ADVERTISEMENT

ನೈಸರ್ಗಿಕ ಬಣ್ಣ ತಯಾರಿಸಿದ ವಿಶೇಷ ಮಕ್ಕಳು

ಬಳಸಿ ಬಿಸಾಡುವ ಹೂಗಳಿಂದ ಸಿದ್ದವಾಗುವ ಬಣ್ಣ; ಹೋಳಿಗೆ ಬಳಸುವಂತೆ ಮನವಿ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 3:46 IST
Last Updated 1 ಮಾರ್ಚ್ 2026, 3:46 IST
ಲಕ್ಷ್ಮೇಶ್ವರದ ಅರಳು ಬುದ್ಧಿಮಾಂದ್ಯ ಮಕ್ಕಳ ವಸತಿರಹಿತ ಶಾಲೆ ಮಕ್ಕಳು ತಯಾರಿಸಿದ ಪರಿಸರಸ್ನೇಹಿ ಬಣ್ಣದೊಂದಿಗೆ ಸಂಭ್ರಮಿಸುತ್ತಿರುವುದು
ಲಕ್ಷ್ಮೇಶ್ವರದ ಅರಳು ಬುದ್ಧಿಮಾಂದ್ಯ ಮಕ್ಕಳ ವಸತಿರಹಿತ ಶಾಲೆ ಮಕ್ಕಳು ತಯಾರಿಸಿದ ಪರಿಸರಸ್ನೇಹಿ ಬಣ್ಣದೊಂದಿಗೆ ಸಂಭ್ರಮಿಸುತ್ತಿರುವುದು   

ಲಕ್ಷ್ಮೇಶ್ವರ: ಪಟ್ಟಣದ ಸೋಮೇಶ್ವರ ರೈತರ ಸಹಕಾರಿ ನೂಲಿನ ಗಿರಣಿಯ ಆಡಳಿತ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅರಳು ಬುದ್ಧಿಮಾಂದ್ಯ ಮಕ್ಕಳ ವಸತಿರಹಿತ ಶಾಲೆ ಮಕ್ಕಳು ದೇವರ ಪೂಜೆಗೆ ಬಳಸಿ ಬಿಸಾಡುವ ಹೂಗಳಿಂದ ನೈಸರ್ಗಿಕ ಬಣ್ಣ ತಯಾರಿಸಿ ಪರಿಸರ ಕಾಳಜಿ ಮೆರೆದಿದ್ದಾರೆ.

2014ರಲ್ಲಿ ಅರಳು ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ 1960ರ ಕಾಯ್ದೆ ಪ್ರಕಾರ ನೋಂದಣಿ ಆಗಿದ್ದು ಈ ಸಂಸ್ಥೆಯಡಿ 2015-16ನೇ ಸಾಲಿನಲ್ಲಿ ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅನುಮತಿಯೊಂದಿಗೆ ಅರಳು ವಿಶೇಷ ಅಗತ್ಯತೆಯುಳ್ಳ ಬುದ್ಧಿಮಾಂದ್ಯ ಮಕ್ಕಳ ವಸತಿರಹಿತ ಶಾಲೆ ಆರಂಭಗೊಂಡಿತು. ಆರಂಭದಲ್ಲಿ ಕೇವಲ 12 ಮಕ್ಕಳಿದ್ದ ಶಾಲೆಯಲ್ಲಿ ಸದ್ಯ 70 ಮಕ್ಕಳು ಉಚಿತ ಶಿಕ್ಷಣ ಮತ್ತು ವೃತ್ತಿಪೂರ್ವ ತರಬೇತಿ ಪಡೆಯುತ್ತಿದ್ದಾರೆ.

ಈ ವಿಶೇಷ ಶಾಲೆಯ ಮಕ್ಕಳು ಇದೀಗ ದೇವಸ್ಥಾನಗಳಲ್ಲಿ ದೇವರ ಪೂಜೆಗೆ ಬಳಸಿದ ಹೂಗಳನ್ನು ಮರುಬಳಕೆ ಮಾಡಿ ಪರಿಸರ ಸ್ನೇಹಿ ಉತ್ಪನ್ನಗಳಾದ ಅಗರಬತ್ತಿ, ಧೂಪ, ಹೋಳಿ ಬಣ್ಣ, ರಂಗೋಲಿ, ಕುಂಕುಮಗಳನ್ನು ತಯಾರಿಸಿ ತಮ್ಮ ಕೌಶಲ ಮೆರೆದಿದ್ದಾರೆ. ಬಳಕೆ ಮಾಡಿದ ಹೂಗಳಿಂದ ನೈಸರ್ಗಿಕ ಬಣ್ಣಗಳನ್ನು ಈಗಾಗಲೇ ಸಿದ್ಧಪಡಿಸಿದ್ದಾರೆ.

ADVERTISEMENT

ಬುದ್ಧಿಮಾಂದ್ಯ ಮಕ್ಕಳು ತಯಾರಿಸಿರುವ ಪರಿಸರ ಸ್ನೇಹಿ ಬಣ್ಣ ಕೆ.ಜಿ.ಗೆ ₹600ಕ್ಕೆ ಮಾರಾಟ ಮಾಡಲಾಗುತ್ತದೆ. ಸಮಾಜಕ್ಕೆ ಒಳ್ಳೆಯದನ್ನು ಹಾಗೂ ಬುದ್ಧಿಮಾಂದ್ಯ ಮಕ್ಕಳ ಕಲ್ಯಾಣ ಬಯಸುವವರು ಅವರು ಸಿದ್ಧಪಡಿಸಿದ ಪರಿಸರ ಸ್ನೇಹಿ ಬಣ್ಣವನ್ನು ರಂಗ ಪಂಚಮಿಯಂದು ಬಳಸಿದರೆ ಪರಿಸರಕ್ಕೂ ಅನುಕೂಲ ಆಗುವುದಲ್ಲದೆ ಬುದ್ಧಿಮಾಂದ್ಯ ಮಕ್ಕಳಿಗೆ ಆರ್ಥಿಕವಾಗಿ ಸಹಾಯ ಮಾಡಿದಂತಾಗುತ್ತದೆ ಎನ್ನುತ್ತಾರೆ ಸಂಸ್ಥೆಯ ಸಿಬ್ಬಂದಿ.

‘ದೇವಸ್ಥಾನಗಳಲ್ಲಿ ಪೂಜೆಗೆ ಬಳಸಿದ ಹೂಗಳಿಂದ ನಮ್ಮ ಸಂಸ್ಥೆಯ ಮಕ್ಕಳು ಪರಿಸರಸ್ನೇಹಿ ಬಣ್ಣ ತಯಾರಿಸಿದ್ದಾರೆ. ಈ ಬಣ್ಣ ಬಳಸುವುದರಿಂದ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಆಗುವುದಿಲ್ಲ. ಅಲ್ಲದೆ ಅಂಗವಿಕಲ ಮಕ್ಕಳಿಗೂ ಆರ್ಥಿಕ ಸಹಾಯ ಮಾಡಿದಂತಾಗುತ್ತದೆ. ಸಾರ್ವಜನಿಕರು ನಾವು ಸಿದ್ಧಪಡಿಸಿದ ಪರಿಸರಸ್ನೇಹಿ ಬಣ್ಣ ಬಳಸಬೇಕು’ ಎಂದು ಸಂಸ್ಥೆ ಕಾರ್ಯದರ್ಶಿ ಮತ್ತು ಶಾಲೆಯ ಪ್ರಾಚಾರ್ಯರಾದ ನೀಲಮ್ಮ ಎಂ. ದಾಸಪ್ಪನವರ ಮನವಿ ಮಾಡಿದರು.

ಉಚಿತ ಶಿಕ್ಷಣ ಮತ್ತು ವೃತ್ತಿಪೂರ್ವ ತರಬೇತಿ ಪಡೆದ ಶಾಲೆ ಮಕ್ಕಳು ಶುದ್ಧ ಅರಿಷಿಣ ಪುಡಿ, ದನಿಯಾ ಪೌಡರ್, ಗ್ಲಾಸ್ ಕ್ಯಾಂಡಲ್, ಟಿನ್ ಕ್ಯಾಂಡಲ್, ವಿವಿಧ ಬಗೆಯ ಹೂ ಮಾಲೆಗಳು, ಮುತ್ತಿನ ಹಾರಗಳು, ದೀಪಗಳನ್ನು ತಯಾರಿಸುತ್ತಾರೆ. ಬುದ್ಧಿಮಾಂದ್ಯ ಮಕ್ಕಳಿಗೆ ಅನುಕಂಪಕ್ಕಿಂತ ಅವಕಾಶ ಕೊಟ್ಟಾಗ ಅವರೂ ಕೂಡ ಸಾಮಾನ್ಯ ಜನರಂತೆ ಬದುಕು ಸಾಗಿಸಲು ಸಾಧ್ಯ ಎಂಬುದು ಸಂಸ್ಥೆಯ ಧ್ಯೇಯವಾಗಿದೆ.

ಪರಿಸರ ಸ್ನೇಹಿ ಬಣ್ಣ ತಯಾರಿಕೆಗೆ ದೇವಸ್ಥಾನಗಳಲ್ಲಿ ಬಳಸಿದ ಹೂಗಳನ್ನು ಬಿಸಿಲಲ್ಲಿ ಒಣಗಿಸುತ್ತಿರುವ ಲಕ್ಷ್ಮೇಶ್ವರದ ಅರಳು ಬುದ್ಧಿಮಾಂದ್ಯ ಮಕ್ಕಳ ವಸತಿರಹಿತ ಶಾಲೆ ಮಕ್ಕಳು

ವಿವಿಧ ದೇವಸ್ಥಾನದಿಂದ ಹೂ ಬಳಕೆ

ತಾಲ್ಲೂಕಿನ ಮುಕ್ತಿಮಂದಿರ ಧರ್ಮಕ್ಷೇತ್ರ ಸೋಮೇಶ್ವರ ದೇವಸ್ಥಾನ ದೂದಪೀರಾಂ ದರ್ಗಾ ವೆಂಕಟೇಶ್ವರ ದೇವಸ್ಥಾನ ಸೇರಿದಂತೆ ಹೆಚ್ಚಾಗಿ ಹೂ ಬಳಕೆ ಆಗುವ ದೇವಸ್ಥಾನ ಮತ್ತು ಕ್ಷೇತ್ರಗಳಿಂದ ಪೂಜೆಗೆ ಬಳಕೆ ಮಾಡಿದ ಹೂಗಳನ್ನು ಸಂಗ್ರಹಿಸಲಾಗುತ್ತದೆ. ಬಳಸಿದ ಹೂಗಳನ್ನು ಅಲ್ಲಲ್ಲಿ ಬಿಸಾಕದೆ ನಮಗೆ ಕೊಡಿ ಎಂಬ ಮನವಿಯುಳ್ಳ ಪತ್ರವನ್ನು ಆಯಾ ದೇವಸ್ಥಾನಗಳ ಆಡಳಿತ ಮಂಡಳಿಯವರಿಗೆ ಸಂಸ್ಥೆ ವತಿಯಿಂದ ಮುಂಚಿತವಾಗಿ ಕೊಡುವುದರ ಮೂಲಕ ಹೂಗಳನ್ನು ಸಂಗ್ರಹಿಸಲಾಗುತ್ತದೆ. ಹೀಗೆ ಸಂಗ್ರಹಿಸಿದ ಹೂಗಳನ್ನು ಬಿಸಿಲಲ್ಲಿ ಚೆನ್ನಾಗಿ ಒಣಗಿಸಿ ಪುಡಿ ಮಾಡಿ ಅದಕ್ಕೆ ಫುಡ್ ಕಲರ್ ಮಿಶ್ರಣ ಮಾಡುವುದರ ಮೂಲಕ ಪರಿಸರ ಸ್ನೇಹಿ ಬಣ್ಣ ತಯಾರಿಸಲಾಗುತ್ತದೆ. ಬಳಕೆ ಮಾಡಿದ ಒಂದು ಕ್ವಿಂಟಲ್ ಹೂಗಳಿಂದ ಒಂದು ಕೆಜಿ ಬಣ್ಣ ಸಿದ್ಧವಾಗುತ್ತದೆ.