ರೋಣ: ‘ರೈತರ ಹಿಂಗಾರು ಬಿತ್ತನೆ ಆರಂಭವಾಗಿದ್ದು, ರಸಗೊಬ್ಬರ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಭಾನುವಾರ ಹಿಂಗಾರು ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ‘ಬೆಂಬಲ ಬೆಲೆ ಯೋಜನೆಯಡಿ ಹೆಸರು ಖರೀದಿ ಕೇಂದ್ರ ತೆರೆಯಲು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಅತಿವೃಷ್ಟಿಯಿಂದ ಹಾನಿಯಾದ ಬೆಳೆಗಳಿಗೆ ಕೇಂದ್ರದ ಎನ್‌ಡಿಆರ್‌ಎಫ್ ಹಾಗೂ ರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡಲಿದೆ’ ಎಂದರು.
ರೋಣ ಮತಕ್ಷೇತ್ರದಲ್ಲಿ ಈಗಾಗಲೇ ಹಲವು ರೈತ ಪರ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ₹2.25 ಕೋಟಿ ವೆಚ್ಚದಲ್ಲಿ ರೈತ ಸಂಪರ್ಕ ಕೇಂದ್ರ ಮತ್ತು ಉಗ್ರಾಣ, 1,500 ಟನ್ ಸಾಮರ್ಥ್ಯದ ಶೀತಲೀಕರಣ ಘಟಕ ನಿರ್ಮಾಣ ಪ್ರಕ್ರಿಯೆ ಶೀಘ್ರದಲ್ಲಿ ಪ್ರಾರಂಭವಾಗಲಿದೆ. 125 ಕೃಷಿಹೊಂಡಗಳಿಗೆ ಸರ್ಕಾರದಿಂದ ಮಂಜೂರಾತಿ ನೀಡಲಾಗಿದೆ’ ಎಂದರು.
ಪ್ರಭಾರಿ ಸಹಾಯಕ ಕೃಷಿ ನಿರ್ದೇಶಕ ಎಸ್.ಎಫ್. ತಹಶೀಲ್ದಾರ್ ಮಾತನಾಡಿ, ‘ರೋಣ ತಾಲ್ಲೂಕಿನಲ್ಲಿ ಹಿಂಗಾರು ಬಿತ್ತನೆ 60 ಸಾವಿರ ಹೆಕ್ಟರ್ ಗುರಿ ಹೊಂದಲಾಗಿದೆ. ಅತಿವೃಷ್ಟಿಯಿಂದಾಗಿ ರೋಣ ತಾಲ್ಲೂಕಿನಲ್ಲಿ 27.500 ಹೆಕ್ಟರ್, ಗಜೇಂದ್ರಗಡ ತಾಲ್ಲೂಕಿನ 13.700 ಹೆಕ್ಟರ್ ಬೆಳೆ ಹಾನಿಯಾಗಿದೆ. ಹೆಚ್ಚುವರಿ 950 ಹೆಕ್ಟರ್ ಬಿತ್ತನೆ ಭೂಮಿಯನ್ನು ಬೆಳೆಹಾನಿ ಪಟ್ಟಿಗೆ ಸೇರಿಸಲಾಗಿದೆ’ ಎಂದರು.
ಲಿಂಗೇಶ್ವರ ಮಠದ ಬಸವರಾಜ ಸ್ವಾಮೀಜಿ, ಕೆಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಐ.ಎಸ್. ಪಾಟೀಲ, ಎಪಿಎಂಸಿ ಮಾಜಿ ಅಧ್ಯಕ್ಷ ಪರಶುರಾಮ ಅಳಗವಾಡಿ, ಬಸವರಾಜ ನವಲಗುಂದ, ಯೂಸುಫ್ ಇಟಗಿ, ಸಂಗನಬಸಪ್ಪ ಪರಡ್ಡಿ, ಶಿವನಗೌಡ ಪಾಟೀಲ, ಮಹೇಶ್ವರಪ್ಪ ದಾನರೆಡ್ಡಿ, ವೀರಣ್ಣ ಶೆಟ್ಟರ, ಶಂಕರ ಕಳಿಗಣ್ಣವರ, ರಮೇಶ ಪಲ್ಲೆದ, ಪ್ರಮೋದ ಕುಲಕರ್ಣಿ, ಮೇಘರಾಜ ಬಾವಿ, ಮಲ್ಲಣ್ಣ ಮೇಟಿ, ಮುತ್ತಣ್ಣ ಚೌಡರೆಡ್ಡಿ, ಎಚ್ಚರಗೌಡ ಗೋವಿಂದಗೌಡ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.