ADVERTISEMENT

ಸಂಭ್ರಮದಿಂದ ಪರೀಕ್ಷೆ ಬರೆದರೆ ಯಶಸ್ಸು: ಪ್ರಾಚಾರ್ಯ ಎಂ.ಸಿ. ಭಜಂತ್ರಿ

ಭೂಗೋಳ ಶಾಸ್ತ್ರ ವಿಷಯದ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 4:27 IST
Last Updated 29 ಡಿಸೆಂಬರ್ 2025, 4:27 IST
ಶಿರಹಟ್ಟಿಯ ಎಫ್.ಎಂ. ಡಬಾಲಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ಭೂಗೋಳ ಶಾಸ್ತ್ರ ವಿಷಯದ ಕಾರ್ಯಾಗಾರದಲ್ಲಿ ಉಪನ್ಯಾಸಕ ಪಿ.ಎನ್. ಕುಲಕರ್ಣಿ ಮಾತನಾಡಿದರು 
ಶಿರಹಟ್ಟಿಯ ಎಫ್.ಎಂ. ಡಬಾಲಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ಭೂಗೋಳ ಶಾಸ್ತ್ರ ವಿಷಯದ ಕಾರ್ಯಾಗಾರದಲ್ಲಿ ಉಪನ್ಯಾಸಕ ಪಿ.ಎನ್. ಕುಲಕರ್ಣಿ ಮಾತನಾಡಿದರು    

ಶಿರಹಟ್ಟಿ: ‘ವಿದ್ಯಾರ್ಥಿಗಳು ಪರೀಕ್ಷೆಯನ್ನು ಸಂಭ್ರಮದಂತೆ ಆಚರಿಸಬೇಕು. ಆಗ ಮಾತ್ರ ನಿರೀಕ್ಷೆಯಂತೆ ಹೆಚ್ಚು ಅಂಕ ಗಳಿಸಲು ಸಾಧ್ಯ’ ಎಂದು ಪ್ರಾಚಾರ್ಯ ಎಂ.ಸಿ. ಭಜಂತ್ರಿ ಹೇಳಿದರು.

ಇಲ್ಲಿನ ಎಫ್.ಎಂ. ಡಬಾಲಿ ಪದವಿ ಪೂರ್ವ ಕಾಲೇಜಿನಲ್ಲಿ ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆ ಮತ್ತು ಜಿಲ್ಲಾ ಭೂಗೋಳ ಶಾಸ್ತ್ರ ವಿಷಯದ ವೇದಿಕೆ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ದ್ವಿತೀಯ ಪಿಯುಸಿ ಭೂಗೋಳ ಶಾಸ್ತ್ರ ವಿಷಯದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಕೇವಲ ಪರೀಕ್ಷೆಗಾಗಿ ಓದುವ ಹವ್ಯಾಸ ಒಳ್ಳೆಯದಲ್ಲ. ಕಲಿಕೆ ನಿರಂತರವಾಗಿರಬೇಕು. ಜೀವನದಲ್ಲಿ ಎದುರಾಗುವ ಸಮಸ್ಯೆ ಹಾಗೂ ಸವಾಲುಗಳನ್ನು ಎದುರಿಸಲು ಶಿಕ್ಷಣ ಶಕ್ತಿ ತುಂಬಬೇಕು. ಪ್ರಶ್ನೆ ಕೇಳುವ, ಜಾಗೃತಿಯ ಮನೋಭಾವ ಬೆಳೆಸಬೇಕು. ಗೊಂದಲವನ್ನು ಪರಿಹರಿಸಿಕೊಂಡು, ವಿದ್ಯಾರ್ಥಿಗಳು ನಿರಂತರ ಅಧ್ಯಯನಶೀಲರಾಗಬೇಕು’ ಎಂದರು.

ADVERTISEMENT

ಉಪನ್ಯಾಸಕ ಪಿ.ಎನ್. ಕುಲಕರ್ಣಿ ಮಾತನಾಡಿ, ‘ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಶಿಕ್ಷಣ ವಿಭಾಗವು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಲ್ಲಿನ ಪರೀಕ್ಷಾ ಭಯ ಹೋಗಲಾಡಿಸಲು ಯತ್ನಿಸುತ್ತಿದೆ. ಮಾದರಿ ಪ್ರಶ್ನೆಪತ್ರಿಕೆಗಳನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ವಿದ್ಯಾರ್ಥಿಗಳು ಆಯಾ ವಿಷಯಗಳ ಉಪನ್ಯಾಸಕರ ಮಾರ್ಗದರ್ಶನ ಪಡೆದು, ಪರೀಕ್ಷೆಗೆ ತಯಾರಿ ನಡೆಸಬೇಕು’ ಎಂದು ತಿಳಿಸಿದರು.

ವಿದ್ಯಾ ಸಂಸ್ಥೆಯ ಗೌರವ ಕಾರ್ಯದರ್ಶಿ ಎನ್.ಆರ್. ಕುಲಕರ್ಣಿ ಮಾತನಾಡಿದರು. ಜಿಲ್ಲೆಯ ಭೂಗೋಳ ಶಾಸ್ತ್ರ ವಿಷಯದ ಸಂಪನ್ಮೂಲ ವ್ಯಕ್ತಿಗಳಾದ ಈರಣ್ಣ ಕಮತರ, ಪ್ರದೀಪ ನಾಯಕ, ರಾಜೇಂದ್ರ ಹಿರೇಮಠ, ಡಿ.ಎ. ತಹಶೀಲ್ದಾರ್‌, ಉಪನ್ಯಾಸಕ ಬಸವರಾಜ ಶಿರುಂದ, ಎನ್. ಹನುಮರಡ್ಡಿ, ವೈ.ಎಸ್. ಪಂಗಣ್ಣವರ, ಎಂ.ಎಂ. ನದಾಫ್ ಇದ್ದರು.

‘ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಿ’

‘ಭೂಗೋಳ ಶಾಸ್ತ್ರವು ಮಾನವನಿಗೆ ಅವಶ್ಯವಿರುವ ಸಂಪನ್ಮೂಲಗಳ ಮಾಹಿತಿ ಒದಗಿಸುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭೂಗೋಳ ಶಾಸ್ತ್ರದ ಕುಸಿತು ಸಾಕಷ್ಟು ಪ್ರಶ್ನೆಗಳನ್ನು ಕೇಳಲಾಗುತ್ತದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಗಳಿಸಲಷ್ಟೇ ಅಲ್ಲದೆ ಪದವಿ ಪೂರ್ವ ಮತ್ತು ಪದವಿ ನಂತರದ ಸ್ಪರ್ಧಾತ್ಮಕ ಪರೀಕ್ಷೆಗೂ ತಯಾರಾಗಬೇಕು. ಈ ದೃಷ್ಟಿಕೋನದಲ್ಲಿ ಭೂಗೋಳ ಶಾಸ್ತ್ರ ವಿಷಯ ಅಭ್ಯಾಸ ಮಾಡಿದರೆ ಉತ್ತಮ ಜ್ಞಾನ ಪಡೆಯಬಹುದು’ ಎಂದು ಪಿ.ಎನ್. ಕುಲಕರ್ಣಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.