ADVERTISEMENT

ನರಗುಂದ | ರೈತರ ಕಷ್ಟಕ್ಕೆ ಸ್ಪಂದಿಸದ ಸರ್ಕಾರ: ರಸ್ತೆ ತಡೆದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 4:54 IST
Last Updated 14 ಸೆಪ್ಟೆಂಬರ್ 2025, 4:54 IST
ಕಳಸಾಬಂಡೂರಿ ಹೋರಾಟ ಸಮಿತಿ ಹಾಗೂ ತಾಲ್ಲೂಕು ಕೃಷಿಕ ಸಮಾಜದ ಆಶ್ರಯದಲ್ಲಿ ನರಗುಂದ ಪಟ್ಟಣದಲ್ಲಿ ಶನಿವಾರ ಹುಬ್ಬಳ್ಳಿ- ವಿಜಯಪುರ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ರೈತರು ಪರಿಹಾರಕ್ಕೆ ಆಗ್ರಹಿಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಕಳಸಾಬಂಡೂರಿ ಹೋರಾಟ ಸಮಿತಿ ಹಾಗೂ ತಾಲ್ಲೂಕು ಕೃಷಿಕ ಸಮಾಜದ ಆಶ್ರಯದಲ್ಲಿ ನರಗುಂದ ಪಟ್ಟಣದಲ್ಲಿ ಶನಿವಾರ ಹುಬ್ಬಳ್ಳಿ- ವಿಜಯಪುರ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ರೈತರು ಪರಿಹಾರಕ್ಕೆ ಆಗ್ರಹಿಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.   

ನರಗುಂದ: ‘ಅತಿವೃಷ್ಟಿಯಿಂದಾಗಿ ಹೆಸರು, ಗೋವಿನಜೋಳ, ಹತ್ತಿ, ಈರುಳ್ಳಿ ಬೆಳೆಗಳು ಸಂಪೂರ್ಣ ಹಾಳಾಗಿವೆ. ಪರಿಹಾರ ನೀಡುವಂತೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಸರ್ಕಾರ ರೈತರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ’ ಎಂದು ಕಳಸಾಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಆಕ್ರೋಶ ಹೊರಹಾಕಿದರು.

ಬೆಳೆಹಾನಿ ಸಮೀಕ್ಷೆ ನಡೆಸಿ ವಾರ ಕಳೆದರೂ ಪರಿಹಾರ ನೀಡಿಲ್ಲ ಎಂದು ಆರೋಪಿಸಿ ಕಳಸಾಬಂಡೂರಿ ಹೋರಾಟ ಸಮಿತಿ ಹಾಗೂ ತಾಲ್ಲೂಕು ಕೃಷಿಕ ಸಮಾಜದ ಆಶ್ರಯದಲ್ಲಿ ಪಟ್ಟಣದ ಶಿವಾಜಿ ವೃತ್ತದಲ್ಲಿ ಶನಿವಾರ ಹುಬ್ಬಳ್ಳಿ- ವಿಜಯಪುರ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಮಾತನಾಡಿದರು.

‘ಸರ್ಕಾರ ಯೂರಿಯಾ ಗೊಬ್ಬರದ ದಾಸ್ತಾನನ್ನು ಸಕಾಲಿಕವಾಗಿ ಮಾಡಲಾರದೇ ಗೋವಿನಜೋಳ ಬೆಳೆ ಹಾಳಾಯಿತು. ರೈತರಿಗೆ ನಷ್ಟ ಉಂಟಾಯಿತು. ಎಲ್ಲ ಬೆಳೆಗಳ ನಷ್ಟಕ್ಕೆ ಸರ್ಕಾರವೇ ನೇರ ಹೊಣೆಯಾಗಿದೆ’ ಎಂದು ಆರೋಪ ಮಾಡಿದರು.

‘ಹೆಸರು ಇಳುವರಿ ತುಂಬ ಕಡಿಮೆಯಾಗಿದೆ. ಬೆಲೆ ಕುಸಿದಿರುವ ಕಾರಣ ಅದನ್ನು ಮಾರಲಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಶೀಘ್ರವಾಗಿ ಖರೀದಿ ಕೇಂದ್ರ ಪ್ರಾರಂಭಿಸಬೇಕು. ಎಲ್ಲ ರೈತರ ಹೆಸರು ಕಾಳನ್ನು ಕಡ್ಡಾಯವಾಗಿ ಖರೀದಿಸಬೇಕು’ ಎಂದು ಒತ್ತಾಯಿಸಿದರು.

‘ಬೆಳೆ ನಷ್ಟ ಪರಿಹಾರ ವಿತರಣೆಗೆ ಸರ್ಕಾರ ಶೀಘ್ರ ಕ್ರಮವಹಿಸಬೇಕು. ಪ್ರತಿ ಎಕರೆಗೆ ₹25 ಸಾವಿರ ಪರಿಹಾರ ನೀಡಬೇಕು. ಇಲ್ಲವಾದರೆ ಅಹೋರಾತ್ರಿ ಧರಣಿ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ಕಳಸಾಬಂಡೂರಿ ಹೋರಾಟ ಸಮಿತಿ ಹಾಗೂ ತಾಲ್ಲೂಕು ಕೃಷಿಕ ಸಮಾಜದ ಸದಸ್ಯರು, ವಿವಿಧ ಗ್ರಾಮಗಳ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.