ADVERTISEMENT

ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 5:33 IST
Last Updated 19 ಫೆಬ್ರುವರಿ 2026, 5:33 IST

ಮುಂಡರಗಿ: ತಾಲ್ಲೂಕಿನ‌ ಶಿಂಗಟಾಲೂರು ಗ್ರಾಮದ ರಾಮಲಿಂಗೇಶ್ವರ ದೇವಾಲಯದ ಈಶ್ವರ, ನಂದಿ ಹಾಗೂ ಹೊನ್ನತ್ತೆಮ್ಮನ ಮೂರ್ತಿಗಳನ್ನು ಮಹಾಶಿವರಾತ್ರಿಯಂದು ಭಗ್ನಗೊಳಿಸಿರುವ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ‌ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಶಿಂಗಟಾಲೂರ ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್‌ ಅಧ್ಯಕ್ಷ ಕೆ.ವಿ. ಹಂಚಿನಾಳ ಒತ್ತಾಯಿಸಿದ್ದಾರೆ.

ಘಟನೆ ನಡೆದು ನಾಲ್ಕು ದಿನಗಳಾದರೂ ಕೃತ್ಯವೆಸಗಿದ ದುಷ್ಕರ್ಮಿಗಳನ್ನು ಬಂಧಿಸದಿರುವುದು ನೋವಿನ ಸಂಗತಿ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಚುರುಕುಗೊಳಿಸಬೇಕು. ದುಷ್ಕರ್ಮಿಗಳನ್ನು ಬಂಧಿಸಿ ಅವರಿಗೆ ಶಿಕ್ಷೆ ಕೊಡಿಸದಿದ್ದರೆ ಇಂತಹ ಪ್ರಕರಣಗಳು ಜಿಲ್ಲೆಯಾದ್ಯಂತ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ದುಷ್ಕರ್ಮಿಗಳು ಹಿಂದೂ ದೇವಸ್ಥಾನಗಳನ್ನೇ ಗುರಿಯಾಗಿಸಿಕೊಂಡು ಇಂತಹ ಹೀನ ಕೃತ್ಯವ್ಯಸಗುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಇಂತಹ ಘಟನೆಗಳಿಂದ ಹಿಂದೂ ಸಮಾಜದವರ ಭಾವನೆಗಳಿಗೆ ಆಘಾತವಾಗಿದ್ದು, ಇಂತಹ ಪ್ರಕರಣಗಳು ಪುನಃ ಮರುಕಳಿಸದಂತೆ ಪೊಲೀಸರು ಮುಂಜಾಗ್ರತೆ ವಹಿಸಬೇಕು ಎಂದು ಮನವಿ ಮಾಡಿಕೊಂಡರು.

ADVERTISEMENT

ಕಠಿಣ ಶಿಕ್ಷೆಗೆ ಆಗ್ರಹ: ಹಿಂದು ಜನರ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶದಿಂದಲೇ ದುಷ್ಕರ್ಮಿಗಳು ಶಿಂಗಟಾಲೂರ ಗ್ರಾಮದ ರಾಮಲಿಂಗೇಶ್ವರ ದೇವಾಲಯದ ಮೂರ್ತಿಗಳನ್ನು ಭಗ್ನಗೊಳಿಸಿದ್ದಾರೆ. ಮಹಾಶಿವರಾತ್ರಿಯಂದು ಇಂತಹ ಕೃತ್ಯ ಎಸಗುವವರ ಹಿಂದೆ ಸಮಾಜದಲ್ಲಿ ಅಶಾಂತಿ ಮೂಡಿಸುವ ಉದ್ದೇಶವಿರುತ್ತದೆ. ಪೊಲೀಸರು ತಕ್ಷಣ ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಅವರಿಗೆ ಕಠಿಣ ಶಿಕ್ಷಿ ಕೊಡಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಮಂಜುನಾಥ ಇಟಗಿ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.