ADVERTISEMENT

ದೇಶದಲ್ಲಿ ಹೆಚ್ಚಾದ ಆರ್ಥಿಕ ಅಸಮಾನತೆ: ಡಾ.ಯತೀಂದ್ರ ಸಿದ್ಧರಾಮಯ್ಯ

ಕನಕ ಭವನ ಕಟ್ಟಡದ ಶಂಕು ಸ್ಥಾಪನೆ: ಡಾ.ಯತೀಂದ್ರ ಸಿದ್ಧರಾಮಯ್ಯ

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 3:57 IST
Last Updated 7 ಜುಲೈ 2025, 3:57 IST
ಕರ್ನಾಟಕ ರಾಜ್ಯ ಕುರುಬ ಸಂಘದ ಮುಂಡರಗಿ ತಾಲ್ಲೂಕು ಘಟಕವು ಹಮ್ಮಿಕೊಂಡಿದ್ದ ಕನಕ ಭವನ ಕಟ್ಟಡ ಶಂಕು ಸ್ಥಾಪನೆ ಸಮಾರಂಭವನ್ನು ಶಾಸಕ ಜಿ.ಎಸ್.ಪಾಟೀಲ ಉದ್ಘಾಟಿಸಿದರು
ಕರ್ನಾಟಕ ರಾಜ್ಯ ಕುರುಬ ಸಂಘದ ಮುಂಡರಗಿ ತಾಲ್ಲೂಕು ಘಟಕವು ಹಮ್ಮಿಕೊಂಡಿದ್ದ ಕನಕ ಭವನ ಕಟ್ಟಡ ಶಂಕು ಸ್ಥಾಪನೆ ಸಮಾರಂಭವನ್ನು ಶಾಸಕ ಜಿ.ಎಸ್.ಪಾಟೀಲ ಉದ್ಘಾಟಿಸಿದರು   

ಮುಂಡರಗಿ: ‘ಕೇಂದ್ರ ಸರ್ಕಾರ ಬಡವರನ್ನು ಕಡೆಗಣಿಸಿ ಕಾರ್ಪೋರೇಟ್ ವಲಯದವರನ್ನು ಮೆಚ್ಚಿಸಲು ಮುಂದಾಗಿದೆ. ಇದರಿಂದಾಗಿ ದೇಶದಲ್ಲಿ ಆರ್ಥಿಕ ಅಸಮಾನತೆ ಹೆಚ್ಚಾಗಿದ್ದು, ಬಡವರು ಬಡವರಾಗಿಯೇ ಉಳಿಯುವಂತಾಗಿದೆ’ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ಧರಾಮಯ್ಯ ಅಭಿಪ್ರಾಯ ಪಟ್ಟರು.

ಕರ್ನಾಟಕ ರಾಜ್ಯ ಕುರುಬ ಸಂಘದ ತಾಲ್ಲೂಕು ಘಟಕವು ಪಟ್ಟಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕನಕ ಭವನ ಕಟ್ಟಡದ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ದೇಶದ ಶೇ.40ರಷ್ಟು ಸಂಪತ್ತು ದೇಶದ ಜನಸಂಖ್ಯೆಯ ಶೇ.1ರಷ್ಟು ಜನರ ಕೈಯಲ್ಲಿದೆ. ಅದೇ ರೀತಿ ದೇಶದ ಶೇ.3ರಷ್ಟು ಸಂಪತ್ತು ದೇಶದ ಜನಸಂಖ್ಯೆಯ ಶೇ.55ರಷ್ಟು ಜನರಲ್ಲಿ ಹಂಚಿಹೋಗಿದೆ. ಈ ಕಾರಣದಿಂದ ಇಲ್ಲಿ ಬಡವರು ಬಡವರಾಗಿ ಹಾಗೂ ಶ್ರೀಮಂತರು ಶ್ರೀಮಂತರಾಗಿ ಬಾಳುವಂತಾಗಿದೆ’ ಎಂದರು.

ADVERTISEMENT

ಶಾಸಕ ಜಿ.ಎಸ್.ಪಾಟೀಲ ಮಾತನಾಡಿ, ‘ಗ್ಯಾರಂಟಿ ಯೋಜನೆಗೆ ವಾರ್ಷಿಕ ₹53ಕೋಟಿ ಹಣ ವಿನಿಯೋಗಿಸುವುದು ಸೇರಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರವು ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ರಾಜ್ಯ ಸರ್ಕಾರದ ಬಳಿ ಹಣವಿಲ್ಲ ಎಂದು ವಿರೋಧಿಗಳು ವಿನಾಃಕಾರಣ ಆರೋಪಿಸುತ್ತಿದ್ದಾರೆ’ ಎಂದು ತಿಳಿಸಿದರು.

ಶಾಸಕ ಡಾ.ಚಂದ್ರು ಲಮಾಣಿ ಮಾತನಾಡಿ, ‘ಜಿಲ್ಲೆಯ ಮುಂಡರಗಿ, ಶಿರಹಟ್ಟಿ ನೀರು ಒದಗಿಸುವ ಏತ ನೀರಾವರಿ ಯೋಜನೆಯು ನೆನೆಗುದಿಗೆ ಬಿದ್ದಿದ್ದು, ಅದನ್ನು ಪುನರಾರಂಭಿಸಲು ಮುಖ್ಯಮಂತ್ರಿಗಳಿಂದ ಅಗತ್ಯ ಅನುದಾನ ಕೊಡಿಸಬೇಕು’ ಎಂದು ಮನವಿ ಮಾಡಿಕೊಂಡರು.

ಕುರುಬ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ ಮುಂಡವಾಡ ಅಧ್ಯಕ್ಷತೆ ವಹಿಸಿದ್ದರು. ನಿಂಗಪ್ಪ ಗುಡ್ಡದ ಪ್ರಾರ್ಥನೆ ಹಾಡಿದರು. ಕಾರ್ಯದರ್ಶಿ ರಾಘವೇಂದ್ರ ಕುರಿಯವರ ಸರ್ವರನ್ನು ಸ್ವಾಗತಿಸಿದರು. ಡಿ.ಡಿ ಮೋರನಾಳ ಮಾತನಾಡಿದರು. ಷಣ್ಮುಖ ಕುರಿ ನಿರೂಪಿಸಿದರು. ಶಿವಲಿಂಗಯ್ಯ ಗುರುವಿನ, ಪಕ್ಕೀರಪ್ಪ ಹೆಬಸೂರು, ವೈ.ಎನ್. ಗೌಡರ, ವಾಸಣ್ಣ ಕುರಡಗಿ, ರಾಮಕೃಷ್ಣ ದೊಡ್ಡಮನಿ, ಎಚ್.ಎಸ್. ಸೋಂಪೂರ, ಹಾಜಂಪೀರ ಖಾದ್ರಿ, ರುದ್ರಗೌಡ ಪಾಟೀಲ, ಹೇಮಂತಗೌಡ ಪಾಟೀಲ, ಹೇಮಗಿರೀಶ ಹಾವಿನಾಳ, ಡಾ.ಬಿ.ಎಸ್. ಮೇಟಿ, ಎಸ್.ಡಿ. ಮಕಾಂದಾರ, ಶಾಂತಾ ಬಳ್ಳಾರಿ, ಚಂದ್ರಹಾಸ ಉಳ್ಳಾಗಡ್ಡಿ ಇದ್ದರು.

‘ಅಸಮಾನತೆ ಹೋಗಲಾಡಿಸಲು ಜಾತಿಗಣತಿ’

ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿ ಅಸಮಾನತೆ ಎದ್ದು ಕಾಣುತ್ತಿದ್ದು ನಿವಾರಿಸುವ ನಿಟ್ಟಿನಲ್ಲಿ ಸಿದ್ಧರಾಮಯ್ಯನವರು ಹಿಂದುಳಿದ ವರ್ಗಗಳ ಜಾತಿ ಗಣತಿ ಮಾಡಿಸಿದ್ದರು. ಶೇ.75ರಷ್ಟು ಮೀಸಲಾತಿ ಹೆಚ್ಚಳಕ್ಕೆ ವರದಿ ಶಿಫಾರಸ್ಸು ಮಾಡಿತ್ತು. ವರದಿಯಿಂದ ಕೆಲವರು ಅಸಮಾಧಾನಗೊಂಡಿದ್ದರು. ಜೊತೆಗೆ ವರದಿಯಿಂದ ಜಾತಿ ಜಾತಿಗಳ ನಡುವೆ ಸಂಘರ್ಷ ಹೆಚ್ಚಾಗುವ ಸಾಧ್ಯತೆ ಇತ್ತು. ಈಗ ಪುನಃ ಎಲ್ಲರನ್ನು ವಿಶ್ವಾಸಕ್ಕೆ ತಗೆದುಕೊಂಡು ಜಾತಿಗಣತಿ ಮಾಡಲಾಗುವುದು ಎಂದು ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.