ADVERTISEMENT

ಗದಗ: ಸರ್ಕಾರದ ರೈತ ವಿರೋಧಿ ಧೋರಣೆಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 7:23 IST
Last Updated 30 ಆಗಸ್ಟ್ 2025, 7:23 IST
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಗದಗ ಜಿಲ್ಲಾಡಳಿತ ಭವನದ ಎದುರು ನಡೆಸುತ್ತಿರುವ ಅಹೋರಾತ್ರಿ ಧರಣಿ 11 ದಿನಗಳನ್ನು ಪೂರ್ಣಗೊಳಿಸಿ, 12ನೇ ದಿನಕ್ಕೆ ಕಾಲಿಟ್ಟಿದೆ 
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಗದಗ ಜಿಲ್ಲಾಡಳಿತ ಭವನದ ಎದುರು ನಡೆಸುತ್ತಿರುವ ಅಹೋರಾತ್ರಿ ಧರಣಿ 11 ದಿನಗಳನ್ನು ಪೂರ್ಣಗೊಳಿಸಿ, 12ನೇ ದಿನಕ್ಕೆ ಕಾಲಿಟ್ಟಿದೆ    

ಗದಗ: ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗದಗ ಜಿಲ್ಲಾಡಳಿತ ಭವನದ ಎದುರು ನಡೆಸುತ್ತಿರುವ ಅಹೋರಾತ್ರಿ ಧರಣಿ 11 ದಿನಗಳನ್ನು ಪೂರೈಸಿದ್ದು, ರೈತರ ಹೋರಾಟಕ್ಕೆ ಈವರೆಗೆ ಸ್ಪಂದಿಸದ ಸರ್ಕಾರದ ಧೋರಣೆ ಖಂಡಿಸಿ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ಉತ್ತರ ಕರ್ನಾಟಕ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ರವಿಕಾಂತ ಅಂಗಡಿ ಮಾತನಾಡಿ, ‘ರೈತರು ತಲತಲಾಂತರಗಳಿಂದ ಅರಣ್ಯ ಜಮೀನುಗಳನ್ನು ಸಾಗುವಳಿ ಮಾಡಿಕೊಂಡು ಬದುಕು ನಡೆಸುತ್ತಿದ್ದಾರೆ. ಆದರೆ, ಸರ್ಕಾರ ಹಕ್ಕುಪತ್ರ ನೀಡದೇ, ರೈತರಿಗೆ ಕಿರುಕುಳ ನೀಡುತ್ತಿದೆ. ಜತೆಗೆ ನಾಗಾವಿ ಗ್ರಾಮದಲ್ಲಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯ ನಿರ್ಮಾಣಕ್ಕಾಗಿ ರೈತರು ಸಾಗುವಳಿ ಮಾಡುತ್ತಿದ್ದ ನೂರಾರು ಎಕರೆ ಕೃಷಿ ಭೂಮಿ ವಶಪಡಿಸಿಕೊಂಡು, ಪರಿಹಾರ ನೀಡದೇ ಒಕ್ಕಲೆಬ್ಬಿಸಿರುವುದು ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕೆ ಬಂದು ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ಹೋರಾಟ ಹಿಂತೆಗೆದುಕೊಳ್ಳುವುದಿಲ್ಲ’ ಎಂದು ಎಚ್ಚರಿಸಿದರು.

ADVERTISEMENT

ಗುರುವಾರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಅಖಿಲ ಕರ್ನಾಟಕ ಮಹಿಳಾ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷೆ ಮಹಾದೇವಿ ಎಂ. ಹುಯಿಲಗೋಳ ರೈತರ ಹೋರಾಟಕ್ಕೆ ಬೆಂಬಲ ಘೋಷಿಸಿದರು.

‘ಸರ್ಕಾರ ಕೂಡಲೇ ರೈತರ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ವಕೀಲ, ಸಮಾಜಿಕ ಕಾರ್ಯಕರ್ತ ಎಂ.ಐ.ಮುಲ್ಲಾ ಮಾತನಾಡಿ, ‘ರೈತರ ಬೇಡಿಕೆಗಳು ನ್ಯಾಯಯುತವಾಗಿದ್ದು, ಸರ್ಕಾರ ಅವುಗಳನ್ನು ತಕ್ಷಣವೇ ಈಡೇರಿಸಬೇಕು. ಚಳಿ–ಮಳೆಯಲ್ಲಿ ರೈತರು ಹೋರಾಟ ಮಾಡುವ ಸ್ಥಿತಿ ತಂದಿರುವ ಜಿಲ್ಲಾಡಳಿತದ ನಡೆ ಖಂಡನೀಯ. ಜಿಲ್ಲಾ ಉಸ್ತುವಾರಿ ಸಚಿವರು ಧರಣಿನಿರತರನ್ನು ಭೇಟಿಯಾಗಿ ಅವರ ಸಮಸ್ಯೆ ಆಲಿಸಿ ತಕ್ಷಣ ಪರಿಹಾರ ಒದಗಿಸಬೇಕು’ ಎಂದು ಆಗ್ರಹಿಸಿದರು.

ರೈತ ಮುಖಂಡರಾದ ಬಸವಣೆಪ್ಪ ಚಿಂಚಲಿ, ಎನ್.ಟಿ.ಪೂಜಾರ, ಚಂಬಣ್ಣ ಚನ್ನಪಟ್ಟಣ, ನಾಮದೇವ, ನಿಂಗಪ್ಪ, ಚನ್ನಪ್ಪ ಭಗತ್‌, ಫಿರೋಜ್‌ ನದಾಫ್‌ ಸೇರಿದಂತೆ ಜಿಲ್ಲೆಯ ಹಲವು ರೈತರು, ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಮಳೆಯಲ್ಲಿ ತೊಯ್ದ ಕಟ್ಟಿಗೆ
ಜಿಲ್ಲಾಡಳಿತ ಭವನದ ಎದುರು ಅಹೋರಾತ್ರಿ ಧರಣಿ ನಡೆಯುತ್ತಿದ್ದು ಬುಧವಾರ ಮತ್ತು ಗುರುವಾರ ಸುರಿದ ಮಳೆಯಿಂದ ರೈತರು ಅಡುಗೆ ತಯಾರಿಗಾಗಿ ಇಟ್ಟ ಸೌದೆಗಳು ತೊಯ್ದ ಪರಿಣಾಮ ಅಡುಗೆ ಮಾಡುವುದಕ್ಕೆ ಪರದಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.