿಸಬಾರದು. ಅದರ ಬದಲಾಗಿ ರೈತ ಸಂಪರ್ಕ ಕೇಂದ್ರ ಆಥವಾ ಅಧಿಕೃತ ಬಿತ್ತನೆ ಬೀಜಗಳ ಮಾರಾಟಗಾರರಿಂದ ಮಾತ್ರ ಬಿತ್ತನೆ ಬೀಜಗಳನ್ನು ಖರೀದಿಸಬೇಕು. ಖರೀದಿಸಿರುವ ಕುರಿತು ಅಗತ್ಯ ರಸೀದಿಗಳನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು’ ಎಂದು ತಹಶೀಲ್ದಾರ್ ಎರ‍್ರಿಸ್ವಾಮಿ.ಪಿ.ಎಸ್. ಸೂಚಿಸಿದರು.

ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಶುಕ್ರವಾರ ರೈತ ಮುಖಂಡರು ಹಾಗೂ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಪ್ರಸ್ತುತ ಮುಂಗಾರು ಹಂಗಾಮಿನ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ರೈತರು ಬಿತ್ತನೆ ಪೂರ್ವದಲ್ಲಿ ಸೂಕ್ತ ಬೀಜೋಪಚಾರ ಕೈಗೊಳ್ಳಬೇಕು. ಬಿತ್ತನೆ ಕಾರ್ಯ ಕೈಗೊಳ್ಳುವಾಗ ಕೇವಲ ಯೂರಿಯಾ ಹಾಗೂ ಡಿ.ಎ.ಪಿ ರಸಗೊಬ್ಬರಗಳಿಗೆ ಸೀಮಿತವಾಗದೆ ಸಾರಜನಕ, ರಂಜಕ, ಪೊಟ್ಯಾಷ ಪೋಷಕಾಂಶಗಳನ್ನು ಒಟ್ಟಿಗೆ ಒದಗಿಸುವ ಸಂಯುಕ್ತ ಗೊಬ್ಬರಗಳನ್ನು ಡಿ.ಎ.ಪಿ ಗೊಬ್ಬರಕ್ಕೆ ಪರ್ಯಾಯವಾಗಿ ಬಳಸುವುದು ಸೂಕ್ತ’ ಎಂದು ಸಲಹೆ ನೀಡಿದರು.

ADVERTISEMENT

ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ಮಾತನಾಡಿ, ‘ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನಾದ್ಯಂತ ಒಟ್ಟು 51,360 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದು, ರೈತರಿಗೆ ಅಗತ್ಯವಿರುವ ಉತ್ತಮ ಗುಣಮಟ್ಟದ ಬಿತ್ತನೆ ಬೀಜ, ಗೊಬ್ಬರ ಹಾಗೂ ಮತ್ತಿತರ ಸಾಮಗ್ರಿಗಳ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

‘ಕೃಷಿ ಇಲಾಖೆಯ ಡಂಬಳ ಹಾಗೂ ಮುಂಡರಗಿ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಅಗತ್ಯವಿರುವಷ್ಟು ಸಾಮಗ್ರಿಗಳನ್ನು ದಾಸ್ತಾನು ಮಾಡಲಾಗಿದ್ದು, ಮುಂದಿನ ವಾರ ಅವುಗಳನ್ನು ವಿತರಿಸಲಾಗುವುದು. ಕೃಷಿ ಇಲಾಖೆಯಿಂದ ಈಗಾಗಲೇ ತಾಲ್ಲೂಕಿನಲ್ಲಿ ಮುಂಗಾರು ಪೂರ್ವ ಸಿದ್ದತಾ ಅಭಿಯಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಅದರ ಮೂಲಕ ರೈತರಿಗೆ ಮಣ್ಣಿನ ಪರೀಕ್ಷೆ, ಗುಣಮಟ್ಟದ ಬೀಜಗಳ ಆಯ್ಕೆ, ಬಿತ್ತನೆ ಪೂರ್ವ ಬೀಜೋಪಚಾರ ಹಾಗೂ ಸಂಯುಕ್ತ ಗೊಬ್ಬರಗಳ ಬಳಕೆ ಮೊದಲಾದವುಗಳ ಕುರಿತು ರೈತರಿಗೆ ಮಾಹಿತಿ ಹಾಗೂ ತರಬೇತಿ ನೀಡಲಾಗಿದೆ’ ಎಂದರು.

ರೈತ ಮುಖಂಡ ಶಿವಾನಂದ ಇಟಗಿ ಮಾತನಾಡಿ, ‘ಈ ವರ್ಷ ಉತ್ತಮ ಮಳೆಯಾಗುವ ಸಾಧ್ಯತೆಯಿದ್ದು, ಕೃಷಿ ಇಲಾಖೆಯವರು ರೈತರಿಗೆ ಉತ್ತಮ ಗುಣಮಟ್ಟದ ಬೀಜ ಹಾಗೂ ಗೊಬ್ಬರಗಳನ್ನು ಸಕಾಲದಲ್ಲಿ ಪೂರೈಸಬೇಕು. ಕಾಲಕಾಲಕ್ಕೆ ರೈತರಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಬೇಕು’ ಎಂದು ಮನವಿ ಮಾಡಿಕೊಂಡರು.

ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ರಫೀಕ್‍ಸಾಬ ತಾಂಬೋಟಿ, ಸಾಮಾಜಿಕ ವಲಯ ಅರಣ್ಯಾಧಿಕಾರಿ ಸುನಿತಾ.ಬಿ.ಎಸ್., ಪಶುಸಂಗೋಪನಾ ಇಲಾಖೆಯ ಐ.ಎ.ಗೋಕಾವಿ, ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಶಿವಪ್ಪ ಅಂಕದ, ಕೃಷಿ ಅಧಿಕಾರಿಗಳಾದ ವೀರೇಶ.ಎಸ್., ಎಸ್.ಬಿರಾಮೇನಹಳ್ಳಿ, ಶರಣಪ್ಪ ಕಂಬಳಿ, ನಿಂಗಪ್ಪ ಬಂಡಾರಿ, ಗರಡಪ್ಪ ಜಂತ್ಲಿ, ಅಶ್ವಿನಿ ಗೌಡರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.