
ಲಕ್ಷ್ಮೇಶ್ವರ: ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ತಾಲ್ಲೂಕಿನ ಶಿಗ್ಲಿಯಲ್ಲಿ ಗ್ರಾಮ ದೇವತೆ ದ್ಯಾಮವ್ವ ದೇವಿಯ ಜಾತ್ರೆ ಕಳೆದ ಮೂರು ದಿನಗಳಿಂದ ಅದ್ಧೂರಿಯಾಗಿ ನಡೆಯುತ್ತಿದ್ದು, ದೇವಿಯ ಮೂರ್ತಿಯ ಮೆರವಣಿಗೆ ಮಂಗಳವಾರ ಭರ್ಜರಿಯಾಗಿ ಜರುಗಿತು.
ಸಂಜೆ 7ಕ್ಕೆ ಆರಂಭವಾದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಉತ್ತರ ಕರ್ನಾಟಕದ ಜಾನಪದ ಕಲಾ ತಂಡ, ಡೊಳ್ಳಿನ ಮೇಳಗಳು ಮೆರವಣಿಗೆಯ ರಂಗು ಹೆಚ್ಚಿಸಿದ್ದವು.
ಇಡೀ ಊರು ದ್ವೀಪಾಲಂಕಾರಗಳಿಂದ ಕಂಗೊಳಿಸುತ್ತಿತ್ತು. ಗ್ರಾಮಸ್ಥರು ತಮ್ಮ ಮನೆಗಳ ಎದುರು ರಂಗೋಲಿ ಬಿಡಿಸಿದ್ದು ಗಮನ ಸೆಳೆಯಿತು.
ಮೆರವಣಿಗೆ ಚೌತಮನೆ ಕಟ್ಟೆ ಸಮೀಪ ಆಗಮಿಸುತ್ತಿದ್ದಂತೆ ಪಟಾಕಿಗಳನ್ನು ಸಿಡಿಸಲಾಯಿತು. ನೆರೆದಿದ್ದ ಸಾವಿರಾರು ಜನರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಉಧೋ ಉಧೋ ಎಂಬ ಘೊಷಣೆ ಎಲ್ಲೆಡೆ ಮೊಳಗಿತು. ಶಿಗ್ಲಿ ಸೇರಿದಂತೆ ಲಕ್ಷ್ಮೇಶ್ವರ, ಗೋವನಾಳ, ದೊಡ್ಡೂರು, ಸೂರಣಗಿ, ಬಾಲೆಹೊಸೂರು, ರಾಮಗೇರಿ ಸೇರಿದಂತೆ ಮತ್ತಿತರ ಊರುಗಳಿಂದ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.