ADVERTISEMENT

ಡಾ.ಅಭಿನವ ಅನ್ನದಾನ ಸ್ವಾಮೀಜಿ ಲಿಂಗೈಕ್ಯ: ಶೋಕಸಾಗರದಲ್ಲಿ ಭಕ್ತರು

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಂತಿಮ ದರ್ಶನ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2021, 6:05 IST
Last Updated 22 ನವೆಂಬರ್ 2021, 6:05 IST
ಡಾ.ಅಭಿನವ ಅನ್ನದಾನ ಸ್ವಾಮೀಜಿ ಅವರಿಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಂತಿಮ ದರ್ಶನ ಸಲ್ಲಿಸಿದರು
ಡಾ.ಅಭಿನವ ಅನ್ನದಾನ ಸ್ವಾಮೀಜಿ ಅವರಿಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಂತಿಮ ದರ್ಶನ ಸಲ್ಲಿಸಿದರು   

ನರೇಗಲ್: ಗದಗ ಜಿಲ್ಲೆಯ ನರೇಗಲ್ ಹೋಬಳಿಯ ಹಾಲಕೆರೆ ಸಂಸ್ಥಾನ ಮಠದ ಪೀಠಾಧಿಪತಿ ಡಾ.ಅಭಿನವ ಅನ್ನದಾನ ಸ್ವಾಮೀಜಿ (85) ಸೋಮವಾರ ಬೆಳಿಗ್ಗೆ ಲಿಂಗೈಕ್ಯರಾಗಿದ್ದಾರೆ.

ಹಾಲಕೆರೆ, ನರೇಗಲ್, ಜಕ್ಕಲಿ, ಇಟಗಿ, ರೋಣ, ಗಜೇಂದ್ರಗಡ, ನಿಡಗುಂದಿ, ಮಾರನಬಸರಿ, ಬೂದಿಹಾಳ, ಅಬ್ಬಿಗೇರಿ, ನಿಡಗುಂದಿಕೊಪ್ಪ, ಸೂಡಿ, ಕಳಕಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಹಾಗೂ 28 ಶಾಖಾ ಮಠಗಳ ಲಕ್ಷಾಂತರ ಭಕ್ತರು ಶೋಕ ಸಾಗರದಲ್ಲಿ ಮುಳುಗಿದ್ದಾರೆ.

ಹಾಲಕೆರೆಯ ಶ್ರೀಮಠಕ್ಕೆ ಭಕ್ತರ ದಂಡು ಹರಿದು ಬರುತ್ತಿದೆ. ವಿವಿಧ ಹಳ್ಳಿಗಳಲ್ಲಿ ಸ್ವಯಂ ಪ್ರೇರಿತರಾಗಿ ಅಂಗಡಿಗಳನ್ನು ಬಂದ್ ಮಾಡಲಾಗಿದೆ. ರೈತರು, ಕೃಷಿ ಕಾರ್ಮಿಕರು, ಕಟ್ಟಡ ಮತ್ತು ಕೂಲಿ ಕಾರ್ಮಿಕರು ಕೆಲಸಕ್ಕೆ ಹೋಗದೆ ಶ್ರೀಗಳ ಅಂತಿಮ ದರ್ಶನ ಪಡೆದುಕೊಳ್ಳುವ ಸಲುವಾಗಿ ವಿವಿಧ ಭಾಗದಿಂದ ಬರುವ ಭಕ್ತರಿಗೆ ಅನಕೂಲವಾಗಲಿ ಎಂದು ಸಿದ್ಧತೆಗಳನ್ನು ಮಾಡುತ್ತಿದ್ದಾರೆ.

ADVERTISEMENT

ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀಗಳು ನ. 16ಕ್ಕೆ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿಯೇ ಕೊನೆ ಉಸಿರೆಳೆದಿದ್ದಾರೆ. ಈ ಮೊದಲು ಬಾಗಲಕೊಟೆ ಹಾಗೂ ಬೆಂಗಳೂರಿನಲ್ಲಿ ಹೃದಯದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು.

1972ರಲ್ಲಿ ಬಳ್ಳಾರಿ ಜಿಲ್ಲೆ ಹಂಪಿ-ಹೊಸಪೇಟೆಯ ಕೊಟ್ಟೂರುಸ್ವಾಮಿ ಮಠದ ಪೀಠವನ್ನು ಸಂಗನಬಸವ ಸ್ವಾಮಿಗಳೆಂಬ ನಾಮದೊಂದಿಗೆ, ನಾಗನೂರು ಶಿವಬಸವ ಸ್ವಾಮಿಗಳ ಅಪ್ಪಣೆಯಂತೆ 1987 ರಲ್ಲಿ ಗದಗ ಜಿಲ್ಲೆಯ ಹಾಲಕೆರೆಯ ಅನ್ನದಾನೇಶ್ವರ ಮಠದ 12ನೇ ಪೀಠಾಧಿಪತಿಗಳಾಗಿ ಅಭಿನವ ಅನ್ನದಾನ ಸ್ವಾಮಿಗಳು ಎಂದು ನಾಮಾಂಕಿತರಾಗಿ ನೇಮಕಗೊಂಡಿದ್ದರು.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಶಿವಯೋಗ ಮಂದಿರದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. ಅನ್ನದಾನ ವಿಜಯ ವಿದ್ಯಾಪ್ರಸಾರಕ ಸಮಿತಿಯ ಅಧ್ಯಕ್ಷರಾಗಿಯೂ ಶಿಕ್ಷಣ ಸಂಸ್ಥೆಗಳ ನಿರ್ವಹಣೆ ಮಾಡುತ್ತಿದ್ದರು.

ನ. 8, 9, 10ಕ್ಕೆ ಹಾಲಕೆರೆ ಸಂಸ್ಥಾನ ಮಠದಲ್ಲಿ ಡಾ. ಅಭಿನವ ಅನ್ನದಾನ ಶ್ರೀಗಳ ಗುರುವಂದನೆ, ಲಕ್ಷದೀಪೋತ್ಸವ ಹಾಗೂ ನೂತನ ಪೀಠಾಧಿಕಾರಿ ಮುಪ್ಪಿನಬಸವಲಿಂಗ ಸ್ವಾಮೀಜಿಗಳ ನಿರಂಜ ಚರಪಟ್ಟಾಧಿಕಾರ ಮಹೋತ್ಸವ ಅದ್ಧೂರಿಯಾಗಿ ನಡೆಯಿತು. ಲಿಂಗೈಕ್ಯ ಶ್ರೀಗಳು ತಮ್ಮ ಸ್ಥಾನಕ್ಕೆ ನೂತನವಾಗಿ ಮುಪ್ಪಿನ ಬಸವಲಿಂಗ ಸ್ವಾಮೀಜಿ ಅವರನ್ನು ನೇಮಿಸಿ ಮಠದ ಸೇವೆಯ ಅಧಿಕಾರವನ್ನು ನೀಡಿದ್ದರು. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸಚಿವರು ಹಾಗೂ 250ಕ್ಕೂ ಹೆಚ್ಚು ಸ್ವಾಮೀಜಿಗಳು ಪಾಲ್ಗೊಂಡಿದ್ದರು.

ಅಭಿನವ ಅನ್ನದಾನ ಸ್ವಾಮೀಜಿಯವರು ಲಿಂಗೈಕ್ಯರಾದ ಸುದ್ದಿ ಕೇಳಿ ಭಕ್ತರು ಶೋಕ ಸಾಗರದಲ್ಲಿ ಮುಳುಗಿದ್ದಾರೆ.

ಸ್ವಾಮೀಜಿಯವರ ಪಾರ್ಥಿವ ಶರೀರ ಸೋಮವಾರ ಸಂಜೆ 7 ಗಂಟೆಗೆ ಹಾಲಕೇರಿ ಗ್ರಾಮಕ್ಕೆ ಬರಲಿದೆ ಹಾಗೂ ಮಂಗಳವಾರ ಸಂಜೆ 4 ಗಂಟೆಗೆ ಅಂತ್ಯಕ್ರಿಯೆ ನಡೆಯುತ್ತದೆ. ಶ್ರೀಗಳ ದರ್ಶನ ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಶ್ರೀಮಠದಿಂದ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.