ADVERTISEMENT

ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಜಿ.ಪಂ.ಸದಸ್ಯನ ಮೇಲೆ ಹಲ್ಲೆ

ರೋಣ ತಾಲ್ಲೂಕಿನ ಮೆಣಸಗಿಯಲ್ಲಿ ನಡೆದ ಘಟನೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2020, 2:04 IST
Last Updated 28 ಡಿಸೆಂಬರ್ 2020, 2:04 IST
ರೋಣ ತಾಲ್ಲೂಕಿನ ಮೆಣಸಿಗಿ ಗ್ರಾಮಕ್ಕೆ ಎಸ್‌ಪಿ ಯತೀಶ್‌ ಎನ್‌., ಉಪ ವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಭೇಟಿ ನೀಡಿದ್ದರು.
ರೋಣ ತಾಲ್ಲೂಕಿನ ಮೆಣಸಿಗಿ ಗ್ರಾಮಕ್ಕೆ ಎಸ್‌ಪಿ ಯತೀಶ್‌ ಎನ್‌., ಉಪ ವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಭೇಟಿ ನೀಡಿದ್ದರು.   

ಹೊಳೆಆಲೂರ (ಗದಗ): ಮತದಾನ ಮಾಡುವ ವೇಳೆ ಬೆಳವಣಕಿಯ ಜಿಲ್ಲಾ ಪಂಚಾಯ್ತಿ ಸದಸ್ಯ ಶಿವಕುಮಾರ ನೀಲಗುಂದ ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಮಾಡಿದ ಘಟನೆ ಭಾನುವಾರ ನಡೆದಿದೆ.

ರೋಣ ತಾಲ್ಲೂಕಿನ ಗ್ರಾಮ ಪಂಚಾಯ್ತಿಯ 105ನೇ ಮತಗಟ್ಟೆಗೆ ಬೆಳಿಗ್ಗೆ 8ಕ್ಕೆ ಮತದಾನ ಮಾಡಲು ಬಂದ ನೀಲಗುಂದ ಅವರು, ಪಕ್ಕದಲ್ಲಿ ಇದ್ದ ಮಹಿಳೆಯೊಬ್ಬರಿಗೆ ಇಂತಹ ವ್ಯಕ್ತಿಗೆ ಮತ ಹಾಕು ಎಂದು ಸೂಚನೆ ನೀಡಿದರು ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದು, ಕಾಂಗ್ರೆಸ್‌ ಕಾರ್ಯಕರ್ತರು ಶಿವಕುಮಾರ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದರಿಂದ ಮತದಾನ ಸ್ಥಗಿತವಾಯಿತು. ಎರಡೂ ಪಕ್ಷಗಳ ಕಾರ್ಯಕರ್ತರು ಗುಂಪಾಗಿ ಜಮಾಯಿಸಿದ್ದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ADVERTISEMENT

‘ಹಲ್ಲೆ ಮಾಡಿದ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸುವವರೆಗೆ ಮತದಾನ ಸ್ಥಗಿತಗೊಳಿಸಬೇಕು. ಜನಪ್ರತಿನಿಧಿಯಾದ ನನ್ನ ಮೇಲೆಯೇ ಅವರು ಬೂತ್‌ನೊಳಕ್ಕೆ ನುಗ್ಗಿ ಹಲ್ಲೆ ಮಾಡಿದ್ದಾರೆ. ಇನ್ನು ಜನಸಾಮಾನ್ಯರ ಗತಿಯೇನು. ಹಲ್ಲೆಕೋರರನ್ನು ಬಂಧಿಸಬೇಕು. ಅಲ್ಲಿಯವರೆಗೆ ಮತದಾನಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಪ್ರತಿಭಟನೆಗೆ ಕುಳಿತರು.

ಈ ವೇಳೆ ಉಪ ವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಸ್ಥಳಕ್ಕೆ ಭೇಟಿ ನೀಡಿ ಮತದಾನಕ್ಕೆ ಅವಕಾಶ ಮಾಡಿಕೊಡುವಂತೆ ಮನವೊಲಿಸಿದರು. ಬಳಿಕ 8.30ಕ್ಕೆ ಮತದಾನ ಆರಂಭವಾಯಿತು.

ಘಟನೆಗೆ ಸಂಬಂಧಪಟ್ಟಂತೆ ಶೇಖರಗೌಡ ಹಿರೇಗೌಡ್ರ, ಬಸನಗೌಡ ಹಿರೇಗೌಡ್ರ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಕರೆದೊಯ್ಯುವ ಸಂದರ್ಭದಲ್ಲಿ, ಅಧಿಕಾರಿಗಳು ಒಂದು ಪಕ್ಷದ ಪರವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಒಂದು ಗುಂಪು ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿದರು. ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪು
ಚದುರಿಸಿ ಮತದಾನಕ್ಕೆ ಅವಕಾಶ ಮಾಡಿಕೊಟ್ಟರು.

‘ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಗೆದ್ದಾಗಿನಿಂದ ನನ್ನ ಜೊತೆ ಜಗಳಕ್ಕೆ ಇಳಿಯುತ್ತಿದ್ದಾರೆ. ಇಂದು ನನ್ನ ಮೇಲೆ ಹಲ್ಲೆ ಮಾಡಲೇ ಬೇಕು ಎಂಬ ನಿರ್ಧಾರ ಮಾಡಿಯೇ ಈ ಕೃತ್ಯ ಎಸಗಿದ್ದಾರೆ. ಇವರಿಗೆ ಕಠಿಣ ಶಿಕ್ಷೆ ನೀಡಬೇಕು’ ಎಂದು ಶಿವಕುಮಾರ ನೀಲಗುಂದ
ಆಗ್ರಹಿಸಿದ್ದಾರೆ.

‘ಮತದಾನಕ್ಕೆ ಅಡ್ಡಿ ಪಡಿಸುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಕೊಳ್ಳಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್‌ ಎನ್. ತಿಳಿಸಿದ್ದಾರೆ.

ಜಿಲ್ಲಾ ಪಂಚಾಯ್ತಿ ಸದಸ್ಯ ಶಿವಕುಮಾರ ನೀಲಗುಂದ ಅವರನ್ನು ರೋಣದ ಡಾ. ಭೀಮಸೇನ ಜೋಶಿ ಆಸ್ಪತ್ರೆಗೆ ದಾಖಲಾಗಿದ್ದು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.