ADVERTISEMENT

ನರಗುಂದ: ಪಹಣಿಯಲ್ಲಿ ಸರ್ಕಾರ ನಮೂದು: ರೈತರ ಆಕ್ರೋಶ

ಹದಲಿ ರೈತರಿಂದ ಪ್ರತಿಭಟನೆ ಆರಂಭ

​ಪ್ರಜಾವಾಣಿ ವಾರ್ತೆ
Published 17 ಜುಲೈ 2025, 7:10 IST
Last Updated 17 ಜುಲೈ 2025, 7:10 IST
ನರಗುಂದ ದ ಮಿನಿ ವಿಧಾನಸೌಧ ಆವರಣದಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳ ರೈತರು ತಮ್ಮ ಜಮೀನಗಳ ಪಹಣಿ ಪತ್ರಿಕೆಯಲ್ಲಿ ಸರ್ಕಾರ ಪದ ಕಡಿಮೆ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ನರಗುಂದ ದ ಮಿನಿ ವಿಧಾನಸೌಧ ಆವರಣದಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳ ರೈತರು ತಮ್ಮ ಜಮೀನಗಳ ಪಹಣಿ ಪತ್ರಿಕೆಯಲ್ಲಿ ಸರ್ಕಾರ ಪದ ಕಡಿಮೆ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.   

ನರಗುಂದ: ರೈತರ ಜಮೀನಿನ ಪಹಣಿ ಪತ್ರಿಕೆ ಕಾಲಂ ನಂ.9ರಲ್ಲಿ ಸರ್ಕಾರ ಅಂತ ನಮೂದು ಇದ್ದ ಕಾರಣ ರೈತರಿಗೆ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ. ಪಹಣಿ ಪತ್ರಿಕೆಯಲ್ಲಿನ ಸರ್ಕಾರ ಎಂಬ ಶಬ್ದದಿಂದ ರೈತರ ಬದುಕು ಮೂರಾಬಟ್ಟೆ ಆಗುತ್ತಿದೆ. ಈ ಪದವನ್ನು ಉತಾರದಿಂದ ಕೂಡಲೇ ತೆಗೆದು ಹಾಕಬೇಕೆಂದು ಹದಲಿ ಗ್ರಾಮದ ರೈತ ಕುಮಾರಸ್ವಾಮಿ ಹಿರೇಮಠ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.

ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳ ರೈತರು ತಮ್ಮ ಜಮೀನಗಳ ಪಹಣಿ ಪತ್ರಿಕೆಯಲ್ಲಿ ಸರ್ಕಾರ ಪದ ತೆಗೆಯುವಂತೆ ಆಗ್ರಹಿಸಿ ಕೈಗೊಂಡ ಪ್ರತಿಭಟನೆಯಲ್ಲಿ ಮಾತನಾಡಿದರು.

ತಾಲ್ಲೂಕಿನ ಹದಲಿ, ಗಂಗಾಪೂರ, ಭೈರನಹಟ್ಟಿ, ಖಾನಾಪೂರ ಹಾಗೂ ರಡ್ಡೇರ ನಾಗನೂರ ಗ್ರಾಮಗಳ 8ನೂರಕ್ಕೂ ಹೆಚ್ಚು ರೈತರ ಪಹಣಿ ಪತ್ರಿಕೆಯಲ್ಲಿ ಸರ್ಕಾರವೆಂದು ನಮೂದಾಗಿದೆ. ಇದರಿಂದ ಕೃಷಿ ಚಟುವಟಿಕೆ ಮಾಡಲು ರೈತರಿಗೆ ಉತ್ಸಾಹವೇ ಇಲ್ಲದಂತಾಗಿದೆ. ಕೆಲವು ರೈತರಿಗೆ ಸರ್ಕಾರದ ಸೌಲಭ್ಯಗಳು ಸಿಗುತ್ತಿದ್ದರೆ, ನಮಗೆ ಸೌಲಭ್ಯಗಳು ಸಿಗದೇ ವಂಚಿತರಾಗುತ್ತಿದ್ದೇವೆ. ಹೀಗಾದರೆ ಕೃಷಿ ಮಾಡುವುದಾದರೂ ಹೇಗೆ ಎಂಬ ಚಿಂತೆ ನಮ್ಮನ್ನು ಕಾಡುತ್ತಿದೆ. ಸರ್ಕಾರ ನಿರ್ಲಕ್ಷ್ಯ ಮಾಡದೇ ರೈತರ ಸಮಸ್ಯೆಗೆ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದರು.

ADVERTISEMENT

ರೈತ ಕಲ್ಲಪ್ಪ ಹೂಗಾರ ಮಾತನಾಡಿ, 1995 ರಲ್ಲಿ ಆನಂದ ಮೌಲ್ಯಾ ಎನ್ನುವ ತಹಶೀಲ್ದಾರರು ನೀರಿನ ಕರ ಹಾಗೂ ಹಪ್ತಾ ತುಂಬದ ರೈತರ, ಬೈಂಡಿಂಗ್ ಸಾಲ ಪಡೆದ ರೈತರ ಪಹಣಿ ಪತ್ರಿಕೆಯಲ್ಲಿ ಸರ್ಕಾರ ಎಂದು ನಮೂದು ಮಾಡಿದ್ದಾರೆ. ಆಗಿನಿಂದ ಸರ್ಕಾರದ ಫಸಲ ಭೀಮಾ ಯೋಜನೆ, ಬೆಳೆ ಪರಿಹಾರ, ಬರ ಪರಿಹಾರ, ಬೆಳೆ ಸಾಲ ಹೀಗೆ ಯಾವ ಸೌಲಭ್ಯಗಳು ರೈತರಿಗೆ ಸಿಗುತ್ತಿಲ್ಲ. ಕೃಷಿ ಚಟುವಟಿಕೆಗೆ ಪ್ರೋತ್ಸಾಹ ನೀಡಲು ಪಹಣಿಯಲ್ಲಿನ ಸರ್ಕಾರ ಎಂಬ ಪದವನ್ನು ಕೂಡಲೇ ತೆಗೆದು ಹಾಕಬೇಕು. ಜುಲೈ 21 ರವರೆಗೆ ನಮ್ಮ ಹೋರಾಟ ನಿರಂತರ ಇರುತ್ತದೆ. ಸರ್ಕಾರ ನಮ್ಮ ಹೋರಾಟಕ್ಕೆ ಸ್ಪಂದನೆ ನೀಡದಿದ್ದಲ್ಲಿ ಜುಲೈ 22 ರಿಂದ ಗದಗ ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ಶಶಿಗೌಡ ಯಲ್ಲಪ್ಪಗೌಡ್ರ, ಬಸವರಾಜ ಬಳ್ಳೊಳ್ಳಿ, ಚನ್ನಪ್ಪ ನರಸಾಪೂರ, ಲಕ್ಷ್ಮಣ ಮುನೇನಕೊಪ್ಪ, ಸುರೇಶಗೌಡ ತಮ್ಮನಗೌಡ್ರ, ಮಲ್ಲಿಕಾರ್ಜುನಗೌಡ ಪರ್ವತಗೌಡ್ರ, ಶಂಕರಗೌಡ ಮರಿಗೌಡ್ರ, ಕಲ್ಲಪ್ಪ ಹೂಗಾರ, ಹನುಮಂತಪ್ಪ ಕೇರಿ, ಮಹಾದೇವಗೌಡ ಯಲ್ಲಪ್ಪಗೌಡ್ರ, ಲಕ್ಷ್ಮಣ ಅವ್ವಣ್ಣವರ, ಬಸವರಾಜ ಯಾವಗಲ್ಲ, ಮಾನಂದಮ್ಮ ಹಿರೇಮಠ, ಎಲ್ಲ ಗ್ರಾಮಗಳ ರೈತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.