ಗದಗ: ‘ರೈತರು ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಮಳೆ, ಗಾಳಿ, ಚಳಿ ಲೆಕ್ಕಿಸದೇ ಅಹೋರಾತ್ರಿ ಧರಣಿಗೆ ಕುಳಿತಿದ್ದಾರೆ. ಆದರೆ, ಜಿಲ್ಲಾಡಳಿತ ಕಣ್ಣಿದ್ದು ಕುರುಡನಂತೆ ವರ್ತಿಸುತ್ತಿದೆ. ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಸೌಜನ್ಯಕ್ಕಾದರೂ ರೈತರನ್ನು ಭೇಟಿಯಾಗದಿರುವುದು ದುರದೃಷ್ಟಕರ ಸಂಗತಿ’ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಕಿಡಿಕಾರಿದರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಉತ್ತರ ಕರ್ನಾಟಕ ಮಹಾಸಭಾ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಎಂಟು ದಿನಗಳಿಂದ ನಡೆದಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ ಮಾತನಾಡಿದರು.
‘ರೈತರು ತಲೆತಲಾಂತರಗಳಿಂದ ಅರಣ್ಯ ಜಮೀನುಗಳನ್ನು ಸಾಗುವಳಿ ಮಾಡಿಕೊಂಡು ಬದುಕು ನಡೆಸುತ್ತಿದ್ದಾರೆ. ಆದರೆ ಸರ್ಕಾರ ಹಕ್ಕುಪತ್ರ ನೀಡದೇ ರೈತರಿಗೆ ಕಿರುಕುಳ ನೀಡುತ್ತಿದೆ. ಜತೆಗೆ ನಾಗಾವಿ ಗ್ರಾಮದಲ್ಲಿನ ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್ ವಿಶ್ವವಿದ್ಯಾಲಯ ನಿರ್ಮಾಣಕ್ಕಾಗಿ ರೈತರು ಪೂರ್ವಜರ ಕಾಲದಿಂದ ಸಾಗುವಳಿ ಮಾಡುತ್ತಿದ್ದ ನೂರಾರು ಎಕರೆ ಕೃಷಿ ಭೂಮಿಯನ್ನು ಪರಿಹಾರ ನೀಡದೇ ಒಕ್ಕಲೆಬ್ಬಿಸಿರುವುದು ಖಂಡನೀಯ. ರೈತರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಕೂಡಲೇ ಕ್ರಮವಹಿಸಬೇಕು’ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಎಂ.ಎಸ್.ಕರಿಗೌಡ್ರ, ಭದ್ರೇಶ ಕುಸಲಾಪುರ, ಸಂಜೀವ ಸ್ವಾಮಿ, ಅಶೋಕ ಕರೂರು, ಶೇಷಗಿರಿ, ರೈತ ಮುಖಂಡರಾದ ಸುರೇಶ ಮಹಾರಾಜ, ಧನ್ನುರಾಮ ತಂಬೂರಿ, ಎನ್.ಟಿ. ಪೂಜಾರ, ಚಂಬಣ್ಣ ಚನ್ನಪಟ್ಟಣ, ನಾಮದೇವ, ನಿಂಗಪ್ಪ, ಚನ್ನಪ್ಪ ಭಗತ ಇದ್ದರು.
ಉಸ್ತುವಾರಿ ಸಚಿವರು ಈ ಹಿಂದೆ ಮಾತು ಕೊಟ್ಟಂತೆ ಬಡ ರೈತರ ನ್ಯಾಯಯುತ ಬೇಡಿಕೆಗಳನ್ನು ತಕ್ಷಣವೇ ಈಡೇರಿಸಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದುರವಿಕಾಂತ ಅಂಗಡಿ ಉತ್ತರ ಕರ್ನಾಟಕ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ
ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತ ಕೂಡಲೇ ಪ್ರತಿಭಟನಾನಿರತ ರೈತರ ಬೇಡಿಕೆಗಳನ್ನು ಈಡೇರಿಸಬೇಕು. ಈ ಸಂಬಂಧ ಹೋರಾಟಗಾರರ ಜತೆಗೂಡಿ ಖುದ್ದಾಗಿ ಡಿಸಿ ಭೇಟಿ ಮಾಡಿ ಚರ್ಚಿಸುವೆಎಸ್.ವಿ.ಸಂಕನೂರ ವಿಧಾನ ಪರಿಷತ್ ಸದಸ್ಯ
ಗೋವುಗಳನ್ನು ಕಟ್ಟಿ ಆಕ್ರೋಶ
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಜಿಲ್ಲೆಯ ರೈತರು ಅಹೋರಾತ್ರಿ ಧರಣಿ ನಡೆಸುತ್ತಿದ್ದು ಮಂಗಳವಾರ ಜಿಲ್ಲಾಡಳಿತದ ಎದುರು ಗೋವುಗಳನ್ನು ಕಟ್ಟಿ ಮೇವು ಹಾಕುವುದರೊಂದಿಗೆ ಜಿಲ್ಲಾಡಳಿದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ರೈತರ ಬಳಿಯಿರುವ ಎಲ್ಲಾ ಜಾನುವಾರುಗಳನ್ನು ಜಿಲ್ಲಾಡಳಿತ ಕಚೇರಿ ಎದುರು ಕಟ್ಟುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.