
ನರಗುಂದ: ಬೆಳೆಹಾನಿ ಪರಿಹಾರದ ಪಟ್ಟಿಯಲ್ಲಿ ಹೆಸರು ಇಲ್ಲದ ಕಾರಣಕ್ಕೆ ಮನನೊಂದ ತಾಲ್ಲೂಕಿನ ಬೆಳ್ಳೇರಿ ಗ್ರಾಮದ ರೈತ ಸಿದ್ದನಗೌಡ ಹಿರೇಗೌಡ್ರ ಕೊಣ್ಣೂರಿನ ನಾಡಕಚೇರಿಯ ಕಂದಾಯ ನಿರೀಕ್ಷಕರೇ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಬುಧವಾರ ನಡೆದಿದೆ.
ಬೆಳ್ಳೇರಿ ಗ್ರಾಮದ 65 ವರ್ಷದ ರೈತ ಸಿದ್ದನಗೌಡ ಹಿರೇಗೌಡ್ರ ಮಂಗಳವಾರ ನಾಡ ಕಚೇರಿಗೆ ಬಂದು ಪರಿಹಾರ ಸಿಕ್ಕವರ ಪಟ್ಟಿ ಪರಿಶೀಲಿಸಿದ್ದರು. ಅದರಲ್ಲಿ ಅವರ ಹೆಸರು ಇಲ್ಲದ ಕಾರಣಕ್ಕೆ ವಾಪಸ್ ತೆರಳಿದ್ದರು. ಬುಧವಾರ ಮಧ್ಯಾಹ್ನ 1.30ಕ್ಕೆ ಕೊಣ್ಣೂರ ನಾಡಕಚೇರಿಗೆ ಬಂದಿದ್ದ ಅವರು, ‘ಬೆಳೆನಷ್ಟ ಪರಿಹಾರದ ಪಟ್ಟಿಯಲ್ಲಿ ನನ್ನ ಹೆಸರು ಏಕಿಲ್ಲ?’ ಎಂದು ಗ್ರಾಮ ಲೆಕ್ಕಾಧಿಕಾರಿ ಬಳಿ ಮತ್ತೇ ವಿಚಾರಿಸಿದ್ದಾರೆ.
ಆಗ, ಗ್ರಾಮ ಆಡಳಿತಾಧಿಕಾರಿ ನೀರಜ್ ಹಾಗೂ ಕಂದಾಯ ನಿರೀಕ್ಷಕ ಕನೋಜ ಅವರು ಎರಡನೇ ಪಟ್ಟಿಯಲ್ಲಿ ಹೆಸರು ಬರಬಹುದು ಎಂದು ತಿಳಿಸಿದ್ದಾರೆ. ಇದರಿಂದ ನಿರಾಶೆಗೊಂಡ ಸಿದ್ದನಗೌಡ ನಾಡ ಕಚೇರಿಯಲ್ಲಿಯೇ ನ್ಯಾನೋ ಯೂರಿಯಾ ಔಷಧ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನೆಯಿಂದ ಆತಂಕಗೊಂಡ ಕಂದಾಯ ನಿರೀಕ್ಷಕ ಎನ್.ಬಿ.ಕನೋಜ ಹಾಗೂ ಗ್ರಾಮ ಆಡಳಿತಾಧಿಕಾರಿ ನೀರಜ್ ದೊಡ್ಡಮನಿ ತಕ್ಷಣವೇ ರೈತ ಸಿದ್ದನಗೌಡ ಅವರನ್ನು ನರಗುಂದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ದಾಖಲಿಸಲಾಗಿದೆ.
2 ಎಕರೆ 38 ಗುಂಟೆ ಜಮೀನು ಹೊಂದಿರುವ ರೈತ ಸಿದ್ದನಗೌಡ್ರ ಅವರು ಹೊಲದಲ್ಲಿ ಈರುಳ್ಳಿ ಬೆಳೆದಿದ್ದರು. ಎಫ್‌ಐಡಿ ಕೂಡ ಮಾಡಿಸಿದ್ದರು. ನಿಯಮಾನುಸಾರ ಎಲ್ಲವೂ ಸರಿ ಇದ್ದರೂ ಪರಿಹಾರ ಸಿಗಲಿಲ್ಲ ಎಂದು ಮನನೊಂದು ಆತ್ಮಹತ್ಯೆ ಪ್ರಯತ್ನಿಸಿದ್ದಾರೆ.
ವಿಷಯ ತಿಳಿದ ತಹಶೀಲ್ದಾರ್ ಶ್ರೀಶೈಲ ತಳವಾರ, ಡಿವೈಎಸ್.ಪಿ ಪ್ರಭುಗೌಡ ಕಿರೇದಳ್ಳಿ ಹಾಗೂ ರೈತ ಮುಖಂಡರು ತಾಲ್ಲೂಕು ಆಸ್ಪತ್ರೆಗೆ ಭೇಟಿ ರೈತನ ಆರೋಗ್ಯ ವಿಚಾರಿಸಿದರು.
‘ಇಬ್ಬರು ಮಕ್ಕಳನ್ನು ಹೊಂದಿರುವ ರೈತ ಕೃಷಿ ಸಲುವಾಗಿ ಐದಾರು ಲಕ್ಷ ಸಾಲ ಮಾಡಿಕೊಂಡಿದ್ದಾನೆ. ಮುಂಗಾರು ಬೆಳೆ ಎಲ್ಲವೂ ಹಾನಿಯಾಗಿದೆ. ಪರಿಹಾರ ಬರುವ ಆಸೆ ಇಟ್ಟುಕೊಂಡು ಕುಳಿತ ರೈತನಿಗೆ ಪಟ್ಟಿಯಲ್ಲಿ ಹೆಸರೇ ಇಲ್ಲವೆಂದರೆ ಪರಿಸ್ಥಿತಿ ಏನಾಗಬೇಕು. ಬೆಳೆನಷ್ಟ ಪರಿಹಾರ ನೀಡುವಲ್ಲಿ ಸರ್ಕಾರ ವಿಳಂಬ ಮಾಡುತ್ತಿರುವುದಕ್ಕೆ ಇಂತಹ ಘಟನೆಗಳು ಸಂಭವಿಸುತ್ತಿವೆ. ಅತಿವೃಷ್ಟಿಯಿಂದ ಮುಂಗಾರು ಬೆಳೆಗಳು ಸಂಪೂರ್ಣ ನಷ್ಟವಾಗಿವೆ. ಹೀಗಿರುವಾಗ ಸಮೀಕ್ಷೆ ಮಾಡುವ ಅವಶ್ಯಕತೆ ಏನಿದೆ? ಸಾಮೂಹಿಕವಾಗಿ ಎಲ್ಲ ರೈತರಿಗೂ ಪರಿಹಾರ ನೀಡಬೇಕು’ ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಎಸ್.ಪಾಟೀಲ ಆಗ್ರಹಿಸಿದ್ದಾರೆ.
ಬೆಳ್ಳೇರಿ ರೈತ ಸಿದ್ದನಗೌಡ ಹಿರೇಗೌಡ್ರ ಕಚೇರಿಗೆ ಬಂದು ಬೆಳೆಹಾನಿ ಪರಿಹಾರದ ಪಟ್ಟಿಯಲ್ಲಿ ಹೆಸರು ಇರದೇ ಇರುವ ಬಗ್ಗೆ ವಿಚಾರಿಸಿದ್ದರು. ಆದರೆ ಬುಧವಾರ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದು ವಿಷಾದ ತರಿಸಿದೆಎನ್.ಬಿ.ಕನೋಜ ಕಂದಾಯ ನಿರೀಕ್ಷಕ
ಹೋರಾಟದ ಎಚ್ಚರಿಕೆ
ಸರ್ಕಾರ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಅನೇಕ ರೈತರ ಹೆಸರು ಇಲ್ಲ. ಈ ಬಗ್ಗೆ ತಹಶೀಲ್ದಾರ್ ಅವರನ್ನು ವಿಚಾರಿಸಿದರೇ ಮೊದಲು ಬಾರಿ ತಾಂತ್ರಿಕ ದೋಷ ಆಗಿದೆ ಎಂದಿದ್ದರು. ನಂತರ ಪರಿಹಾರದ ಪಟ್ಟಿಯಲ್ಲಿ ಹೆಸರಿಲ್ಲವೆಂದ ಮೇಲೆ ಪರಿಹಾರ ಸಿಗುವುದು ಅನುಮಾನ ಎಂದಿದ್ದಾರೆ. ಜಿಲ್ಲಾ ಉಸ್ತುವಾರಿ ಮಂತ್ರಿ ನ.2ರಂದು ಪರಿಹಾರ ನೀಡುತ್ತೇವೆ ಎಂದಿದ್ದರು. ಆದರೆ ಇಲ್ಲೀವರೆಗೆ ₹1 ಬಂದಿಲ್ಲ. ಸರ್ಕಾರ ವಿಳಂಬ ಮಾಡಿದಷ್ಟು ಸಮಸ್ಯೆಗಳು ಹೆಚ್ಚಾಗುತ್ತಿವೆ. ಹೀಗೆ ಮುಂದುವರಿದರೆ ಸರ್ಕಾರದ ವಿರುದ್ದ ಹೋರಾಟ ಅನಿವಾರ್ಯವಾಗಲಿದೆ ಎಂದು ರೈತ ಮುಖಂಡರು ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.