ನರೇಗಲ್: ಪಟ್ಟಣದ 3ನೇ ವಾರ್ಡಿನ ಜಕ್ಕಲಿ ರೋಡ್ ಆಶ್ರಯ ಕಾಲೋನಿಯ ಹಿಂದುಗಡೆ ಭಾಗದ ಓಣಿಯ ನಿವಾಸಿಗಳಿಗೆ ನೀರು ಪೂರೈಕೆ ಮಾಡಲು ಪಟ್ಟಣ ಪಂಚಾಯ್ತಿ ವತಿಯಿಂದ ಕೈಗೊಳ್ಳಲಾಗಿದ್ದ ಪೈಪ್ ಲೈನ್ ಜೋಡಣೆ ಕಾಮಗಾರಿ ಅಪೂರ್ಣ ಸ್ಥಿತಿಯಲ್ಲೇ ಕೈಬಿಟ್ಟಿರುವ ಕಾರಣ ಜನರು ಪರದಾಡುವಂತಾಗಿದೆ.
ನೀರಿನ ಸಮಸ್ಯೆ ಕುರಿತು ಮಾಧ್ಯಮಗಳಲ್ಲಿ ವರದಿಯಾದ ಬಳಿಕ ಎಚ್ಚೆತ್ತುಕೊಂಡ ಅಧಿಕಾರಿಗಳು ಹೊಸದಾಗಿ ಟೆಂಡರ್ ಆಹ್ವಾನಿಸಿ ಕಾಮಗಾರಿಯನ್ನು ಆರಂಭಿಸಿದ್ದರು. ಪಟ್ಟಣದ ಹೆಸ್ಕಾಂ ಕಚೇರಿಯಿಂದ ಆಶ್ರಯ ಕಾಲೋನಿವರೆಗೆ ಪೈಪ್ ಲೈನ್ ಅಳವಡಿಸುವ ಕಾಮಗಾರಿಯನ್ನು ಡಿ.21ಕ್ಕೆ ಜೆಸಿಬಿ ಮೂಲಕ ಆರಂಭವಾಗಿತ್ತು. ಆನಂತರ ಕಾಮಗಾರಿಯ ವೆಚ್ಚ ಕಡಿಮೆಯಾಗಿದೆ ಎನ್ನುವ ನೆಪದ ಮೇಲೆ ಜಕ್ಕಲಿ ರಸ್ತೆಯ ಕಾಮತ್ ಅವರ ಮನೆಯವರೆಗೆ ಮಾತ್ರ ಕಾಮಗಾರಿ ಮಾಡಲಾಗಿದೆ.
‘ಇನ್ನಷ್ಟು ದೂರದಲ್ಲಿರುವ ನಿವಾಸಿಗಳ ಓಣಿಯವರೆಗೆ ಮುಂದುವರಿಸದೇ ಅರ್ಧಕ್ಕೆ ಕಾಮಗಾರಿ ಕೈಬಿಡಲಾಗಿದೆ. ಇದರಿಂದಾಗಿ ಬೇಸಿಗೆ ಆರಂಭದಲ್ಲೇ ಜನರು ಕುಡಿಯುವ ನೀರಿನ ಸಮಸ್ಯೆಗೆ ಎದುರಿಸುತ್ತಿದ್ದಾರೆ. ಕೂಡಲೇ ಪೈಪ್ ಲೈನ್ ಅಳವಡಿಸಿ ನೀರು ಪೂರೈಕೆ ಮಾಡಬೇಕು’ ಎಂದು ನಿವಾಸಿ ಮಾರುತೆಪ್ಪ ಚಳ್ಳಮರದ ಆಗ್ರಹಿಸಿದರು.
‘ಶಾಸಕರು, ಡಿಸಿಯವರು ನೀರು ಪೂರೈಕೆ ಸಮಸ್ಯೆ ಆಗದಂತೆ ಕ್ರಮ ಜರುಗಿಸಲು ಸೂಚನೆ ನೀಡಿದ್ದರೂ ಕಾಮಗಾರಿಯನ್ನು ಪೂರ್ಣಗೊಳಿಸದೇ ಅರ್ಧಕ್ಕೆ ಕೈಬಿಟ್ಟಿದ್ದಾರೆ. ಇದರಿಂದ ಹಣವೂ ವ್ಯರ್ಥವಾಗುತ್ತದೆ ಹಾಗೂ ಜನರಿಗೆ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಆದಷ್ಟು ಬೇಗ ಕುಡಿಯುವ ನೀರಿನ ಕಾಮಗಾರಿಯನ್ನು ಪೂರ್ಣಗೊಳಿಸಬೇಕು‘ ಎಂದು ನಿವಾಸಿಗಳಾದ ಮಾರುತಿ ರಾಥೋಡ್, ಶರಣಪ್ಪ ಕೊಂಡಿ, ಚಂದ್ರಪ್ಪ ಬೂದಗುಂಪಿ, ಗುಂಡಪ್ಪ ಮಳ್ಳಿ ಆಗ್ರಹಿಸಿದರು.
ಈ ಕುರಿತು ಪ್ರತಿಕ್ರಿಯೆ ನೀಡಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಮೇಶ ಎ. ಹೊಸಮನಿ, ‘ಕಾಮಗಾರಿಯನ್ನು ಅರ್ಧಕ್ಕೆ ಬಿಡಲು ಬರುವುದಿಲ್ಲ. ಬೇರೆ ಕಾಮಗಾರಿಯ ಜೊತೆಯಲ್ಲಿ ಇದನ್ನು ಪೂರ್ಣಗೊಳಿಸಲಾಗುತ್ತದೆ. ಸದ್ಯದಲ್ಲೇ ಪೈಪ್‌ಲೈನ್ ಅಳವಡಿಸಲಾಗುವುದು. ಜನರಿಗೆ ತೊಂದರೆ ಆಗದಂತೆ ಜಾಗೃತಿ ವಹಿಸಲಾಗುವುದು‘ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.