ADVERTISEMENT

ರೋಣ | ರಸಗೊಬ್ಬರ ಪೂರೈಕೆಯಲ್ಲಿ ರಾಜ್ಯ ಸರ್ಕಾರ ವಿಫಲ: ಬಿಜೆಪಿ ಆರೋಪ, ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 6:01 IST
Last Updated 3 ಆಗಸ್ಟ್ 2025, 6:01 IST
ರೋಣ ಪಟ್ಟಣದ ಮುಲ್ತಾನಬಾವಿ ವೃತ್ತದಲ್ಲಿ ಬಿಜೆಪಿ ವತಿಯಿಂದ ರಸ್ತೆ ತಡೆದು ರಸಗೊಬ್ಬರ ಪೂರೈಕೆಗೆ ಆಗ್ರಹಿಸಿ ಪ್ರತಿಭಟಿಸಲಾಯಿತು
ರೋಣ ಪಟ್ಟಣದ ಮುಲ್ತಾನಬಾವಿ ವೃತ್ತದಲ್ಲಿ ಬಿಜೆಪಿ ವತಿಯಿಂದ ರಸ್ತೆ ತಡೆದು ರಸಗೊಬ್ಬರ ಪೂರೈಕೆಗೆ ಆಗ್ರಹಿಸಿ ಪ್ರತಿಭಟಿಸಲಾಯಿತು   

ರೋಣ: ‘ರೈತರಿಗೆ ಸಮರ್ಪಕ ರಸಗೊಬ್ಬರ ಪೂರೈಸಲು ರಾಜ್ಯ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಭಾರತೀಯ ಜನತಾ ಪಾರ್ಟಿ ರೋಣ ಮಂಡಲ ಹಾಗೂ ರೈತ ಮೋರ್ಚಾ ವತಿಯಿಂದ ಪಟ್ಟಣದ ಸಿದ್ಧಾರೂಢ ಮಠದಿಂದ ಸಹಾಯಕ ಕೃಷಿ ನಿರ್ದೇಶಕರ ಕಚೇರಿವರೆಗೆ ಶನಿವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಬಿಜೆಪಿ ರೋಣ ಮಂಡಲದ ಅಧ್ಯಕ್ಷ ಉಮೇಶ ಮಲ್ಲಾಪುರ, ‘ಕೇಂದ್ರ ಸರ್ಕಾರ ರಾಜ್ಯದ ಕೃಷಿ ಇಲಾಖೆ ಕೇಳಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರ ಪೂರೈಕೆ ಮಾಡಿದ್ದರೂ ರೈತರಿಗೆ ರಸಗೊಬ್ಬರ ಸಮರ್ಪಕವಾಗಿ ವಿತರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಈಗಾಗಲೇ ಮುಂಗಾರು ಹಂಗಾಮಿನ ಈರುಳ್ಳಿ ಮತ್ತು ಮೆಕ್ಕೆಜೋಳ ಬೆಳೆದ ರೈತರು ಯೂರಿಯಾ ಮತ್ತು ಡಿಎಪಿ ಗೊಬ್ಬರಗಳಿಗಾಗಿ ಅಲೆದಾಡುವಂತಾಗಿದೆ’ ಎಂದು ಆರೋಪಿಸಿದರು.

ಕೇಂದ್ರ ಆಹಾರ ನಿಗಮದ ನಿರ್ದೇಶಕ ರವೀಂದ್ರನಾಥ ದಂಡಿನ, ‘ರಾಜ್ಯ ಸರ್ಕಾರ 6 ಲಕ್ಷ ಟನ್ ರಸಗೊಬ್ಬರಕ್ಕೆ ಬೇಡಿಕೆ ಸಲ್ಲಿಸಿದ್ದು, ಕೇಂದ್ರ ಸರ್ಕಾರ 8 ಲಕ್ಷ ಟನ್ ಪೂರೈಕೆ ಮಾಡಿದೆ. ಈ ಕುರಿತು ರಾಜ್ಯದ ಕೃಷಿ ಸಚಿವ ಚೆಲುವರಾಯಸ್ವಾಮಿ ಅವರೇ ಹೇಳಿಕೆ ನೀಡಿದ್ದು, ರಸಗೊಬ್ಬರ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿರುವ ಬಗ್ಗೆ ರೈತಾಪಿ ವರ್ಗದಲ್ಲಿ ಆತಂಕವಿದೆ. ಸರ್ಕಾರದ ಪ್ರಮುಖರು ಮುಖ್ಯಮಂತ್ರಿ ಹುದ್ದೆಗಾಗಿ ಕಿತ್ತಾಡದೆ ರೈತರ ಸಮಸ್ಯೆ ಬಗೆಹರಿಸುವಲ್ಲಿ ಆಸಕ್ತಿ ವಹಿಸಬೇಕು’ ಎಂದು ಹರಿಹಾಯ್ದರು.

ADVERTISEMENT

ಡಂಬಳ ಮಂಡಲ ಅಧ್ಯಕ್ಷ ಅಂದಪ್ಪ ಹಾರೋಗೇರಿ, ಬಿಜೆಪಿ ರೋಣ ಮಂಡಲದ ಮಾಜಿ ಅಧ್ಯಕ್ಷ ಮುತ್ತಣ್ಣ ಕಡಗದ, ಮುಖಂಡರಾದ ಶಿವಾನಂದ ಜಿಡ್ಡಿಬಾಗಿಲ, ನೀಲಪ್ಪ ಹವಳಪ್ಪನವರ, ಆರ್.ಕೆ. ಚೌವಾಣ, ಶಿವಾನಂದ ಮಠದ, ಕುಮಾರ ಪಲ್ಲೇದ, ಬಸವರಾಜ ರಂಗನಗೌಡ್ರ, ಹುಲ್ಲಪ್ಪ ಕೆಂಗಾರ, ಸಂತೋಷ ಕಡಿವಾಲ, ಇಂದಿರಾ ತೇಲಿ, ಲಲಿತಾ ಮಾರನಬಸರಿ, ಸಲೀಂ ಕಲಾದಗಿ, ಮಲ್ಲು ಮಾದರ, ರಮೇಶ ವಕ್ಕರ, ಭೀಮಸಿ ಮಾದರ, ಶರಣಪ್ಪ ಪ್ಯಾಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.