ADVERTISEMENT

ಸೂಕ್ತ ಬೆಲೆಗೆ ಆಗ್ರಹ: ಪ್ರತಿಭಟನೆಯ ಎಚ್ಚರಿಕೆ

ದರ ಕುಸಿತ ರೈತರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 7 ಮೇ 2021, 4:03 IST
Last Updated 7 ಮೇ 2021, 4:03 IST
ಲಕ್ಷ್ಮೇಶ್ವರ ಎಪಿಎಂಸಿ ಅಧ್ಯಕ್ಷ ನೀಲಪ್ಪ ಹತ್ತಿ ಅವರೊಂದಿಗೆ ರೈತರು ಚರ್ಚೆ ನಡೆಸಿದರು
ಲಕ್ಷ್ಮೇಶ್ವರ ಎಪಿಎಂಸಿ ಅಧ್ಯಕ್ಷ ನೀಲಪ್ಪ ಹತ್ತಿ ಅವರೊಂದಿಗೆ ರೈತರು ಚರ್ಚೆ ನಡೆಸಿದರು   

ಲಕ್ಷ್ಮೇಶ್ವರ: ಒಂದೇ ದಿನದಲ್ಲಿ ಶೇಂಗಾ ಬೆಲೆ ಪಾತಾಳಕ್ಕೆ ಕುಸಿತ ಆಗಿರುವುದನ್ನು ಖಂಡಿಸಿ ರೈತರು ಗುರುವಾರ ಇಲ್ಲಿನ ಎಪಿಎಂಸಿಗೆ ದೌಡಾಯಿಸಿದರು, ಕಷ್ಟಪಟ್ಟು ಬೆಳೆದ ಶೇಂಗಾಕ್ಕೆ ಸೂಕ್ತ ಬೆಲೆ ಕೊಡಿಸಬೇಕು ಎಂದು ಪಟ್ಟು ಹಿಡಿದರು.

ಎಪಿಎಂಸಿ ಅಧ್ಯಕ್ಷ ನೀಲಪ್ಪ ಹತ್ತಿ ರೈತರ ಸಮಸ್ಯೆಯನ್ನು ಆಲಿಸಿದರು. ವ್ಯಾಪಾರಸ್ಥರ ಸಂಘದ ಕಾರ್ಯದರ್ಶಿ ಎಸ್.ಕೆ. ಕಾಳಪ್ಪನವರ ಅವರೊಂದಿಗೆ ಸಮಸ್ಯೆ ಕುರಿತು ಚರ್ಚಿಸಿದರು.

‘ಬುಧವಾರ ಐದೂವರೆಯಿಂದ ಆರು ಸಾವಿರ ರೂಪಾಯಿವರೆಗೆ ಟೆಂಡರ್ ಆಗಿದೆ. ಆದರೆ ಗುರುವಾರ ನಾಲ್ಕೂವರೆ ಸಾವಿರದಿಂದ ಐದು ಸಾವಿರ ಆಗಿದೆ. ಕ್ವಿಂಟಲ್‍ಗೆ ಒಂದೊಂದು ಸಾವಿರ ರೂಪಾಯಿ ಕಡಿಮೆ ಆದರೆ ರೈತರು ಬದುಕುವುದು ಹೇಗೆ’ ಎಂದು ಹಾವೇರಿ ಜಿಲ್ಲೆ ಕೊಣತಂಬಿಗಿಯ ರೈತರಾದ ಮರಿಯಪ್ಪ ಬಣಕಾರ, ಪ್ರವೀಣ ಹಾವರಕೇರಿ, ಹೊನ್ನಿಕೊಪ್ಪ ಗ್ರಾಮದ ತಿರಕನಗೌಡ ನಡುವಿನಮನಿ ಪ್ರಶ್ನಿಸಿದರರು.

ADVERTISEMENT

ಬೆಲೆ ಏರಿಕೆಯಾಗದಿದ್ದರೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.

ವ್ಯಾಪಾರಸ್ಥರ ಸಂಘದ ಕಾರ್ಯದರ್ಶಿ ಎಸ್.ಕೆ. ಕಾಳಪ್ಪನವರ ಮಾತನಾಡಿ, ‘ಕೊರೊನಾದಿಂದಾಗಿ ಮಹಾರಾಷ್ಟ್ರದ ಮಾರುಕಟ್ಟೆ ಈಗಾಗಲೇ ಸಂಪೂರ್ಣ ಬಂದ್ ಆಗಿದ್ದು ತಾಲ್ಲೂಕಿನ ಶೇಂಗಾ ತಮಿಳುನಾಡಿಗೆ ಹೋಗುತ್ತಿತ್ತು. ಆದರೆ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದರಿಂದ ಅಲ್ಲಿನ ಮಾರುಕಟ್ಟೆಯೂ ಬಂದ್ ಆಗಿದೆ. ಹೀಗಾಗಿ ಖರೀದಿಸಿದ ಶೇಂಗಾ ಏನು ಮಾಡಬೇಕು ಎಂಬುದೇ ತಿಳಿಯುತ್ತಿಲ್ಲ. ಅಲ್ಲದೆ ಗುರುವಾರ ಸರಿಯಾದ ಮಾಲು ಬಂದಿರಲಿಲ್ಲ. ಹೀಗಾಗಿ ದರ ಕಡಿಮೆ ಆಗಿದೆ’ ಎಂದು ತಿಳಿಸಿದರು. ಆದರೆ ಇದಕ್ಕೆ ಒಪ್ಪದ ರೈತರು ದರ ಹೆಚ್ಚಿಸಬೇಕು ಎಂದು ಹೇಳಿದರು.

ನಂತರ ಎಪಿಎಂಸಿ ಅಧ್ಯಕ್ಷರು ಸ್ವಲ್ಪ ಧಾರಣಿ ಹೆಚ್ಚು ಮಾಡಿ ಶೇಂಗಾ ಖರೀದಿ ಮಾಡಲು ವ್ಯಾಪಾರಸ್ಥರಲ್ಲಿ ಮನವಿ ಮಾಡಿದರು. ಬಸಣ್ಣ ಮಹಾಂತಶೆಟ್ಟರ, ದೇವೇಂದ್ರಪ್ಪ ಮತ್ತೂರ, ನಿಂಗನಗೌಡ ನಡುವಿನಮನಿ, ಹನುಮಂತಪ್ಪ ಯಲಗಚ್ಚಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.