ಮುಂಡರಗಿ: ಕಬ್ಬಿನ ದರ ನಿಗದಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಳ್ಳುವ ಉದ್ದೇಶದಿಂದ ತಾಲ್ಲೂಕಿನ ವಿವಿಧ ರೈತ ಸಂಘಟನೆಗಳ ಮುಖಂಡರು ಸೋಮವಾರ ಪಟ್ಟಣದಲ್ಲಿ ಪೂರ್ವಭಾವಿ ಸಭೆ ನಡೆಸಿದರು.
ಸಭೆಯ ನಂತರ ತಹಶೀಲ್ದಾರ್ ಕಚೇರಿಗೆ ತೆರಳಿ ಈ ಕುರಿತು ತಹಶೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ಅವರಿಗೆ ಮನವಿ ಸಲ್ಲಿಸಿದರು.
ತಾಲ್ಲೂಕಿನ ಗಂಗಾಪುರ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಜಯನಗರ ಶುಗರ್ಸ್ ಸಕ್ಕರೆ ಕಾರ್ಖಾನೆಯವರು ಕಡಿಮೆ ಬೆಲೆಗೆ ರೈತರಿಂದ ಕಬ್ಬು ಖರೀದಿಸುತ್ತಿದ್ದು, ದರ ನಿಗದಿಯಲ್ಲಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ರೈತರು ಆರೋಪಿಸಿದರು.
ಪ್ರಸ್ತುತ ವರ್ಷ ಕೇಂದ್ರ ಸರ್ಕಾರವು ಪ್ರತಿ ಟನ್ ಕಬ್ಬಿಗೆ ₹3,182 ದರ ನಿಗದಿಗೊಳೊಸಿದೆ. ಆದರೆ ಇಲ್ಲಿಯ ಸಕ್ಕರೆ ಕಾರ್ಖಾನೆಯವರು ಕೇವಲ ₹2,550 ಟನ್ ಕಬ್ಬು ಖರೀಧಿಸುವುದಾಗಿ ತಿಳಿಸಿದ್ದಾರೆ. ಇದರಿಂದ ರೈತರಿಗೆ ಭಾರಿ ನಷ್ಟವಾಗುತ್ತಿದ್ದು, ಇಲ್ಲಿಯ ಸಕ್ಕರೆ ಕಾರ್ಖಾನೆಯವರು ಕೇಂದ್ರ ಸರ್ಕಾರ ನಿಗದಿಗೊಳಿಸಿರುವ ದರಕ್ಕೆ ಕಬ್ಬು ಖರೀಧಿಸಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರ ನಿಗದಿಗೊಳಿಸಿರುವ ಎಫ್.ಆರ್.ಪಿ. ದರದಂತೆ ಕಬ್ಬು ಕಟಾವು, ಸಾಗಣೆ ಮೊದಲಾದ ವೆಚ್ಚಗಳನ್ನು ಕಡಿತಗೊಳಿಸಿಕೊಂಡು ರೈತರ ಪ್ರತಿ ಟನ್ ಕಬ್ಬಿಗೆ ಕನಿಷ್ಟ ₹2,900 ನೀಡಬೇಕು. ಆ ಮೂಲಕ ರೈತರಿಗೆ ಉಂಟಾಗುವ ಹಾನಿಯ ಪ್ರಮಾಣವನ್ನು ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದರು.
ಸಾವಿರಾರು ರೂಪಾಯಿ ಖರ್ಚು ಮಾಡಿ ರೈತರು ಕಬ್ಬು ನಾಟಿ ಮಾಡಿ, ಒಂದು ವರ್ಷಕಾಲ ಬೆಳೆಯನ್ನು ಜೋಪಾನ ಮಾಡಬೇಕು. ಕೂಲಿ ಕಾರ್ಮಿಕರ ವೇತನ ಹಾಗೂ ಮತ್ತಿತರ ಖರ್ಚು ವೆಚ್ಚಗಳು ವಿಪರೀತವಾಗಿದ್ದು, ರೈತರು ಕಬ್ಬು ಬೆಳೆಯಲು ಹರಸಾಹಸ ಪಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರಿಗೆ ಸೂಕ್ತ ಬೆಲೆ ದೊರೆಯದಿದ್ದರೆ ರೈತರು ಭಾರಿ ನಷ್ಟ ಅನುಭವಿಸಬೇಕಾಗುತ್ತದೆ ಎಂದು ತಿಳಿಸಿದರು.
ಮೆಕ್ಕೆಜೋಳ, ಸೂರ್ಯಕಾಂತಿ, ಜೋಳ, ಶೇಂಗಾ ಮೊದಲಾದವುಗಳು ನಾಲ್ಕು ತಿಂಗಳಿಗೆ ಕಟಾವಿಗೆ ಬರುತ್ತವೆ. ಒಂದು ಕ್ವಿಂಟಲ್ ಮೆಕ್ಕೆಜೋಳ ಮಾರಿದರೆ ₹2,200-₹2400 ದೊರೆಯುತ್ತದೆ. ಆದರೆ ಸತತವಾಗಿ 12ತಿಂಗಳು ಬೆಳೆಯುವ ಟನ್ ಕಬ್ಬಿಗೆ ಕೇವಲ ₹2,550 ದೊರೆಯುವುದಾದರೆ ಕಷ್ಟಪಟ್ಟು ಕಬ್ಬನ್ನು ಏಕೆ ಬೆಳೆಯಬೇಕು ಎಂದು ರೈತರು ಪ್ರಶ್ನಿಸಿದರು.
ಸಕ್ಕರೆ ಕಾರ್ಖಾನೆಯವರು ಕೇಂದ್ರ ಸರ್ಕಾರ ನಿಗದಿಗೊಳಿಸಿರುವ ಕಬ್ಬಿನ ದರವನ್ನು ನೀಡದಿದ್ದರೆ ಅ.28ರಂದು ತಾಲ್ಲೂಕಿನ ರೈತರೆಲ್ಲ ಒಂದಾಗಿ ಸಕ್ಕರೆ ಕಾರ್ಖಾನೆಯ ಮುಂದೆ ಹೋರಾಟ ಕೈಗೊಳ್ಳುತ್ತೇವೆ ಎಂದು ರೈತರು ಎಚ್ಚರಿಸಿದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯದರ್ಶಿ ವೀರನಗೌಡ ಪಾಟೀಲ, ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರವಿ ಕೊಳಲ, ಗೌರವಾಧ್ಯಕ್ಷ ಪ್ರಕಾಶ ಸಜ್ಜನರ, ಉಪಾಧ್ಯಕ್ಷ ಮಾಬುಸಾಬ ಬಳ್ಳಾರಿ, ಸಂತೋಷ ಹಳ್ಳಿ, ಕೋಟೆಪ್ಪ ಚೌಡಕಿ, ವಿಶ್ವನಾಥ ಶಿರಹಟ್ಟಿ, ಹನುಮಂತ ಚೂರಿ, ಈರಣ್ಣ ಮಲ್ಲಾಡದ, ಈರಪ್ಪ ಮಡಿವಾಳರ, ಮಲ್ಲಿಕಾರ್ಜುನಯ್ಯ ಕಲ್ಮಠ, ಮಹಾಂತಯ್ಯ ಡಂಬಳಮಠ, ಮಹಾಂತೇಶ ಬಸಿಗಲ್ಲ, ನಿಂಗಪ್ಪ ತೋಟಪ್ಪನವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.