ADVERTISEMENT

ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕುಬೇರಪ್ಪ ಬಿರುಸಿನ ಪ್ರಚಾರ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2020, 6:02 IST
Last Updated 15 ಅಕ್ಟೋಬರ್ 2020, 6:02 IST
ಗದಗ ನಗರದ ಕೆ.ಎಲ್.ಇ ಸಂಸ್ಥೆಯ ಜೆ.ಟಿ. ಮಹಾವಿದ್ಯಾಲಯದಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಾ.ಆರ್.ಎಂ.ಕುಬೇರಪ್ಪ ಪ್ರಚಾರ ನಡೆಸಿದರು
ಗದಗ ನಗರದ ಕೆ.ಎಲ್.ಇ ಸಂಸ್ಥೆಯ ಜೆ.ಟಿ. ಮಹಾವಿದ್ಯಾಲಯದಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಾ.ಆರ್.ಎಂ.ಕುಬೇರಪ್ಪ ಪ್ರಚಾರ ನಡೆಸಿದರು   

ಗದಗ: ‘ವಿಶ್ವವಿದ್ಯಾಲಯ ಮತ್ತು ಪದವಿ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಪದವೀಧರರಿಗೆ ಯಾವುದೇ ಸೌಲಭ್ಯ, ರಕ್ಷಣೆ ಮತ್ತು ಸೇವೆಗೆ ತಕ್ಕಂತೆ ಅವಕಾಶಗಳು ದೊರೆಯುತ್ತಿಲ್ಲ. ಶೈಕ್ಷಣಿಕ ವ್ಯವಸ್ಥೆಯ ಉನ್ನತಿಗೆ ಈಗ ಇರುವ ವಿವಿ ಕಾಯ್ದೆಯು ಪೂರಕವಾಗಿಲ್ಲ’ ಎಂದು ಹಿರಿಯ ಶಿಕ್ಷಣ ತಜ್ಞ, ಪಶ್ಚಿಮ ಪದವೀಧರ ಕ್ಷೇತ್ರ ಕಾಂಗ್ರೆಸ್‌ ಅಭ್ಯರ್ಥಿ ಡಾ.ಆರ್.ಎಂ.ಕುಬೇರಪ್ಪ ಅಭಿಪ್ರಾಯಪಟ್ಟರು.

ಗದಗ ನಗರದ ಕೆ.ಎಲ್.ಇ ಸಂಸ್ಥೆಯ ಜೆ.ಟಿ ಮಹಾವಿದ್ಯಾಲಯದಲ್ಲಿ ಪ್ರಚಾರ ನಡೆಸಿ ಅವರು ಮಾತನಾಡಿದರು.

‘ಪಶ್ಚಿಮ ಪದವೀಧರ ಮತಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಪದವೀಧರರು ಮತ ನೀಡಿ, ಆಶೀರ್ವಾದ ಮಾಡಬೇಕು. ಬರುವ ದಿನಗಳಲ್ಲಿ ವಿಶ್ವವಿದ್ಯಾಲಯದ ಈ ದೋಷಪೂರಿತ ಕಾಯ್ದೆಗೆ ಸಮಗ್ರವಾದ ತಿದ್ದುಪಡಿ ತರುವ ಪ್ರಯತ್ನಕ್ಕೆ ಪ್ರಾಮಾಣಿಕವಾಗಿ ಶ್ರಮಿಸುವೆ‌’ ಎಂದು ಹೇಳಿದರು.

ADVERTISEMENT

‘ಅನುದಾನಿತ ಪದವಿ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ನಿವೃತ್ತಿಯಾದ ಹುದ್ದೆಗಳಿಗೆ ಅನುಮತಿ ಪಡೆಯಲು ವರ್ಷವಿಡೀ ಕಾಯಬೇಕಾದ ಸ್ಥಿತಿ ಇದೆ. ಇದರ ಬದಲಾಗಿ, ನಿವೃತ್ತಿಯಾಗುವ ಹುದ್ದೆಯ ಪೂರ್ವದಲ್ಲಿ ಆ ಹುದ್ದೆಗೆ ಆರು ತಿಂಗಳ ಮೊದಲು ಅನುಮತಿ ನೀಡಿ, ನಿವೃತ್ತಿಯಾದ ಮರುದಿನವೇ ಆ ಹುದ್ದೆಯ ಕರ್ತವ್ಯಕ್ಕೆ ಹಾಜರಾಗುವಂತೆ ಮಾಡುವ ಕಾಯ್ದೆಯು ಜಾರಿಗೊಳಿಸಲು ಪ್ರಯತ್ನ ನಡೆಸುವೆ’ ಎಂದು ಹೇಳಿದರು.

ಪದವಿ ಮತ್ತು ಸ್ನಾತಕೋತ್ತರ ಪದವಿ ನಂತರ ಕೈಗೊಳ್ಳುವ ಸಂಶೋಧನೆಗಳು ಮತ್ತು ಯುಜಿಸಿ ಪ್ರಾಜೆಕ್ಟ್‌ಗಳು ಕೂಡ ವಾಸ್ತವ ಮತ್ತು ಪ್ರಾಯೋಗಿಕವಾಗಿ ಇರಬೇಕು. ಅವು ಸಾರ್ವಜನಿಕರು, ರೈತರಿಗೆ ಪೂರಕವಾಗಿ ಇರಬೇಕು. ಹೀಗೆ ಮಾಡಿದರೆ ಉನ್ನತ ಶಿಕ್ಷಣ ಪಡೆದ ಪದವೀಧರರಿಗೆ ಉತ್ತಮ ಅವಕಾಶಗಳು ದೊರೆಯುತ್ತವೆ ಎಂದು ಹೇಳಿದರು.

ಜೆ.ಟಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಪಿ.ಜಿ.ಪಾಟೀಲ ಅವರು ಮಾತನಾಡಿ, ಅನುದಾನಿತ ಮಹಾವಿದ್ಯಾಲಯಗಳಲ್ಲಿರುವ ಬೋಧಕ ವರ್ಗದವರು ಸಮಸ್ಯೆಗಳ ಬಗ್ಗೆ ತಿಳಿಸಿದರು.

ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ. ಎಂ.ಎಂ.ನರಗುಂದ ಮಾತನಾಡಿ, ‘ವಿದ್ಯಾವಂತ ಪದವೀಧರರಿಗೆ ಅವರ ಅರ್ಹತೆಗೆ ಅನುಗುಣವಾಗಿ ಉದ್ಯೋಗ ದೊರೆಯುವಂತಹ ಯೋಜನೆಗಳು ರೂಪುಗೊಳ್ಳಬೇಕು’ ಎಂದು ಅವರು ಹೇಳಿದರು.

ಪ್ರೊ. ಹನುಮಂತಗೌಡ ಆರ್. ಕಲ್ಮನಿ ಅವರು ಡಾ.ಆರ್.ಎಂ.ಕುಬೇರಪ್ಪ ಪರವಾಗಿ ಮತಯಾಚಿಸಿದರು. ಜೆ.ಟಿ ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಎಂ.ಎಫ್.ಹೊಂಬಳ, ಕೆ.ಜಿ.ಬೆಂತೂರು, ಎಸ್.ಹೆಚ್.ಹುಚ್ಚಗೊಂಡರ, ಎಸ್.ಎಸ್.ಬಾಗಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.