ADVERTISEMENT

ಎಳ್ಳು ಅಮವಾಸ್ಯೆ ಸಂಭ್ರಮ: ಹಿಂಗಾರು ಬೆಳೆಗಳಿಗೆ ಪೂಜೆ ಸಲ್ಲಿಸಿ ಹಬ್ಬ ಆಚರಣೆ

ಬಸವರಾಜ ಹಲಕುರ್ಕಿ
Published 19 ಡಿಸೆಂಬರ್ 2025, 4:33 IST
Last Updated 19 ಡಿಸೆಂಬರ್ 2025, 4:33 IST
<div class="paragraphs"><p>ಎಳ್ಳು ಅಮವಾಸ್ಯೆ ಆಚರಣೆಗೆ ನರಗುಂದದಲ್ಲಿ ಸಿದ್ಧವಾಗಿರುವ ಶೇಂಗಾ ಹೋಳಿಗೆಗಳು</p></div>

ಎಳ್ಳು ಅಮವಾಸ್ಯೆ ಆಚರಣೆಗೆ ನರಗುಂದದಲ್ಲಿ ಸಿದ್ಧವಾಗಿರುವ ಶೇಂಗಾ ಹೋಳಿಗೆಗಳು

   

ನರಗುಂದ: ಬಯಲು ಸೀಮೆಯ ರೈತರ ಹಬ್ಬವೆಂದೇ ಕರೆಯಲ್ಪಡುವ ಎಳ್ಳು ಅಮವಾಸ್ಯೆ ಆಚರಣೆ ಸಂಭ್ರಮ ಶುಕ್ರವಾರ ನಡೆಯಲಿದೆ. ಆದರೆ, ರೈತರು ಮುಂಗಾರಿನ ಮುನಿಸಿನ ನಡುವೆ, ಹಿಂಗಾರಿನ ಅಸಮರ್ಪಕ ಹವಾಮಾನದ ನಡುವೆ ಬೆಳೆದ ಬೆಳೆಗಳಿಗೆ ಪೂಜೆ ಸಲ್ಲಿಸಿ ಎಳ್ಳು ಅಮವಾಸ್ಯೆ ಆಚರಿಸಬೇಕಿದೆ.

ರೈತರಿಗೆ ಮಲೆನಾಡಿನಲ್ಲಿ ಸೀಗೆ ಹುಣ್ಣಿಮೆ ಸಂಭ್ರಮ ತಂದರೆ, ಬಯಲು ಸೀಮೆಯಲ್ಲಿ ಎಳ್ಳು ಅಮವಾಸ್ಯೆ ಸಂಭ್ರಮ ಸಾಮಾನ್ಯ. ಆದರೆ ಹಿಂದೆಂದೂ ಕಾಣದ ಮುಂಗಾರು ಸಂದರ್ಭದಲ್ಲಿ ಆದ ಅತಿವೃಷ್ಟಿಯಿಂದ ವಾಣಿಜ್ಯ ಬೆಳೆ ಹೆಸರು ಕಾಳು ಸೇರಿದಂತೆ ವಿವಿಧ ಬೆಳೆಗಳು ಕೈಗೆ ಬಂದರೂ ಬಾಯಿಗೆ ಬರಲಿಲ್ಲ. ಅಲ್ಪ ಸ್ವಲ್ಪ ಬೆಳೆದ ಮೆಕ್ಕೆಜೋಳಕ್ಕೂ ಬೆಂಬಲ ಬೆಲೆ ಪೂರ್ಣ ಪ್ರಮಾಣದಲ್ಲಿ ದೊರೆಯುತ್ತಿಲ್ಲ. ಇದರಿಂದ ಮುಂಗಾರು ಹಂಗಾಮಿನ ರೈತರು ಮುನಿಸು ಸಾಮಾನ್ಯವಾಗಿದೆ.

ADVERTISEMENT

ಹಿಂಗಾರು ಹಂಗಾಮಿನಲ್ಲಾದರೂ ಉತ್ತಮ ಬೆಳೆ ತೆಗೆಯಬೇಕು ಎಂಬ ಹಂಬಲವಿರುವ ರೈತರಿಗೆ ಕಡಲೆ, ಕುಸುಬಿ, ಗೋಧಿ ಬೆಳೆಗಳಿಗೆ ರೋಗ ಕಾಡುತ್ತಿವೆ. ಮಲಪ್ರಭಾ ಕಾಲುವೆ ನೀರು ದೊರೆಯುತ್ತಿಲ್ಲ. ಇದರಿಂದ ಹಿಂಗಾರು ಬೆಳೆಗಳ ಫಸಲು ಕೈಗೆ ಬಂದಾಗಲೇ ಉತ್ತಮ ಪ್ರತಿಫಲ ದೊರೆತಂತಾಗುತ್ತದೆ ಎಂದು ರೈತರು ಹೇಳುತ್ತಾರೆ.

ಇವೆಲ್ಲಾ ಬೇಸರದ ನಡುವೆ ಎಳ್ಳ ಅಮವಾಸ್ಯೆಯನ್ನು ಸಂಪ್ರದಾಯಕ್ಕಾದರೂ ಆಚರಿಸಬೇಕಲ್ಲ ಎಂಬಂತೆ ರೈತರು ಗುರುವಾರ ಸಿದ್ದತೆ ನಡೆಸಿದ್ದು ಕಂಡುಬಂತು. ಒಟ್ಟಾರೆ ಅತಿವೃಷ್ಟಿ, ಬೆಳೆಹಾನಿ ನಡುವೆ ಎಳ್ಳು ಅಮವಾಸ್ಯೆ ಆಚರಣೆ ಶುಕ್ರವಾರ ತಾಲ್ಲೂಕಿನಾದ್ಯಂತ ನಡೆಯಲಿದೆ.

ಚರಗಕ್ಕೆ ತರಹೇವಾರಿ ಖಾದ್ಯ

ಎಳ್ಳು ಅಮವಾಸ್ಯೆಯಂದು ರೈತರು ಹೊಲಗಳಿಗೆ ತೆರಳಿ ಭೂತಾಯಿಗೆ ಪೂಜೆ ಸಲ್ಲಿಸಿ ಚರಗ ಚೆಲ್ಲುತ್ತಾರೆ. ಇದಕ್ಕಾಗಿ ಒಂದು ವಾರದಿಂದ ತರಹವೇವಾರಿ ಖಾದ್ಯ ತಯಾರಿಸುತ್ತಿದ್ದಾರೆ. ಎಳ್ಳ ಹೋಳಿಗೆ ಶೇಂಗಾ ಹೋಳಿಗೆ ಎಣ್ಣೆ ಹೋಳಿಗೆ ಹಾಗೂ ಕರ್ಚಿಕಾಯಿ ಕಡಬು ಎಳ್ಳು ಹಚ್ಚಿದ ಜೋಳ ಸಜ್ಜೆಯ ರೊಟ್ಟಿಗಳು ಸಿದ್ಧವಾಗಿವೆ. ಪ್ರಕೃತಿ ಹೇಗೆ ಇರಲಿ ಭೂತಾಯಿ ಏನೇ ಕೊಡಲಿ ಅವಳಿಗೆ ಮಾತ್ರ ಎಳ್ಳು ಅಮವಾಸ್ಯೆ ಮೀಸಲು. ಅವಳು ಕೊಟ್ಟಿದ್ದರಲ್ಲಿ ನೈವೇದ್ಯ ರೂಪದಲ್ಲಿ ಸ್ವಲ್ಪವಾದರೂ ಅವಳಿಗೆ ಕೊಡೋಣ ಎಂದು ಅಮವಾಸ್ಯೆ ಆಚರಣೆ ಸಿದ್ಧತೆಯಲ್ಲಿ ತೊಡಗಿರುವುದಾಗಿ ಮಹಿಳೆಯರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.