ADVERTISEMENT

ಗದಗ| ನಕಲಿ ಗುರುತಿನ ಚೀಟಿ ತಯಾರಿಸಿದ್ದ ವ್ಯಕ್ತಿ ಬಂಧನ: ಪೊಲೀಸರಿಗೆ ಬಹುಮಾನ ಘೋಷಣೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 5:16 IST
Last Updated 15 ನವೆಂಬರ್ 2025, 5:16 IST
ನಕಲಿ ಗುರುತಿನಚೀಟಿ ತಯಾರಿಸಲು ಬಳಸುತ್ತಿದ್ದ ಉಪಕರಣಗಳನ್ನು ವಶಪಡಿಸಿಕೊಂಡಿರುವ ಬೆಟಗೇರಿ ಬಡಾವಣೆ ಪೊಲೀಸರು
ನಕಲಿ ಗುರುತಿನಚೀಟಿ ತಯಾರಿಸಲು ಬಳಸುತ್ತಿದ್ದ ಉಪಕರಣಗಳನ್ನು ವಶಪಡಿಸಿಕೊಂಡಿರುವ ಬೆಟಗೇರಿ ಬಡಾವಣೆ ಪೊಲೀಸರು   

ಗದಗ: ನಕಲಿ ಆಧಾರ್‌ ಕಾರ್ಡ್‌, ವಾಹನಚಾಲನಾ ಪರವಾನಗಿ ಸೇರಿದಂತೆ ಇನ್ನಿತರ ಗುರುತಿನ ಚೀಟಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಪ್ರಕರಣ ಭೇದಿಸಿರುವ ಬೆಟಗೇರಿ ಬಡಾವಣೆ ಪೊಲೀಸರು ಒಬ್ಬನನ್ನು ಬಂಧಿಸಿ, ವಿವಿಧ ಉಪಕರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಹಾತಲಗೇರಿ ನಾಕಾ ಬಳಿ ಕಬಾಡಿ ಎಡಿಟಿಂಗ್‌ ಫೋಟೊ ಸ್ಟುಡಿಯೊ ಇಟ್ಟುಕೊಂಡಿದ್ದ ರಾಜೀವ್‌ಗಾಂಧಿ ನಗರದ ನಿವಾಸಿ ರಾಘವೇಂದ್ರಸಾ ಕಬಾಡಿ (42) ಬಂಧಿತ ಆರೋಪಿ.

ನಕಲಿ ಗುರುತಿನ ಚೀಟಿ ತಯಾರಿಸಿ ಮಾರಾಟ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನಲೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರೋಹನ್‌ ಜಗದೀಶ್‌ ಅವರು ಡಿವೈಎಸ್‌ಪಿ ಮುರ್ತುಜಾ ಖಾದ್ರಿ, ಬೆಟಗೇರಿ ವೃತ್ತ ಸಿಪಿಐ ಧೀರಜ್‌ ಸಿಂಧೆ ಹಾಗೂ ಬೆಟಗೇರಿ ಬಡಾವಣೆ ಪೊಲೀಸ್‌ ಠಾಣೆಯ ಪಿಎಸ್‌ಐ ಮಾರುತಿ ಎಸ್‌.ಜೋಗದಂಡಕರ ನೇತೃತ್ವದಲ್ಲಿ ತಂಡ ರಚಿಸಿದ್ದರು.

ADVERTISEMENT

ನ.13ರಂದು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಬೆಟಗೇರಿ ಬಡವಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ.

ಆರೋಪಿಯು ನಕಲಿ ಗುರುತಿನ ಚೀಟಿ ತಯಾರಿಸಲು ಬಳಸುತ್ತಿದ್ದ ಸಿಪಿಯು, ಮಾನಿಟರ್‌, ಪ್ರಿಂಟರ್‌, ಸ್ಕ್ಯಾನರ್‌, ಕ್ಯಾಮೆರಾ, ಕೇಬಲ್‌, ಮೊಬೈಲ್‌, ಮೆಮೊರಿ ಕಾರ್ಡ್‌ ಸೇರಿದಂತೆ ನಕಲಿ ಡ್ರೈವಿಂಗ್‌ ಲೈಸೆನ್ಸ್‌, ಪ್ಯಾನ್‌ ಕಾರ್ಡ್‌, ಆಧಾರ್‌ ಕಾರ್ಡ್‌, ವೋಟರ್‌ ಐಡಿಗಳನ್ನು ವಶಪಡಿಸಿಕೊಂಡಿದ್ದಾರೆ.

ಸಿಪಿಐ ಧೀರಜ್‌ ಸಿಂಧೆ, ಪಿಎಸ್‌ಐ ಮಾರುತಿ ಎಸ್‌. ಜೋಗದಂಡಕರ, ಸಿಬ್ಬಂದಿಯಾದ ಎನ್‌.ಡಿ.ಹುಬ್ಬಳ್ಳಿ, ಸಂತೋಷ ಎಚ್‌.ಡೋಣಿ, ಪರಶುರಾಮ ಎಚ್‌. ದೊಡ್ಡಮನಿ, ಪ್ರವೀಣ ಕಲ್ಲೂರ, ಖಯುಂ ಲಕ್ಕುಂಡಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಪ್ರಕರಣ ಭೇದಿಸಿರುವ ಪೊಲೀಸರ ತಂಡಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರೋಹನ್‌ ಜಗದೀಶ್‌ ಬಹುಮಾನ ಘೋಷಿಸಿದ್ದಾರೆ.

ಆರೋಪಿ ರಾಘವೇಂದ್ರಸಾ ಕಬಾಡಿ ಹಣದಾಸೆಗಾಗಿ ಸಾರ್ವಜನಿಕರಿಗೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಅವುಗಳನ್ನು ನೈಜ ದಾಖಲೆಗಳಂತೆ ಬಳಸಲು ನೀಡಿ ಸರ್ಕಾರಕ್ಕೆ ಮೋಸ ಮಾಡುತ್ತಿದ್ದ. ಪ್ರಕರಣದಲ್ಲಿ ಯಾರಾರು ಭಾಗಿಯಾಗಿದ್ದಾರೆ ಎಂಬುದರ ತನಿಖೆ ಮುಂದುವರಿದಿದೆ
ರೋಹನ್‌ ಜಗದೀಶ್‌ ಎಸ್‌ಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.