ADVERTISEMENT

ರೈತರ ಸಹನೆಯ ಕಟ್ಟೆ ಒಡೆಯುವ ಮುನ್ನ ನೆರವಿಗೆ ಧಾವಿಸಿ: ವೆಂಕನಗೌಡ ಆರ್.

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 4:37 IST
Last Updated 8 ನವೆಂಬರ್ 2025, 4:37 IST
ವೆಂಕನಗೌಡ ಆರ್. ಗೋವಿಂದಗೌಡ್ರ
ವೆಂಕನಗೌಡ ಆರ್. ಗೋವಿಂದಗೌಡ್ರ   

ಗದಗ: ‘ರೈತರನ್ನು ಮೂರನೇ ದರ್ಜೆಯ ಪ್ರಜೆಯನ್ನಾಗಿ ಕಾಣುತ್ತಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ ರೈತರ ಬಗ್ಗೆ ಬೆಳೆಸಿಕೊಂಡಿರುವ ಅಸಡ್ಡೆಯನ್ನು ಬಿಡಬೇಕು. ರೈತರ ಸಹನೆಯ ಕಟ್ಟೆ ಒಡೆಯುವ ಮುನ್ನ ಅವರ ನೆರವಿಗೆ ಧಾವಿಸಬೇಕು’ ಎಂದು ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಆರ್. ಗೋವಿಂದಗೌಡ್ರ ಆಗ್ರಹಿಸಿದ್ದಾರೆ.

‘ಕಬ್ಬು ಬೆಳೆದಿರುವ ರೈತರು ಬೀದಿಗಿಳಿದು ಏಳು ದಿನಗಳಾದರೂ ಸರ್ಕಾರಕ್ಕೆ ಇದರ ಗಂಭೀರತೆ ಅರಿವಿಗೆ ಬಾರದಿರುವುದು ನೋವಿನ ಸಂಗತಿ. ವಿರೋಧ ಪಕ್ಷದಲ್ಲಿದ್ದಾಗ ಇದೇ ಸಿದ್ದರಾಮಯ್ಯನವರು ಎಫ್‌ಆರ್‌ಪಿ ಘೋಷಣೆ ಮಾಡುವಂತೆ ಆಗ್ರಹಿಸಿದ್ದನ್ನು ಮರೆಯಬಾರದು’ ಎಂದು ತಿಳಿಸಿದ್ದಾರೆ.

‘ರಾಜಕೀಯ ಮೇಲಾಟದಲ್ಲಿ ಕಾಲ ಕಳೆಯುತ್ತಿರುವ ಕಾಂಗ್ರೆಸ್ ಸರ್ಕಾರದ ಮಂತ್ರಿಗಳು ಹಾಗೂ ಶಾಸಕರು ರೈತರು ಕಷ್ಟದಲ್ಲಿದ್ದರೂ ಈ ಬಗ್ಗೆ ಚಕಾರ ಎತ್ತದಿರುವುದು ಅವರಿಗೆ ರೈತರಪರ ಕಾಳಜಿ ಎಷ್ಟಿದೆ ಎಂಬುದನ್ನು ತೋರಿಸುತ್ತದೆ’ ಎಂದು ಹೇಳಿದ್ದಾರೆ.

ADVERTISEMENT

‘ಅತಿವೃಷ್ಟಿಯಿಂದಾಗಿ ಯಾವುದೇ ಬೆಳೆಗಳು ಕೈಗೆ ಸಿಗದೆ ರೈತ ಸಮುದಾಯವು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಆದರೆ, ಇದುವರೆಗೂ ರೈತರಿಗೆ ಬಿಡಿಗಾಸಿನ ಪರಿಹಾರ ಸಿಕ್ಕಿಲ್ಲ. ರೈತರಿಗೆ ಇದುವರೆಗೂ ತಲುಪಿರುವುದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಪರಿಹಾರದ ಹಣ ಮಾತ್ರ. ರಾಜ್ಯ ಸರ್ಕಾರದ ತನ್ನ ಪಾಲಿನ ಹಣವನ್ನು ಇನ್ನೂ ಬಿಡುಗಡೆ ಮಾಡಿಲ್ಲ. ರಾಜ್ಯದ ರೈತರಿಗೆ ಪರಿಹಾರ ನೀಡದಷ್ಟು ದರಿದ್ರತನದಲ್ಲಿ ಕಾಂಗ್ರೆಸ್‌ ಸರ್ಕಾರ ಮುಳುಗಿದೆ’ ಎಂದು ಟೀಕಿಸಿದರು.

‘ಕಾಂಗ್ರೆಸ್‌ ನಾಯಕರು ಕುರ್ಚಿ ಉಳಿಸಿಕೊಳ್ಳಲು ಸಮಾವೇಶ ಹಾಗೂ ಔತಣಕೂಟಗಳನ್ನು ಆಯೋಜಿಸುವುದರಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಇತಿಹಾಸ ಪುಟಗಳನ್ನು ನೋಡಿದರೆ ರೈತರ ಹೋರಾಟಕ್ಕೆ ಸರ್ಕಾರವೇ ಪತನವಾದ ಉದಾಹರಣೆಗಳಿವೆ. ಇದನ್ನು ಅರಿತು ರೈತರಿಗೆ ಸಿಗಬೇಕಾದ ನ್ಯಾಯಯುತ ಬೆಂಬಲ ಬೆಲೆ ಹಾಗೂ ಪರಿಹಾರವನ್ನು ತಕ್ಷಣವೇ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.