ಶಿರಹಟ್ಟಿ: ಪ್ರಸ್ತುತ ಬಿಸಿಲ ಬೇಗೆಯಲ್ಲಿ ಬೇಯುತ್ತಿರುವ ತಾಲ್ಲೂಕಿನ ಜನತೆಗೆ ನೀರಿನ ಅಭಾವದ ಬಿಸಿಯೂ ತಟ್ಟುತ್ತಿದೆ. ತಾಲ್ಲೂಕು ಕೇಂದ್ರ ಸೇರಿದಂತೆ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ತಲೆದೋರಿದ್ದು, ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದಲ್ಲಿ ಪ್ರತಿಯೊಂದು ಗ್ರಾಮೀಣ ಪ್ರದೇಶಕ್ಕೂ ನೀರಿನ ಅಭಾವ ಉಂಟಾಗದ ಹಾಗೇ ಮುನ್ನೆಚ್ಚರಿಕೆ ವಹಿಸಲು ಸರ್ಕಾರ ನೀರಿನಂತೆ ಅನುದಾನ ಖರ್ಚು ಮಾಡುತ್ತಿದ್ದರೂ ಸಮಸ್ಯೆ ಮಾತ್ರ ಕಡಿಮೆ ಆಗಿಲ್ಲ. ಸ್ಥಳೀಯ ಆಡಳಿತಗಳು ವಿದ್ಯುತ್ ಕಡಿತದ ನೆಪ ಹೇಳುತ್ತಿದ್ದು, ದಿನಬಳಕೆ ಹಾಗೂ ಶುದ್ಧ ಕುಡಿಯುವ ನೀರಿಗಾಗಿ ಸಾರ್ವಜನಿಕರ ಪರದಾಟ ಹೇಳತೀರದಾಗಿದೆ.
ವಿದ್ಯುತ್ ಕಣ್ಣಾಮುಚ್ಚಾಲೆ ಆಟ: ಪ್ರತಿಯೊಂದು ಗ್ರಾಮಕ್ಕೆ ನೀರಿನ ಸರಬರಾಜು ಸರಾಗವಾಗಿ ಸಾಗಲು ವಿದ್ಯುತ್ ಅತ್ಯವಶ್ಯಕವಾಗಿದೆ. ವಿದ್ಯುತ್ ವ್ಯತ್ಯಯದಿಂದಾಗಿ ಓವರ್ ಹೆಡ್ ಟ್ಯಾಂಕ್‌ನಲ್ಲಿ ನೀರು ಶೇಖರಣೆ ಮಾಡಲಾಗುತ್ತಿಲ್ಲ. ಇದರಿಂದಾಗಿ, ನಿಯಮಿತವಾಗಿ ನೀರು ಸರಬರಾಜು ಆಗುತ್ತಿಲ್ಲ. ಜನರು ನೀರಿನ ಸಮಸ್ಯೆ ಬಗ್ಗೆ ಕೇಳಿದಾಗಲೆಲ್ಲಾ ಪಂಚಾಯಿತಿಯ ವಾಟರ್ ಮ್ಯಾನ್, ‘ಕರೆಂಟ್ ಲೇಟಾಗಿ ಬಂದೈತಿ’ ಎಂಬ ಮಾತು ಹೇಳುತ್ತಾನೆ.
ಪಟ್ಟಣದಲ್ಲಿ ಎಂಟು ದಿನಗಳಿಗೊಮ್ಮೆ ಬಿಡುವ ನೀರನ್ನು ಕರೆಂಟಿನ ಸಮಸ್ಯೆಯಿಂದಾಗಿ 10-12 ದಿನಗಳಿಗೊಮ್ಮೆ ಪೂರೈಕೆ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶಗಳ ಸ್ಥಿತಿಗತಿ ಇದಕ್ಕೆ ಹೊರತಾಗಿಲ್ಲ.
ನೀರಿನ ಅಭಾವ: ಸ್ಥಳೀಯ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಒಟ್ಟು 18 ವಾರ್ಡ್‌ಗಳಿದ್ದು, 8 ದಿನಕ್ಕೊಮ್ಮೆ ನೀರು ಪೂರೈಕೆ ಆಗುತ್ತಿದೆ. ಕೆಲವೊಮ್ಮೆ ವಿದ್ಯುತ್ ಸಮಸ್ಯೆಯಿಂದ 10-12 ದಿನಗಳವರೆಗೆ ನೀರು ಬರುವುದಿಲ್ಲ. ಇದರಿಂದ ನೀರಿನ ಸಂಗ್ರಹಣೆ ಮಾಡುವಲ್ಲಿ ಜನರು ಹೈರಾಣಾಗಿದ್ದಾರೆ. ನೀರು ಬಂದಾಗೊಮ್ಮೆ ಗುಂಡಿ, ಡಬರಿಗಳಲ್ಲಿಯೂ ಸಹ ನೀರು ಹಿಡಿದಿಟ್ಟುಕೊಳ್ಳುವ ಅನಿವಾರ್ಯತೆ ಎದುರಾಗಿದೆ.
ಪಂಚಾಯಿತಿಯಿಂದ ಪೈಪ್‌ಲೈನ್ ಆಗದ ವಿಜಯನಗರ, ಸಿದ್ರಾಮೇಶ್ವರ ನಗರ, ಪುಟ್ಟರಾಜಗವಾಯಿ ನಗರ, ಏಳುಕೋಟಿ ನಗರ ಸೇರಿದಂತೆ ಇತರೆ ಕೆಲ ಬಡಾವಣೆಗಳಲ್ಲಿ ನಿವಾಸಿಗಳು ಟ್ಯಾಂಕರ್ ಮೂಲಕ ನೀರು ತರಿಸಿಕೊಳ್ಳುತ್ತಿದ್ದಾರೆ. ಡಿಬಿಒಟಿ ಹೊರತುಪಡಿಸಿ ಪಂಚಾಯಿತಿ ವ್ಯಾಪ್ತಿಯಲ್ಲಿ ಖಾನಾಪುರ ಭಾಗದಲ್ಲಿ 11, ಯಲಿಶಿರೂರು ರಸ್ತೆಯಲ್ಲಿ 7 ಕೊಳವೆ ಬಾವಿಗಳ ಮೂಲಕ ನೀರು ಸಂಗ್ರಹಿಸಲಾಗುತ್ತಿದೆ. ಹಂಗನಕಟ್ಟಿ ರಸ್ತೆಯಲ್ಲಿನ ನೂತನವಾಗಿ ಕೊರೆಯಿಸಿದ 4 ಬೋರ್‌ವೆಲ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದರೆ ನೀರಿನ ಬವಣೆ ಕಡಿಮೆ ಮಾಡಬಹುದು.
ಶುದ್ಧ ಕುಡಿಯುವ ನೀರಿನ ಘಟಕಗಳು
ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿರುವ ಶುದ್ಧ ನೀರಿನ ಘಟಕಗಳು ದುರಸ್ತಿಯಲ್ಲಿದ್ದು, ಶುದ್ಧ ನೀರಿಗಾಗಿ ಜನರು ಪರಿತಪಿಸುವಂತಾಗಿದೆ.
ತಾಲ್ಲೂಕಿನಲ್ಲಿ ಪ್ರಾರಂಭವಾದ 56 ಶುದ್ಧ ಕುಡಿಯುವ ನೀರಿನ ಘಟಕಗಳು ಹೆಸರಿಗೆ ಮಾತ್ರ ಎಂಬಂತಿವೆ. ಇಲಾಖೆಯ ಮಾಹಿತಿ ಪ್ರಕಾರ ತಾಲ್ಲೂಕಿನ ಸುಗನಹಳ್ಳಿ, ಸೇವಾನಗರ, ಕೊಂಚಿಗೇರಿ, ಹಡಗಲಿ, ಬೆಳಗಟ್ಟಿ, ನವೇ ಭಾವನೂರು, ಶಿವಾಜಿನಗರ, ಎಂ ಹೊಸಳ್ಳಿ, ಹೆಬ್ಬಾಳ ಸೇರಿದಂತೆ ಒಟ್ಟು 10 ಗ್ರಾಮದಲ್ಲಿ ನೀರಿನ ಘಟಕಗಳು ಸಂಪೂರ್ಣ ಸ್ಥಗಿತಗೊಂಡಿವೆ. ಇದನ್ನು ಹೊರತುಪಡಿಸಿ ಏಜೆನ್ಸಿಗಳ ತಾಂತ್ರಿಕ ತೊಂದರೆಯಿಂದಾಗಿ ಬಹುತೇಕ ಘಟಕಗಳು ಬಂದ್ ಆಗಿದ್ದು, ಇದರಿಂದ ಗ್ರಾಮೀಣರಿಗೆ ಶುದ್ಧ ನೀರು ಮರೀಚಿಕೆಯಾಗಿದೆ.
ಫ್ಲೋರೈಡ್ ನೀರೇ ಆಧಾರ: ಗ್ರಾಮಗಳಲ್ಲಿನ ಶುದ್ಧ ನೀರಿನ ಘಟಕಗಳು ಸ್ಥಗಿತವಾಗಿರುವುದರಿಂದ ಬಹುತೇಕ ಗ್ರಾಮಸ್ಥರು ಫ್ಲೋರೈಡ್‌ಯುಕ್ತ ನೀರನ್ನೇ ಸೇವಿಸುತ್ತಿದ್ದಾರೆ. ಇದರಿಂದಾಗಿ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದ್ದು ಮಂಡಿನೋವು, ಎಲುಬು-ಕೀಲು ನೋವು, ಹಲ್ಲು ನೋವು ಕಾಡುತ್ತಿದೆ. ಅಲ್ಲದೇ ಫ್ಲೋರೈಡ್‌ಯುಕ್ತ ನೀರನ್ನು ಚಿಕ್ಕ ಮಕ್ಕಳು ಸೇವನೆ ಮಾಡುವುದರಿಂದ ಬೆಳವಣಿಗೆ ಕುಂಠಿತ ಹಾಗೂ ಹಲ್ಲುಗಳು ಮೇಲೆ ಶಾಶ್ವತ ಕಲೆ ಉಂಟಾಗುತ್ತಿವೆ. ಇದರಿಂದ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗಬಹುದು ಎಂಬ ಆತಂಕ ಪೋಷಕರನ್ನು ಕಾಡುತ್ತಿದೆ.
ಪೈಪ್‌ಲೈನ್ ಅಗೆತ; ನೀರು ಸ್ಥಗಿತ
ಗದಗ-ಹೊನ್ನಾಳಿ ನೂತನ ರಾಜ್ಯ ಹೆದ್ದಾರಿ ಶಿರಹಟ್ಟಿ ಮತಕ್ಷೇತ್ರದಲ್ಲಿ ಪೈಪ್‌ಲೈನ್ ಹಾದು ಹೋಗಿದ್ದು ಅದರ ಕಾಮಗಾರಿ ಪ್ರಗತಿಯಲ್ಲಿದೆ. ನಾಲ್ಕು ವರ್ಷಗಳ ಹಿಂದೆ ಪ್ರಾರಂಭವಾದ ಈ ರಸ್ತೆ ಅಭಿವೃದ್ಧಿ ಕಾಮಗಾರಿಯಲ್ಲಿ ತುಂಗಭದ್ರಾ ನದಿಯಿಂದ ಸರಬರಾಜುಗೊಳ್ಳುತ್ತಿದ್ದ ಪೈಪ್‌ಲೈನ್ ಅನ್ನು ಹೊರತೆಗೆದು ಪೈಪ್‌ಗಳನ್ನು ಹಾಗೇ ಬಿಡಲಾಗಿದೆ. ಬೆಳ್ಳಟ್ಟಿ ತಂಗೋಡ ಹೊಸೂರು ಸೇರಿದಂತೆ ಅಲ್ಲಲ್ಲಿ ಪೈಪ್ ತೆಗೆಯಲಾಗಿದ್ದು ಸಂಬಂಧಪಟ್ಟ ಗುತ್ತಿಗೆದಾರರಾಗಲಿ ಅಧಿಕಾರಿಗಳಾಗಲಿ ಇದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಇದರಿಂದ ಹೊಳೆಇಟಗಿ ವಡವಿ ಹೊಸೂರು ಬೆಳ್ಳಟ್ಟಿ ಸುಗನಹಳ್ಳಿ ಶಿರಹಟ್ಟಿ ಮುಳಗುಂದ ಜನರಿಗೆ ಸರಬರಾಜು ಆಗುತ್ತಿದ್ದ ನದಿ ನೀರು ಸದ್ಯ ಸ್ಥಗಿತಗೊಂಡಿದೆ.
ನೀರಿನ ಸಂಪರ್ಕ ಕಲ್ಪಿಸಲು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಟ್ಯಾಂಕರ್ ಮೂಲಕ ನೀರನ್ನು ತರಿಸಿಕೊಳ್ಳುವ ಅನಿವಾರ್ಯತೆ ಬಂದೊದಗಿದೆ.–ಹಸನ್ ತಹಶೀಲ್ದಾರ, ಸಿದ್ರಾಮೇಶ್ವರ ನಗರದ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.